ಮದುವೆಯಾದ ಮರುದಿನವೇ ಹೆಂಡತಿಗೆ ಕನ್ಯತ್ವ ಪರೀಕ್ಷೆ; ಫೇಲ್ ಆದವಳಿಗೆ ಗಂಡ ಮಾಡಿದ್ದೇನು?

ಈ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಅವರ ಸಂಸಾರ ಮುಂದುವರೆಯುವ ರೂಡಿ ಆ ಸಮುದಾಯದಲ್ಲಿತ್ತು. ಓರ್ವ ಯುವತಿ ಕನ್ಯತ್ವ ಪರೀಕ್ಷೆಯಲ್ಲಿ ಉತ್ತೀರ್ಣಳಾದಳು. ಆದರೆ, ಇನ್ನೋರ್ವ ಯುವತಿ ಪಾಸ್ ಆಗಲಿಲ್ಲ.

  • TV9 Web Team
  • Published On - 15:50 PM, 10 Apr 2021
ಮದುವೆಯಾದ ಮರುದಿನವೇ ಹೆಂಡತಿಗೆ ಕನ್ಯತ್ವ ಪರೀಕ್ಷೆ; ಫೇಲ್ ಆದವಳಿಗೆ ಗಂಡ ಮಾಡಿದ್ದೇನು?
ಸಾಂದರ್ಭಿಕ ಚಿತ್ರ

ಕೊಲ್ಲಾಪುರ: ಇಂಥಾ ಆಧುನಿಕ ಕಾಲದಲ್ಲೂ ಮಹಾರಾಷ್ಟ್ರದಲ್ಲಿ ಅಮಾನವೀಯ ಘಟನೆ ನಡೆದಿದೆ. ಹೆಣ್ಣಿನ ಕನ್ಯತ್ವ ಅಥವಾ ವರ್ಜಿನಿಟಿಯನ್ನು ಮುಂದಿಟ್ಟುಕೊಂಡು ಮದುವೆಯಾದ ಹೆಂಡತಿಯನ್ನೇ ತ್ಯಜಿಸಿ, ಬಹಿಷ್ಕಾರ ಹಾಕಿದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಘಟಿಸಿದೆ. ಸ್ವತಃ ಗಂಡನೇ ತಾನು ಮದುವೆಯವರೆಗೂ ಕನ್ಯೆಯೇ ಆಗಿದ್ದೆ ಎಂದು ಸಾಬೀತುಪಡಿಸಲು ತನ್ನ ಹೆಂಡತಿಗೆ ಹೇಳಿದ್ದಾನೆ. ಹೆಂಡತಿಯ ಕನ್ಯತ್ವ ಪರೀಕ್ಷೆ ಮಾಡಿದ ಈ ಪ್ರಕರಣ ಕೊನೆಗೂ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ.

ಹೌದು, ಇಂಥದ್ದೊಂದು ಅನಿಷ್ಟ ಪದ್ಧತಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇನ್ನೂ ಇದೆ. ಕಂಜರ್​ಭಾತ್​ ಸಮುದಾಯಕ್ಕೆ ಸೇರಿದ ಇಬ್ಬರು ಸಹೋದರಿಯರು ಇಬ್ಬರು ಸಹೋದರರನ್ನು ಮದುವೆಯಾಗಿ ಒಂದೇ ಮನೆಗೆ ಸೊಸೆಯರಾಗಿ ಹೋದರು. 2020ರ ನವೆಂಬರ್ 27ರಂದು ಅವರ ಮದುವೆಯಾಯಿತು. ಆದರೆ ಈ ಸಮುದಾಯದಲ್ಲಿ ಮದುವೆಯಾದ ನಂತರ ಮಹಿಳೆ ತನ್ನ ಕನ್ಯತ್ವ ಉಳಿಸಿಕೊಂಡಿದ್ದಾಳೋ ಇಲ್ಲವೋ ಎಂಬುದನ್ನು ಪರೀಕ್ಷಿಸುವ ಸಂಪ್ರದಾಯ ಇತ್ತು. ಈ ಸಂಪ್ರದಾಯದ ಪ್ರಕಾರ ಇಬ್ಬರು ಸಹೋದರಿಯರಿಗೂ ಕನ್ಯತ್ವ ಪರೀಕ್ಷೆ ಮಾಡಲಾಯಿತು.

ಇಬ್ಬರೂ ಸಹೋದರಿಯರೂ ತಮ್ಮ ತಮ್ಮ ಗಂಡಂದಿರ ಜತೆ ಬಿಳಿ ಬಟ್ಟೆಯ ಮೇಲೆ ಲೈಂಗಿಕ ಕ್ರಿಯೆ ಮಾಡಿದರು. ಇದೇ ಅವರ ಪಾಲಿನ ಕನ್ಯತ್ವ ಪರೀಕ್ಷೆಯಾಗಿತ್ತು. ಈ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಅವರ ಸಂಸಾರ ಮುಂದುವರೆಯುವ ರೂಡಿ ಆ ಸಮುದಾಯದಲ್ಲಿತ್ತು. ಓರ್ವ ಯುವತಿ ಕನ್ಯತ್ವ ಪರೀಕ್ಷೆಯಲ್ಲಿ ಉತ್ತೀರ್ಣಳಾದಳು. ಆದರೆ, ಇನ್ನೋರ್ವ ಯುವತಿ ಪಾಸ್ ಆಗಲಿಲ್ಲ.

