
ಬೆಂಗಳೂರು, ನವೆಂಬರ್ 12: ಮಕ್ಕಳಿಗೆ ಸೋಂಕುಗಳಿಂದ ರಕ್ಷಣೆ ನೀಡಬೇಕಾದ ಲಸಿಕೆಗಳೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂ ಕೊಟ್ಟು ಲಸಿಕೆ ಹಾಕಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಹೆಚ್ಚುವರಿ ಲಸಿಕೆಗಳು ಗಗನಕುಸುಮವಾಗಿದೆ. ಹಾಗಾದರೆ ಯಾವೆಲ್ಲಾ ಲಸಿಕೆಗಳ ಕೊರತೆ ಉಂಟಾಗಿದೆ, ಪೋಷಕರ ಬೇಡಿಕೆ ಏನು ಎಂಬ ಮಾಹಿತಿ ಇಲ್ಲಿದೆ.
ಮಗುವಿನ ಜನನದ ಬಳಿಕ ಆರಂಭವಾಗುತ್ತೆ ಲಸಿಕೆಗಳ ಸರಣಿ. ಮಗುವಿನ ಜನನದಿಂದ ಹಿಡಿದು ವಿವಿಧ ವಯೋಮಾನದ ಮಕ್ಕಳಿಗೆ ಹಂತಹಂತವಾಗಿ ಲಸಿಕೆ ನೀಡಲಾಗುತ್ತೆ. ವೈರಸ್ ಮತ್ತು ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ರಕ್ಷಿಸುವುದರ ಜೊತೆಗೆ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: “ಮಗುವಿನ ಚಿಕಿತ್ಸೆಗೆ 1 ರೂಪಾಯಿಯನ್ನೂ ಕೇಳಲ್ಲ”: ಹೆಚ್.ಡಿ. ಕುಮಾರಸ್ವಾಮಿ ಭೇಟಿ ಬೆನ್ನಲ್ಲೇ ಉಚಿತ ಆರೈಕೆಯ ಅಭಯ ನೀಡಿದ ಆಸ್ಪತ್ರೆ
ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲೂ ಲಸಿಕೆಯ ಕಾರ್ಯ ಮಹತ್ವ ಪಡೆದುಕೊಂಡಿದೆ. ಆದರೆ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ಪ್ರಮುಖ ಹೆಚ್ಚುವರಿ ಲಸಿಕೆಗಳು ಮಾತ್ರ ಲಭ್ಯವಿಲ್ಲದಿರುವುದು ಪೋಷಕರ ಚಿಂತೆಗೆ ಕಾರಣವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆಗಳಿಗಾಗಿ ಪೋಷಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚಿಕನ್ ಪಾಕ್ಸ್ ತಡೆಗಟ್ಟುವ ಲಸಿಕೆ, ಹೆಪಟೈಟಿಸ್ ಎ ಲಸಿಕೆ, ಟೈಫಾಯ್ಡ್ ಲಸಿಕೆ ಹಾಗೂ ಇನ್‌ಫ್ಲುಯೆನ್ಸಾ ಅಂದರೆ ಫ್ಲೂ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬುದು ಪೋಷಕರ ಪ್ರಮುಖ ದೂರು. ಇದರ ಜೊತೆಗೆ ಐಪಿವಿ ವೇಳಾಪಟ್ಟಿಯಲ್ಲಿನ ಲಸಿಕೆಗಳ ಲಭ್ಯತೆಯ ಬಗ್ಗೆಯೂ ಗಮನ ಹರಿಸುವಂತೆ ಮನವಿ ಮಾಡಲಾಗಿದೆ. ಈ ಲಸಿಕೆಗಳು ಮಕ್ಕಳಿಗೆ ವಿವಿಧ ಸೋಂಕುಗಳಿಂದ ರಕ್ಷಣೆ ನೀಡುವಲ್ಲಿ ಸಹಕಾರಿಯಾಗುತ್ತವೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಖಾಸಗಿ ಆಸ್ಪತ್ರೆಗಳ ದುಬಾರಿ ಲಸಿಕೆಗಳ ವೆಚ್ಚದಿಂದ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಿಕೆ ಚಿಂತೆ ಶುರುವಾಗಿದೆ. ಸಾವಿರಾರು ರೂ. ಖರ್ಚು ಮಾಡಿ ಪ್ರತಿಯೊಂದು ಹೆಚ್ಚುವರಿ ಲಸಿಕೆಯನ್ನೂ ಹಾಕಿಸುವುದು ಕುಟುಂಬಗಳಿಗೂ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಪೋಷಕರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಹಣದ ಕೊರತೆಯಿಂದ ಕೆಲವು ಮಕ್ಕಳು ಅಗತ್ಯ ಲಸಿಕೆಗಳಿಂದ ವಂಚಿತರಾಗುವ ಆತಂಕವೂ ಎದುರಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ನೀಡುತ್ತಿರುವ ಲಸಿಕೆಗಳ ಜೊತೆಗೆ, ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಈ ಹೆಚ್ಚುವರಿ ಲಸಿಕೆಗಳನ್ನೂ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಒದಗಿಸಬೇಕು. ಮಕ್ಕಳ ಆರೋಗ್ಯ ರಕ್ಷಣೆಗೆ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸಬೇಕು ಎಂಬುದು ಪೋಷಕರು ಹಾಗೂ ತಜ್ಞರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ; ಸಚಿವ ಯುಟಿ ಖಾದರ್
ಒಟ್ಟಿನಲ್ಲಿ ಮಕ್ಕಳಿಗೆ ಅಗತ್ಯವಿರುವ ಲಸಿಕೆಗಳು ಹಣದ ಕಾರಣಕ್ಕೆ ದೂರವಾಗಬಾರದು. ಸರ್ಕಾರಿ ಆಸ್ಪತ್ರೆಗಳಲ್ಲೇ ಅಗತ್ಯ ಹೆಚ್ಚುವರಿ ಲಸಿಕೆಗಳು ಲಭ್ಯವಾದರೆ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ. ಮಕ್ಕಳ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.