ಹಾವೇರಿಯಲ್ಲಿ ಹೆತ್ತವ್ವಳ ನೆನಪಿಗೊಂದು ದೇವಾಲಯ; ತಾಯಿಯ ಮೂರ್ತಿ ಇಟ್ಟು ಪೂಜೆ ಸಲ್ಲಿಸುತ್ತಿರುವ ಮಕ್ಕಳು

ಹೇಮಲವ್ವ ಲಮಾಣಿ ಎಂಬುವವರಿಗೆ ಅಣ್ಣಪ್ಪ, ನೂರಪ್ಪ, ತಾವರೆಪ್ಪ ಮತ್ತು ವೀರಪ್ಪ ಎಂಬ ನಾಲ್ಕು ಜನ ಗಂಡು ಮಕ್ಕಳು. ಹೇಮಲವ್ವಳದು ಕಡುಬಡತನದ ಕುಟುಂಬ. ಸೌದೆ ತಂದು ಮಾರಾಟ ಮಾಡಿ ಅದರಲ್ಲಿ ಬಂದ ದುಡ್ಡಿನಿಂದ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿದ್ದಳಂತೆ. ದೇವರು, ದೈವದ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದಳಂತೆ.

ಹಾವೇರಿಯಲ್ಲಿ ಹೆತ್ತವ್ವಳ ನೆನಪಿಗೊಂದು ದೇವಾಲಯ; ತಾಯಿಯ ಮೂರ್ತಿ ಇಟ್ಟು ಪೂಜೆ ಸಲ್ಲಿಸುತ್ತಿರುವ ಮಕ್ಕಳು
ತಾಯಿಯ ನೆನಪಿಗಾಗಿ ದೇವಾಲಯ ಕಟ್ಟಿಸಿದ ಮಕ್ಕಳು
Follow us
|

Updated on: May 09, 2021 | 11:59 AM

ಹಾವೇರಿ: ಒಂಬತ್ತು ತಿಂಗಳುಗಳ ಕಾಲ ಮಗುವನ್ನು ಹೊತ್ತು ಹೆತ್ತು ಬೆಳೆಸುವವಳು ತಾಯಿ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲು ಗುರು ಎನ್ನುವ ಮಾತಿನಂತೆ ಮಗುವಿಗೆ ಸುಂದರ ಭವಿಷ್ಯ ರೂಪಿಸಿ ಕೊಡುವವಳು ತಾಯಿ. ಆಧುನಿಕತೆ ಭರಾಟೆಯಲ್ಲಿ ಅದೆಷ್ಟೋ ಮಕ್ಕಳು ತಾಯಿಯನ್ನು ಅಷ್ಟಾಗಿ ಪ್ರೀತಿಸುತ್ತಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳೂರು ಲಂಬಾಣಿ ತಾಂಡಾದಲ್ಲಿ ಇದಕ್ಕೆ ಅಪವಾದ ಎನ್ನುವ ಹಾಗೆ ಲಮಾಣಿ ಸಹೋದರರು ತಮ್ಮ ತಾಯಿಯ ನೆನಪಿಗೆ ದೇವಸ್ಥಾನ ಕಟ್ಟಿಸಿ, ತಾಯಿಯ ಮೂರ್ತಿ ಮಾಡಿಸಿ ಪೂಜೆ ಮಾಡುತ್ತಿದ್ದಾರೆ.

ತಾಯಿ ನೆನಪಿಗೆ ದೇವಸ್ಥಾನ ಹೇಮಲವ್ವ ಲಮಾಣಿ ಎಂಬುವವರಿಗೆ ಅಣ್ಣಪ್ಪ, ನೂರಪ್ಪ, ತಾವರೆಪ್ಪ ಮತ್ತು ವೀರಪ್ಪ ಎಂಬ ನಾಲ್ಕು ಜನ ಗಂಡು ಮಕ್ಕಳು. ಹೇಮಲವ್ವಳದು ಕಡುಬಡತನದ ಕುಟುಂಬ. ಸೌದೆ ತಂದು ಮಾರಾಟ ಮಾಡಿ ಅದರಲ್ಲಿ ಬಂದ ದುಡ್ಡಿನಿಂದ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿದ್ದಳಂತೆ. ದೇವರು, ದೈವದ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದಳಂತೆ. ಕಡುಬಡತನದಲ್ಲೂ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದಳು. ಆದರೆ ಹೇಮಲವ್ವ ಕಳೆದ ಕೆಲವು ವರ್ಷಗಳ ಹಿಂದೆ ಮರಣ ಹೊಂದಿದ್ದಾಳೆ. ತಾಯಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ನಾಲ್ವರು ಮಕ್ಕಳು ತಾಯಿಯ ಋಣವನ್ನು ತೀರಿಸುವುದು ಹೇಗೆ ಎಂಬ ಚಿಂತೆಗೆ ಒಳಗಾದರು. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಆಕೆಯನ್ನು ನಿತ್ಯವೂ ಪೂಜೆ ಮಾಡಿದರೆ ಆಕೆ ಯಾವತ್ತೂ ನಮಗೆ ಒಳ್ಳೆಯದನ್ನೆ ಮಾಡುತ್ತಾಳೆ ಎಂದು ಭಾವಿಸಿದ ಸಹೋದರರು ಹೇಮಲವ್ವಳ ಹೆಸರಲ್ಲಿ ಮನೆಯ ಪಕ್ಕದಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ಅವ್ವನ ಋಣ ತೀರಿಸುವುದು ಅಷ್ಟೊಂದು ಸುಲಭವಲ್ಲ. ಆದರೂ ನಾವು ಅವ್ವನ ಸ್ಮರಣೆಗಾಗಿ ದೇವಸ್ಥಾನ ನಿರ್ಮಿಸಿ, ಅವ್ವನ ಮೂರ್ತಿ ಮಾಡಿಸಿ ಪೂಜೆ ಸಲ್ಲಿಸುತ್ತೇವೆ ಎಂದು ಹೇಮಲವ್ವಳ ಪುತ್ರ ಅಣ್ಣಪ್ಪ ಹೇಳಿದರು.

