ರಾಷ್ಟ್ರ ನಾಯಕ ನಿಜಲಿಂಗಪ್ಪ ವಾಸವಿದ್ದ ‘ವೈಟ್ ಹೌಸ್’ ಸ್ಮಾರಕವಾಗುವ ಸಮಯ ಸನ್ನಿಹಿತ

| Updated By: ಆಯೇಷಾ ಬಾನು

Updated on: Jan 07, 2021 | 6:33 AM

ಹತ್ತು ವರ್ಷಗಳ ಹಿಂದೆಯೇ ಚಿತ್ರದುರ್ಗ ನಗರದಲ್ಲಿನ ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವನ್ನಾಗಿಸುವ ಯೋಜನೆ ರೂಪುಗೊಂಡು ಸರ್ಕಾರ 1 ಕೋಟಿ ರೂಪಾಯಿಯನ್ನು ಸಹ ಬಿಡುಗಡೆಗೊಳಿಸಿತ್ತು. ಆದರೆ, ಸರ್ಕಾರ ಮನೆ ಖರೀದಿಸದೆ ಕೇವಲ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.

ರಾಷ್ಟ್ರ ನಾಯಕ ನಿಜಲಿಂಗಪ್ಪ ವಾಸವಿದ್ದ ‘ವೈಟ್ ಹೌಸ್ ಸ್ಮಾರಕವಾಗುವ ಸಮಯ ಸನ್ನಿಹಿತ
ಚಿತ್ರದುರ್ಗದ ನಿಜಲಿಂಗಪ್ಪ ಸ್ಮಾರಕ
Follow us on

ಚಿತ್ರದುರ್ಗ: ವಿಶಿಷ್ಟ ವ್ಯಕ್ತಿತ್ವ, ಅಪರೂಪದ ಮುತ್ಸದ್ದಿ ಮತ್ತು ಆಡಳಿತದಲ್ಲಿ ಶುದ್ಧಹಸ್ತವಿಟ್ಟುಕೊಂಡು ರಾಷ್ಟ್ರ ರಾಜಕಾರಣದಲ್ಲೂ ಛಾಪು ಮೂಡಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದಲ್ಲಿರುವ ನಿವಾಸವನ್ನು ಸ್ಮಾರಕವನ್ನಾಗಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ.

2020-2021ನೇ ಸಾಲಿನ ಬಜೆಟ್​ನಲ್ಲಿ ನಿಜಲಿಂಗಪ್ಪ ಅವರು ವಾಸವಾಗಿದ್ದ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಲು 5ಕೋಟಿ ರೂಪಾಯಿ ಘೋಷಿಸಲಾಗಿತ್ತು. ಡಿಸೆಂಬರ್ 29ರಂದು ಅನುದಾನ ಮಂಜೂರಾತಿ ಆದೇಶ ಹೊರಡಿಸಿ 2ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿರುವುದರಿಂದ ಸ್ಮಾರಕ ಅಭಿವೃದ್ಧಿ ಕಾರ್ಯ ಶೀಘ್ರದಲ್ಲೇ ಶುರುವಾಗಲಿದೆ.

ಹತ್ತು ವರ್ಷಗಳ ಹಿಂದೆಯೇ ಚಿತ್ರದುರ್ಗ ನಗರದಲ್ಲಿನ ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವನ್ನಾಗಿಸುವ ಯೋಜನೆ ರೂಪುಗೊಂಡು ಸರ್ಕಾರ 1 ಕೋಟಿ ರೂಪಾಯಿಯನ್ನು ಸಹ ಬಿಡುಗಡೆಗೊಳಿಸಿತ್ತು. ಆದರೆ, ಸರ್ಕಾರ ಮನೆ ಖರೀದಿಸದೆ ಕೇವಲ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಹಾಗಾಗಿ, ಬಿಡುಗಡೆಯಾಗಿದ್ದ ಅನುದಾನ ವಾಪಸ್ಸು ಹೋಗಿ ಯೋಜನೆ ನನೆಗುದಿಗೆ ಬಿದ್ದಿತ್ತು.