ಬಿಳಿ ಬಟ್ಟೆಯ ಮೇಲೆ ತಮ್ಮ ಗಂಡಂದಿರ ಜತೆ ದೈಹಿಕವಾಗಿ ಕೂಡಿದಾಗ ಬಿಳಿ ಬಟ್ಟೆಗೆ ರಕ್ತದ ಕಲೆ ಉಂಟಾದರೆ ಆ ಯುವತಿ ಕನ್ಯತ್ವ ಉಳಿಸಿಕೊಂಡಿದ್ದಾಳೆ, ಒಂದುವೇಳೆ ರಕ್ತದ ಕಲೆ ಉಂಟಾಗದಿದ್ದರೆ ಆಕೆ ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿದ್ದಾಳೆ ಎಂದು ನಿರ್ಧರಿಸಲಾಗುತ್ತದಂತೆ. ಈ ಸಹೋದರಿಯರಲ್ಲಿ ಓರ್ವ ಯುವತಿ ಕನ್ಯತ್ವ ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ಇದೇ ಮುಂದೆ ಮದುವೆ ಮುರಿಯಲು ಕಾರಣವಾಯಿತು.

ಇದನ್ನೇ ಕಾರಣವಾಗಿಟ್ಟುಕೊಂಡು ಈ ಇಬ್ಬರು ಸಹೋದರರು ಸಹೋದರಿಯರ ಕುಟುಂಬದ ಬಳಿ 10 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟರು. ಹಣ ಕೊಡಿ, ಇಲ್ಲವೇ ನಿಮ್ಮ ತವರು ಮನೆಗೆ ಹಿಂತಿರುಗಿ ಎಂದು ಬೆದರಿಕೆ ಒಡ್ಡಿದರು. ಭಯಗೊಂಡ ಸಹೋದರಿಯರ ಕುಟುಂಬಸ್ಥರು ಸ್ಥಳೀಯ ಜಾತಿ ಪಂಚಾಯತಿಯನ್ನು ಸಂಪರ್ಕಿಸಿದರು. ಅವರೋ ಬಿಡಿ, ಇಂತಹ ಅನಿಷ್ಟ ಮತ್ತು ಕ್ರೂರ ಸಂಪ್ರದಾಯವನ್ನು ಪೋಷಿಸಿಕೊಂಡು ಬಂದವರು. ₹40 ಸಾವಿರ ಹಣ ನೀಡಿದರೆ ಮದುವೆ ವಿವಾದವನ್ನು ಪರಿಹರಿಸುವುದಾಗಿ ತಿಳಿಸಿದರು. ಸರಿ, ಎಂದು ಸಹೋದರಿಯರ ಮನೆಯವರು ಹಣವನ್ನೂ ಕೊಟ್ಟರು. ಆದರೆ 2020ರ ಫೆಬ್ರುವರಿಯಲ್ಲಿ ಜಾತಿ ಪಂಚಾಯತಿ ಎಲ್ಲರನ್ನೂ ಸೇರಿಸಿ ಸಭೆ ಏರ್ಪಡಿಸಿತು. ಸಭೆಯಲ್ಲಿ ಮದುವೆ ಅಲ್ಲಿಗೆ ಅಂತ್ಯವಾಯಿತು, ಇನ್ಮುಂದೆ ಇವರು ಗಂಡ ಹೆಂಡತಿಯಾಗಿ ಬಾಳುವುದು ಸಾಧ್ಯವಿಲ್ಲ ಎಂದು ಘೋಷಿಸಿದರೂ. ಅಷ್ಟೇ ಅಲ್ಲದೇ ಓರ್ವ ಯುವತಿಯನ್ನು ಬಹಿಷ್ಕಾರ ಹಾಕುವುದಾಗಿಯೂ ಘೋಷಿಸಿದರು.

ಇಷ್ಟೆಲ್ಲ ಆದಮೇಲೆ ಸಹೋದರಿಯ ತಾಯಿ ಪೊಲೀಸರನ್ನು ಸಂಪರ್ಕಿಸಿ ಸಹೋದರರ ಕುಟುಂಬದ ವಿರುದ್ಧ ದಾವೆ ಹೂಡಿದರು. ಸಹೋದರಿಯರ ತಾಯಿಯ ದೂರು ಆಧರಿಸಿ ಇಬ್ಬರು ಸಹೋದರರು, ಅವರ ತಾಯಿ ಮತ್ತು ಜಾತಿ ಪಂಚಾಯತ್​ನ ಕೆಲವು ಸದಸ್ಯರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು. ಹೀಗೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನೇನೋ ಏರಿತು. ಆದರೆ ಮುಂದಿನ ದಿನಗಳಲ್ಲಿ ಏನೆಲ್ಲ ಆಗುತ್ತದೆ ಎಂಬುದನ್ನು ಕಾದುನೋಡಬೇಕು. ಅಲ್ಲದೇ, ಇಂತಹ ಘಟನೆಗಳ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಬೇಕು ಎಂಬುದಂತೂ ಸತ್ಯ.

ಇದನ್ನೂ ಓದಿ:   ಮಹಾಕುಂಭಮೇಳದಲ್ಲೊಂದು ಸುಂದರ ಸಂಗಮ; 5ವರ್ಷದ ಹಿಂದೆ ಅರ್ಧಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮತ್ತೆ ಕುಟುಂಬ ಕೂಡಿಕೊಂಡದ್ದು ಹೇಗೆ?

ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್​ ಕೊಟ್ಟಿದ್ದ 18 ಮಹಿಳೆಯರು, ಫೋಟೋಗ್ರಾಫರ್​ಗೆ ಗಡೀಪಾರು ಶಿಕ್ಷೆ

( Maharashtra Kolhapur women failed in virginity test jaat panchayat makes divorce)