ಸುಮಾರು ಹನ್ನೊಂದು ವರ್ಷಗಳ ಹಿಂದೆ ಅಂದರೆ 2010ರ ಜೂನ್ ತಿಂಗಳಲ್ಲಿ ಸುಮಾರು ಮೂರು ಲಕ್ಷ ರುಪಾಯಿ ಖರ್ಚು ಮಾಡಿ ತಾಯಿ ಹೇಮಲವ್ವಳ ಹೆಸರಿನಲ್ಲಿ ಮಕ್ಕಳು ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ತಾಯಿ ಹೇಮಲವ್ವ ಯಾವಾಗಲೂ ಸಾಂಪ್ರದಾಯಿಕ ಲಂಬಾಣಿ ಬಟ್ಟೆಗಳನ್ನೆ ಧರಿಸುತ್ತಿದ್ದಳು. ಹೀಗಾಗಿ ಬನವಾಸಿಯ ಕಲಾವಿದನಿಗೆ ಹೇಳಿ ಲಂಬಾಣಿ ಬಟ್ಟೆಯನ್ನೆ ಉಟ್ಟುಕೊಂಡ ತಾಯಿಯ ಆಕೃತಿ ಹೋಲುವ ಮೂರ್ತಿ ತಯಾರಿಸಿಕೊಂಡು ಬಂದಿದ್ದಾರೆ. ಅಂದಿನಿಂದ ದೇವಸ್ಥಾನದಲ್ಲಿ ತಾಯಿಯ ಮೂರ್ತಿ ಇಟ್ಟು ನಿತ್ಯವೂ ಪೂಜೆ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ತಾಯಿ ಹೇಮಲವ್ವಳ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ಕಿರಿಯ ಮಗ ಅಣ್ಣಪ್ಪ ಲಮಾಣಿ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಜಮೇದಾರನಾಗಿ ಕೆಲಸ ಮಾಡುತ್ತಿದ್ದಾನೆ. ಇನ್ನುಳಿದಂತೆ ನೂರಪ್ಪ, ವೀರಪ್ಪ ಮತ್ತು ತಾವರೆಪ್ಪ ಗ್ರಾಮದಲ್ಲೇ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Mother Temple

ತಾಯಿ ಹೇಮಲವ್ವ ಲಮಾಣಿಯನ್ನು ಹೋಲುವ ಮೂರ್ತಿ, ದೇವಾಲಯ

ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ದಸರಾ, ದೀಪಾವಳಿ ಮತ್ತು ಅಮವಾಸ್ಯೆ ಸಂದರ್ಭಗಳಲ್ಲಿ ತಾಯಿ ಹೇಮಲವ್ವಳಿಗೆ ಮಕ್ಕಳು ವಿಶೇಷ ಪೂಜೆ ಸಲ್ಲಿಸಿ, ತಾಯಿಯ ಪ್ರೀತಿಗೆ ಪಾತ್ರರಾಗುತ್ತಾರೆ. ಪಕ್ಕದ ಅಕ್ಕಿ ಆಲೂರು ಗ್ರಾಮದಲ್ಲಿರುವ ಅರ್ಚಕರು ತಾಯಿ ಗುಡಿಯಲ್ಲಿ ನಡೆಯುವ ಪ್ರತಿಯೊಂದು ವಿಶೇಷ ಪೂಜೆಗಳನ್ನು ನಡೆಸಿಕೊಡುತ್ತಾರೆ. ತಾಯಿಯ ಹೆಸರಿನಲ್ಲಿ ಗುಡಿ ನಿರ್ಮಾಣ ಆಗಿರುವುದು ಪೂಜೆಗೆ ಬರುವ ಅರ್ಚಕ ಫಕ್ಕೀರಯ್ಯರಿಗೂ ಸಂತಸ ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ತಾಯಂದಿರು ಮಕ್ಕಳ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಕೆಲವು ಮಕ್ಕಳಂತೂ ಕರುಣೆಯಿಲ್ಲದ ಕಟುಕರಂತೆ ಹೆತ್ತವರು ಎಂಬುದನ್ನು ಲೆಕ್ಕಿಸದೆ ತಾಯಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕುವ ಘಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲೂ ಬಾಳೂರು ತಾಂಡಾ ಎನ್ನುವ ಪುಟ್ಟ ಗ್ರಾಮದಲ್ಲಿ ಲಮಾಣಿ ಸಹೋದರರು ತಾಯಿಯ ಪ್ರೀತಿಗಾಗಿ ದೇವಸ್ಥಾನ ಕಟ್ಟಿಸಿ, ಮೂರ್ತಿ ಮಾಡಿಸಿ, ಪ್ರತಿದಿನ ಪೂಜೆ ಸಲ್ಲಿಸುತ್ತಿರುವುದು ನಿಜಕ್ಕೂ ತಾಯಿ ಪ್ರೀತಿಗೆ ಸಂದ ಗೌರವ ಎನ್ನಬೇಕು.

ಇದನ್ನೂ ಓದಿ

Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ

Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ

(children have built a temple in memory of their mother in haveri)