ಚಿತ್ರದುರ್ಗದಲ್ಲಿ ಲಾಕ್​ಡೌನ್ ಜಾರಿಯಾದರು ಇಳಿಮುಖವಾಗಿಲ್ಲ ಸೋಂಕಿತರ ಸಂಖ್ಯೆ; ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಜನರ ಪರದಾಟ

|

Updated on: May 30, 2021 | 11:47 AM

ಚಿತ್ರದುರ್ಗದಲ್ಲಿ ಈ ಹಿಂದೆ ಸೋಂಕಿತರ ಸಂಖ್ಯೆ ಶೇಕಡಾ 4ರಷ್ಟಿತ್ತು. ಆದರೆ ಸದ್ಯ ಪಾಸಿಟಿವಿಟಿ ಪ್ರಕರಣ ಶೇಕಾ 23ಕ್ಕೆ ಏರಿಕೆ ಕಂಡಿದೆ. ಅಲ್ಲದೆ ಸೋಂಕಿತರಿಗೆ ಬೆಡ್ ಕೊರತೆ ಮುಂದುವರೆದಿದ್ದು ಜನ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಜಿಲ್ಲಾ ಕೊವಿಡ್ ಆಸ್ಪತ್ರೆಯ‌ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಲಾಕ್​ಡೌನ್ ಜಾರಿಯಾದರು ಇಳಿಮುಖವಾಗಿಲ್ಲ ಸೋಂಕಿತರ ಸಂಖ್ಯೆ; ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಜನರ ಪರದಾಟ
ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೊವಿಡ್ ಆಸ್ಪತ್ರೆ
Follow us on

ಚಿತ್ರದುರ್ಗ: ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ, ಸೋಂಕಿತರ ಹಾಗೂ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ಇದರ ಪರಿಣಾಮದಿಂದಾಗಿ ರಾಜ್ಯದ‌ ಬಹುತೇಕ‌ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಸೋಂಕು ದಿನೇ ದಿನೇ ಏರಿಕೆ ಕಾಣುತ್ತಿದೆ. ಅಂತೆಯೇ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಸಿಬ್ಬಂದಿಯ‌ ನಿರ್ಲಕ್ಷದಿಂದಾಗಿ, ಜಿಲ್ಲಾಡಳಿತದ ಕರ್ತವ್ಯ ಲೋಪದಿಂದಾಗಿ ಸೋಂಕಿತರು ಪರದಾಡುವ ದುಸ್ಥಿತಿ‌ ನಿರ್ಮಾಣ ಆಗಿದೆ.

ಚಿತ್ರದುರ್ಗದಲ್ಲಿ ಈ ಹಿಂದೆ ಸೋಂಕಿತರ ಸಂಖ್ಯೆ ಶೇಕಡಾ 4ರಷ್ಟಿತ್ತು. ಆದರೆ ಸದ್ಯ ಪಾಸಿಟಿವಿಟಿ ಪ್ರಕರಣ ಶೇಕಾ 23ಕ್ಕೆ ಏರಿಕೆ ಕಂಡಿದೆ. ಅಲ್ಲದೆ ಸೋಂಕಿತರಿಗೆ ಬೆಡ್ ಕೊರತೆ ಮುಂದುವರೆದಿದ್ದು ಜನ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಜಿಲ್ಲಾ ಕೊವಿಡ್ ಆಸ್ಪತ್ರೆಯ‌ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಾತ್ರಿ ವೇಳೆಯಂತೂ ಕೊವಿಡ್ ವಾರ್ಡ್​ಗಳಲ್ಲಿ ಸೋಂಕಿತರನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ ಎಂದು ಸೋಂಕಿತರ ಸಂಬಂಧಿಕರಾದ ಕುಮಾರ್ ತಿಳಿಸಿದ್ದಾರೆ.

ಅನೇಕ ಸಲ ನಾಯಿಗಳು ಗುಂಪು ಗುಂಪಾಗಿ ವಾರ್ಡ್​ಗಳಲ್ಲಿ ಓಡಾಡುತ್ತಿವೆ. ಸಿಬ್ಬಂದಿಯ ನಿರ್ಲಕ್ಷದ ಬಗ್ಗೆ ಪ್ರಶ್ನಿಸಿದರೆ ಆಸ್ಪತ್ರೆಯ ಸಿಬ್ಬಂದಿ ಪೊಲೀಸರನ್ನು ಕರೆಸಿ ಬಾಯಿ‌‌ ಮುಚ್ಚಿಸುತ್ತಿದ್ದಾರೆ. ಹೀಗಾಗಿ, ಜಿಲ್ಲಾ ಕೊವಿಡ್‌ ಆಸ್ಪತ್ರೆಗೆ ಹೋದವರು ಜೀವಂತವಾಗಿ ವಾಪಸ್ ಬರುವುದು ಕಷ್ಟಸಾಧ್ಯ ಎಂಬಂತ ಸ್ಥಿತಿ‌ ನಿರ್ಮಾಣವಾಗಿದೆ. ನಮ್ಮ ತಾಯಿಗೆ ಬೆಡ್ ಪಡೆದು ಅಡ್ಮಿಟ್‌ ಮಾಡಲು ಪರದಾಡಬೇಕಾಯಿತು. ಈಗ ಸಕಾಲಕ್ಕೆ ಸೂಕ್ತ ಆಕ್ಸಿಜನ್ ಮತ್ತು ಚಿಕಿತ್ಸೆ ಸಿಗುತ್ತಿಲ್ಲ ಎಂದು ಸೋಂಕಿತರ ಸಂಬಂಧಿಕರಾದ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾಸ್ಪತ್ರೆಯ ಜಿಲ್ಲಾ‌ ಸರ್ಜನ್ ಡಾ.ಬಸವರಾಜ ಅವರನ್ನು ಕೇಳಿದರೆ ಈಗ ಎಲ್ಲವೂ ಸರಿಯಿದೆ. ಈ ಮೊದಲು‌ ಸಿಬ್ಬಂದಿ ಮತ್ತು ಆಕ್ಸಿಜನ್ ಸಮಸ್ಯೆ‌ ಇತ್ತು. ಈಗ ಕೇಳಿ ಬರುವ ಆರೋಪದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಮಜಾಯಿ ನೀಡಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ‌ಎಲ್ಲವೂ ಸರಿಯಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ, ಆರೋಗ್ಯ ಇಲಾಖೆ ಅಧಿಕಾರಿಗಳು‌‌ ಜಿಲ್ಲಾಸ್ಪತ್ರೆಯ ಬಗ್ಗೆ ಗಮನಹರಿಸಿ‌ ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ಮುಂಜಾಗೃತೆ ವಹಿಸಬೇಕಿದೆ. ಆ ಮೂಲಕ‌ ಜನರ ಪ್ರಾಣ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಸಹಾಯಧನ, ಪಾಲನೆ, ಶಿಕ್ಷಣಕ್ಕೆ ವ್ಯವಸ್ಥೆ; ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲಸೇವಾ ಯೋಜನೆ ಘೋಷಣೆ

ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ

Published On - 11:46 am, Sun, 30 May 21