ಚಿಕ್ಕಮಗಳೂರು: ಇನ್ ಸ್ಟಾಗ್ರಾಂನಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ನೊಂದ ಯುವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹ್ಮದ್ ರೋಫ್ ಹಾಗೂ ಆತನ ಸ್ನೇಹಿತರ ವಿರುದ್ಧ ಯುವತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮಲು ಬರುವ ಪದಾರ್ಥಗಳನ್ನು ನೀರು, ಜ್ಯೂಸಲ್ಲಿ ಹಾಕಿ ನನಗೆ ಕುಡಿಸಿದ್ದಾರೆ. ಒತ್ತಾಯ ಪೂರಕವಾಗಿ ಫೋಟೋ, ವಿಡಿಯೋ ಮಾಡಿಕೊಂಡಿದ್ದಾರೆ. ನನಗೆ ಗೊತ್ತಾಗದ ರೀತಿಯಲ್ಲಿ ತಾಳಿ ಕಟ್ಟುವ ಫೋಟೋವನ್ನು ಕೂಡ ಮಾಡಿಕೊಂಡಿದ್ದಾರೆ. ದುಬೈನಲ್ಲಿ ಕುಳಿತು ಫೋಟೋ ಅಪ್ಲೋಡ್ ಮಾಡ್ತಿದ್ದಾನೆಂದು ನೊಂದ ಯುವತಿ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಹಣ ಕೀಳುತ್ತಿದ್ದ ಕಿರಾತಕರು
ಕೊಪ್ಪಳದ ಗಡಿಯಾರ ಕಂಬದ ಬಳಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಭವಿಷ್ಯ ಹೇಳ್ತೀನಿ ಎಂದು ಹಣ ಕೀಳುತ್ತಿದ್ದ ಕಿರಾತಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಬುಡುಬುಡಿಕೆಯವರಂತೆ ಕಾಣುತ್ತಿದ್ದ ಖದೀಮರು ನಿಮ್ಮ ಭವಿಷ್ಯ ಹೇಳುತ್ತೀವಿ ಎಂದು ಮನೆಯಲ್ಲಿ ಗಂಡಸರು ಇಲ್ಲದ ವೇಳೆ ಮಹಿಳೆಯರ ಬಳಿ ಹೋಗಿ ಇಲ್ಲ ಸಲ್ಲದ್ದನ್ನು ಹೇಳಿ ಹಣ ಕೀಳುತ್ತಿದ್ದರು. ಸದ್ಯ ಇಬ್ಬರು ಖದೀಮರನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ 5 ಸಾವಿರದಂತೆ 10 ಕ್ಕೂ ಹೆಚ್ಚು ಮಹಿಳೆಯರಿಂದ ಹಣ ಲಪಟಾಯಿಸಿದನ್ನು ಖದೀಮರು ಒಪ್ಪಿಕೊಂಡಿದ್ದಾರೆ. ಈ ಕುರಿತು ಸ್ಥಳೀಯರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹಣದ ವಿಚಾರಕ್ಕೆ ತಂದೆಯನ್ನೇ ಕೊಲೆ ಮಾಡಿ, ದೇಹವನ್ನು ಕತ್ತರಿಸಿ ಬಿಸಾಡಿದ ಮಗ
ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಂಚೇವು ಕೊಪ್ಪಲು ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನಲೆ ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭವ್ಯ (23), ವೇದಾಂತ್ (3) ಮೃತ ತಾಯಿ-ಮಗು.
ಎರಡು ದಿನಗಳ ಹಿಂದೆ ಮಗುವಿನ ಜೊತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಮಾಳೆನಹಳ್ಳಿ ಹೇಮಾವತಿ ಕಾಲುವೆಯಲ್ಲಿ ಮಗುವಿನ ಮೃತ ದೇಹ ಪತ್ತೆಯಾಗಿದೆ. ಕುಂಚೆವುಕೊಪ್ಪಲು ಗ್ರಾಮದ ಕೆರೆಯಲ್ಲಿ ತಾಯಿ ಮೃತದೇಹ ಹಾಗೂ ಮಾಳೆನಹಳ್ಳಿ ಗ್ರಾಮದ ಬಳಿ ಮಗು ಮೃತದೇಹ ಪತ್ತೆಯಾಗಿದೆ. ಮೂರು ವರ್ಷದ ಹಿಂದೆ ಗೆಜ್ಜೆಗಾರಹಳ್ಳಿಯ ಭವ್ಯ ಹಾಗು ಕುಂಚೇವು ಕೊಪ್ಪಲು ಶ್ರೀನಿವಾಸ್ ವಿವಾಹವಾಗಿದ್ದರು. ಪತಿಯ ವರದಕ್ಷಿಣೆ ಕಿರುಕುಳದಿಂದ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.