ಕಳೆದ ಆಗಸ್ಟ್ ತಿಂಗಳಲ್ಲಿ ಜಿಲ್ಲಾಡಳಿತವು ನಿಜಲಿಂಗಪ್ಪನವರ ಮನೆಯನ್ನು ಖರೀದಿಸಿ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಿತ್ತು. ಪ್ರಸ್ತಾವನೆಗೆ ಸಕಾರಾತ್ಮವಾಗಿ ಪ್ರತಿಕ್ರಿಯಿಸಿರುವ ಸರ್ಕಾರ ಹಣ ಮಂಜೂರು ಮಾಡಿ ಸ್ಮಾರಕ ಅಭಿವೃದ್ಧಿ ಕಾರ್ಯಕ್ಕೆ ಹಸಿರು ನಿಶಾನೆ ತೋರಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರ ಮಂಜೂರು ಮಾಡಿದ ಹಣ ಜಿಲ್ಲಾಡಳಿತದ ಕೈ ಸೇರುತ್ತಿದ್ದಂತೆಯೇ ಸ್ಮಾರಕ ಅಭಿವೃದ್ಧಿ ಕಾರ್ಯ ಆರಂಭಗೊಳ್ಳಲಿದೆ.

‘ವೈಟ್ ಹೌಸ್’ ಎಂದೇ ಕರೆಯಲಾಗುವ ನಿಜಲಿಂಗಪ್ಪನವರ ನಿವಾಸ ಸ್ಮಾರಕಗೊಳ್ಳುವ ಕಾಲ ಸನ್ನಿಹಿತವಾಗಿರುವುದು ಕೋಟೆನಾಡಿನ ಜನರಲ್ಲಿ ಸಂತಸವನ್ನುಂಟು ಮಾಡಿದೆ. ಮಾದರಿ ರಾಜಕಾರಣಿಯ ನಿವಾಸ ಸ್ಮಾರಕವಾಗುವ ಮೂಲಕ ಇಂದಿನ ರಾಜಕಾರಣಿಗಳಿಗೆ ಸಚ್ಚಾರಿತ್ರ್ಯದ ರಾಜಕೀಯ ಪಾಠಶಾಲೆ ಆಗಲಿ ಎಂಬುದು ಅವರ ಆಶಯವಾಗಿದೆ.

ರಾಜ್ಯ ಸರ್ಕಾರ ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವಾಗಿಸುವಲ್ಲಿ ತೋರಿರುವ ಇಚ್ಛಾಶಕ್ತಿ ಶ್ಲಾಘನೀಯ. ಆದರೆ, ಸರ್ಕಾರ ಬಿಡುಗಡೆಗೊಳಿಸಿದ 5ಕೋಟಿ ರೂಪಾಯಿ ಅನುದಾನದಲ್ಲಿ ಮನೆ ಖರೀದಿಯ ಅಂಶ ಸೇರಿದೆಯೇ ಅಥವಾ ಕೇವಲ‌ ಸ್ಮಾರಕ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಗೊಂದಲ ಮೂಡಿದೆ. ಈ ಬಗ್ಗೆ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಚಿತ್ರದುರ್ಗ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪ ನಿರ್ದೇಶಕ ನಿಜಲಿಂಗಪ್ಪ, ‘ಕಳೆದ ಆಗಸ್ಟ್​ನಲ್ಲೇ ಜಿಲ್ಲಾಡಳಿತದಿಂದ ನಿಜಲಿಂಗಪ್ಪ ಅವರ ನಿವಾಸ ಸ್ಮಾರಕವಾಗಿ ಪರಿವರ್ತಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. 5 ಕೋಟಿ ರೂಪಾಯಿ ಅನುದಾನದಲ್ಲಿ ಸುಮಾರು 4 ಕೋಟಿ 20 ಲಕ್ಷ ಹಣ ಮನೆ ಖರೀದಿ ಹಾಗೂ ಉಳಿದ ಹಣ ಸ್ಮಾರಕ ಅಭಿವೃದ್ಧಿಗೆ ಬಳಸಿಕೊಳ್ಳುವ ಯೋಜನೆ ಇದೆ. ಸರ್ಕಾರದ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಚಿತ್ರದುರ್ಗದ ಡಾಗ್‌ ಬೋರ್ಡಿಂಗ್‌ ಈಗ ಶ್ವಾನ ಪ್ರೀಯರ ಫೆವರೇಟ್‌ ತಾಣ!

Published On - 6:20 am, Thu, 7 January 21