
ಚಿತ್ರದುರ್ಗ, ಸೆಪ್ಟೆಂಬರ್ 11: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿದ್ದರಿಂದ ಮಂಡ್ಯದ ಮದ್ದೂರಿನಲ್ಲಿ ಕೋಮು ಕಿಚ್ಚು ಭುಗಿಲೆದ್ದಿತ್ತು. ಕಲ್ಲು ತೂರಾಟದ ವಿರುದ್ಧ ಪ್ರತಿಭಟಿಸಿ ಮದ್ದೂರು ಬಂದ್ ಯಶಸ್ವಿಯಾಗಿದ್ದರೆ, ಬುಧವಾರ ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡು ರಣಕಹಳೆಯನ್ನೇ ಮೊಳಗಿಸಿದ್ದಾರೆ. ಸದ್ಯ ಮದ್ದೂರು ಗದ್ದಲ ಸ್ವಲ್ಪ ತಣ್ಣಗಾಗಿದೆ. ಇದರ ಬೆನ್ನಲ್ಲೇ ಇದೀಗ ಚಿತ್ರದುರ್ಗದಲ್ಲಿ (Chitradurga) ಜಟಾಪಟಿ ಶುರುವಾಗಿದೆ. ಚಿತ್ರದುರ್ಗದಲ್ಲಿ ಸರ್ಕಾರದ ನಿಯಮದ ವಿರುದ್ಧ ಹಿಂದೂ ಸಂಘಟನೆಗಳು ಬೀದಿಗಿಳಿದಿವೆ.
ಕೋಟೆ ನಾಡು ಚಿತ್ರದುರ್ಗದಲ್ಲಿ ಕಳೆದ 18 ವರ್ಷಗಳಿಂದ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಆಯೋಜಿಸಲಾಗುತ್ತಿದೆ. ಅದ್ಧೂರಿ ಶೋಭಾಯಾತ್ರೆಗೆ ಲಕ್ಷಾಂತರ ಜನ ಸೇರುವುದು. ಡಿಜೆ ಸೌಂಡಿಗೆ ಹೆಜ್ಜೆ ಹಾಕುವುದು ನಡೆದುಕೊಂಡು ಬಂದಿದೆ. ಆದರೆ, ಈ ವರ್ಷ ಜಿಲ್ಲಾಡಳಿತ ಡಿಜೆ ಬಳಸದಂತೆ ನಿರ್ಬಂಧ ವಿಧಿಸಿದೆ. ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್‌ಗೆ ಜಿಲ್ಲೆಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು.
ಹಿಂದೂ ಮಹಾಗಣಪತಿ ಮಂಟಪದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು. ಬಿಜೆಪಿ ನಾಯಕರಾದ ಗೋವಿಂದ ಕಾರಜೋಳ, ಛಲವಾದಿ ನಾರಾಯಣಸ್ವಾಮಿ, ಶಾಸಕ ತಿಪ್ಪಾರೆಡ್ಡಿ, ರೇಣುಕಾಸ್ವಾಮಿ, ರವಿಕುಮಾರ್‌ಸೇರಿ ಪ್ರತಿಭಟನೆಗೆ ಸಾಥ್ ಕೊಟ್ಟರು.
ಡಿಜೆಗೆ ಅನುಮತಿ ಕೊಡಲೇಬೇಕು ಎಂದು ಪಟ್ಟುಹಾಕಿರುವ ಬಿಜೆಪಿ ನಾಯಕರು, ಹಿಂದೂ ಹಬ್ಬಗಳ ಸಂಭ್ರಮ ಕಳೆಯುವುದೇ ಜಾತ್ಯಾತೀತಯೇ? ಜ್ಯಾತ್ಯಾತೀತತೆ ಅಂದರೆ ಮುಸ್ಲಿಮರ ಜಪ ಮಾಡುವುದೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ, ಚಿತ್ರದುರ್ಗದಲ್ಲಿ ಗಣೇಶೋತ್ಸವ ಕಾರ್ಯಕ್ರಮವೊಂದರದಲ್ಲಿ ಪಾಲ್ಗೊಂಡು ಮಾತನಾಡಿದ ಯತ್ನಾಳ್, ಚಿತ್ರದುರ್ಗ ಜಿಲ್ಲೆ ಪಾಕಿಸ್ತಾನ ಅಲ್ಲ. ರಾಜ್ಯದಲ್ಲಿ ಔರಂಗಜೇಬ್ ಸರ್ಕಾರ ಇದ್ದಂತಿದೆ ಎಂದು ಹರಿಹಾಯ್ದರು.
ಮದ್ದೂರಿನಲ್ಲಿ ಬುಧವಾರ ಬಿಜೆಪಿ ನಾಯಕರು ಅಬ್ಬರಿಸಿದ್ದಾಯಿತು. ಇಂದು ಸಂಜೆ ಯತ್ನಾಳ್ ಭೇಟಿ ನೀಡಲಿದ್ದಾರೆ. ಗೃಹಸಚಿವರು ಮದ್ದೂರು ಗಲಭೆ ಸಣ್ಣ ಘಟನೆ ಎಂದಿದ್ದು ಬೇಜಾವಾಬ್ದಾರಿ ಹೇಳಿಕೆ. ರಾಜ್ಯದಲ್ಲಿ ವಿಪಕ್ಷವೇ ಇಲ್ಲ ಎಂದು ಕುಹಕವಾಡಿರುವ ಯತ್ನಾಳ್, ಮುಸ್ಲಿಂ ಆಗಿ ಹುಟ್ಟಬೇಕು ಅಂತೇಳಿದ ಶಾಸಕ ಸಂಗಮೇಶ್‌ಗೂ ತಿವಿದಿದ್ದಾರೆ.
ಬುಧವಾರ ಮದ್ದೂರಿಗೆ ತೆರಳಬೇಕಿದ್ದ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರಿನ ಬಸವನಗುಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಇದರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪುನೀತ್ ಕೆರೆಹಳ್ಳಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನನ್ನನ್ನು 36ನೇ ಬಾರಿ ಬಂಧಿಸಿದ್ದಾರೆ. ಯಾವುದೇ ರೀತಿ ನೋಟಿಸ್ ನೀಡದೆ ಅರೆಸ್ಟ್ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮಸೀದಿ ಕಡೆಯಿಂದ ಕಲ್ಲೆಸೆತ ಮಾಡಲಾಗಿದೆ, 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ: ಸಚಿವ ