ಕಾಂಗ್ರೆಸ್ ಪಕ್ಷಕ್ಕೂ ಮೊದಲು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ (Udupi Chikmagalur Lok Sabha Constituency) ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕೈ ಪಕ್ಷಕ್ಕೆ (Congress) ಬಿಜೆಪಿ (BJP) ಟೆನ್ಶನ್ ಕೊಟ್ಟಿದೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಗಬಹುದು ಎಂದು ಕಾಂಗ್ರೆಸ್ ಲೆಕ್ಕಾಹಾರ ಹಾಕಿ, ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿತ್ತು. ಆದರೆ ಈ ನಡುವೆ ಹಿಂದುಳಿದ ವರ್ಗದ ನಾಯಕನಿಗೆ (Kota Srinivas Poojary) ಟಿಕೆಟ್ ಕೊಟ್ಟು ಬಿಜೆಪಿ ರಾಜಕೀಯ ದಾಳ ಉರುಳಿಸಿದೆ. ಕಾಂಗ್ರೆಸ್ ಮತ್ತೆ ಹೊಸದಾಗಿ ಕೂಡಿ-ಕಳೆಯುವ ಲೆಕ್ಕಾಚಾರ ಮಾಡಬೇಕಿದೆ.
ಅನಿರೀಕ್ಷಿತ ಅಚ್ಚರಿ ಎಂಬಂತೆ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಹೀಗೆ ಹೊಸ ಅಭ್ಯರ್ಥಿ ಘೋಷಣೆ ಮಾಡಿ ಕಾಂಗ್ರೆಸ್ ಗೆ ಟೆನ್ಶನ್ ಕೊಟ್ಟಿದೆ. ಜಾತಿ ಲೆಕ್ಕಾಚಾರ ಮಾಡಿ ಬಿಜೆಪಿ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಅನಿವಾರ್ಯವಾಗಿ ಹೊಸ ಲೆಕ್ಕ ಶುರು ಮಾಡಿದೆ. ಬಿಜೆಪಿ ಗೌಡ ಸಮುದಾಯದ ಶೋಭಾ ಕರಂದ್ಲಾಜೆ ಗೆ ಟಿಕೆಟ್ ಎಂದು ಭಾವಿಸಿದ್ದ ಕಾಂಗ್ರೆಸ್, ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆಯನ್ನು ಪಕ್ಷಕ್ಕೆ ಸೆಳೆದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಶಿಫ್ಟ್ ಆಗಿದ್ದು, ಶೋಭಾ ಸ್ಥಾನಕ್ಕೆ ಶ್ರೀನಿವಾಸ ಪೂಜಾರಿ ನಿಂತಿದ್ದಾರೆ.
ಕಾಂಗ್ರೆಸ್ ಹೊಸದಾಗಿ ಎಲ್ಲಾ ಸಾಧ್ಯತೆಗಳನ್ನು ಅಳೆದು ತೂಗುತ್ತಿದೆ. ಟಿಕೆಟ್ ಜಯಪ್ರಕಾಶ್ ಹೆಗ್ಡೆಗೇ ಕೊಡಬೇಕಾ? ಮಾಜಿ ಸಚಿವ ಮಾಜಿ ಸಂಸದ ವಿನಯಕುಮಾರ್ ಸೊರಕೆಗೋ? ಈ ನಡುವೆ ಆಕಾಂಕ್ಷಿಗಳಾಗಿರುವ ಡಾ. ಅಂಶುಮಂತ್- ಸುಧೀರ್ ಕುಮಾರ್ ಮರೋಳ್ಳಿ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಬಿಲ್ಲವ ಅಭ್ಯರ್ಥಿ ಎದುರು ಯಾರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಈ ವರೆಗೆ ಜಯಪ್ರಕಾಶ್ ಹೆಗ್ಡೆಯ ಒಂದು ಹೆಸರನ್ನು ಮಾತ್ರ ಹೈಕಮಾಂಡ್ ಗೆ ಕಳುಹಿಸಿರುವ ರಾಜ್ಯ ನಾಯಕರು ಈಗ ಪುನರ್ ವಿಮರ್ಷೆ ಮಾಡುತ್ತಿದ್ದಾರಂತೆ. ಚಿಕ್ಕಮಗಳೂರು ಮೂಲದ ಅಭ್ಯರ್ಥಿ ಗೆ ಅವಕಾಶ ನೀಡುವ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆಯುತ್ತಿದೆ. ಈವರೆಗೆ ಟಿಕೆಟ್ ಕೂಡಾ ಘೋಷಣೆಯಾಗಿಲ್ಲ. ಅಧಿಕೃತ ಘೋಷಣೆಗೆ ಜಯಪ್ರಕಾಶ ಹೆಗ್ಡೆ ಕಾಯುತ್ತಿದ್ದಾರೆ.
ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಕೊಡುವುದಾಗಿ ಈಗಾಗಲೇ ಪಕ್ಷ ನಿರ್ಧರಿಸಿದೆ. ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಆ ನಾಲಕ್ಕೂ ಶಾಸಕರ ಅಭಿಪ್ರಾಯ ಪಡೆದು ತಂತ್ರಗಾರಿಕೆ ಮಾಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಅಭ್ಯರ್ಥಿ ಆಯ್ಕೆ ಮಾಡಿದರೆ ಕಣ ರಂಗೇರುತ್ತದೆ ಎಂಬ ಲೆಕ್ಕಾಚಾರವೂ ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Sat, 16 March 24