ಬಾಗಲಕೋಟೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳನ್ನು ಯಾಮಾರಿಸಿ ರಾತ್ರೋರಾತ್ರಿ ಪೋಷಕರು ಅಪ್ರಾಪ್ತೆಗೆ ಮದುವೆ ಮಾಡಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಬಾಲ್ಯ ವಿವಾಹದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕ ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಪೋಷಕರು ಈ ವೇಳೆ ಅಧಿಕಾರಿಗಳನ್ನು ಯಾಮಾರಿಸಿದ್ದಾರೆ.
ರಾತ್ರೋರಾತ್ರಿ ಅಪ್ರಾಪ್ತೆಗೆ ಮದುವೆ ಮಾಡಿಸಿ ಅಧಿಕಾರಿಗಳ ಮುಂದೆ ಪೋಷಕರು ಹೈ ಡ್ರಾಮ ಮಾಡಿದ್ದಾರೆ. ವಿವಾಹ ತಡೆಯಲು ಹೋಗಿದ್ದ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಯಾಮಾರಿಸಿದ್ದಾರೆ . ಬಾಲ್ಯ ವಿವಾಹ ಮಾಡ್ತಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಬಾಲಕಿಯ ಪೋಷಕರು ತಮ್ಮ ಮನೆಯಲ್ಲಿ ಮದುವೆಯಾಗಿಲ್ಲ. ನಮ್ಮ ಮನೆಯಲ್ಲಿ ಸಾವಾಗಿದೆ ನಾವು ದುಃಖದಲ್ಲಿದ್ದೇವೆ. ನಾವೇಕೆ ಮದುವೆ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಸುಳ್ಳು ಹೇಳಿ ಯಾಮಾರಿಸಿದ್ದಾರೆ.
ಪೋಷಕರ ಮಾತು ನಂಬಿ ಅಧಿಕಾರಿಗಳು ವಾಪಸಾಗಿದ್ದು ಅಧಿಕಾರಿಗಳು ಹೋದ ಬಳಿಕ ರಾತ್ರೋರಾತ್ರಿ ಅಪ್ರಾಪ್ತೆಗೆ ಮದುವೆ ಮಾಡಿಸಿದ್ದಾರೆ. ಬಳಿಕ ಬೇರೆ ಮನೆಯಲ್ಲಿ ಬಾಲಕಿಯನ್ನು ಬಚ್ಚಿಟ್ಟಿದ್ದಾರೆ. ವಿಷಯ ತಿಳಿದು ಅಧಿಕಾರಿಗಳು, ಪೊಲೀಸರು ಮತ್ತೆ ತಡ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆದರೆ ಆಗಲೂ ಮದುವೆ ಮಾಡಿಲ್ಲವೆಂದು ಪೋಷಕರು ಅಧಿಕಾರಿಗಳ ಜೊತೆ ವಾದ ಮಾಡಿದ್ದಾರೆ. ಕೊನೆಗೆ ಅಂತಿಮ ನಿರ್ಧಾರಕ್ಕೆ ಬಂದ ಅಧಿಕಾರಿಗಳು ವಾಗ್ವಾದದಿಂದ ಏನೂ ಪ್ರಯೋಜನವಿಲ್ಲವೆಂದು ಮೊಬೈಲ್ ಲೊಕೇಷನ್ ಆಧರಿಸಿ ಅಪ್ರಾಪ್ತೆ ಪತ್ತೆ ಹಚ್ಚಿದ್ದಾರೆ.
ತಡರಾತ್ರಿ ಬಾಲಕಿ ಸಂರಕ್ಷಣೆ ಮಾಡಿ, ಇಳಕಲ್ ತಂಗುದಾಣದ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು ಸಾಂತ್ವನ ಕೇಂದ್ರದಲ್ಲಿ ಟೆಸ್ಟ್ ಮಾಡಿದಾಗ ಬಾಲಕಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕೊರೊನಾ ಸಮಯದಲ್ಲಿ ಬಾಗಲಕೋಟೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಮತ್ತಷ್ಟು ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯತೆ ಇದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಲಾಕ್ಡೌನ್ ನಡುವೆ ಬಾಲ್ಯ ವಿವಾಹ; 28 ಬಾಲ್ಯ ವಿವಾಹಗಳನ್ನು ತಡೆದ ಅಧಿಕಾರಿಗಳು
Published On - 11:29 am, Thu, 27 May 21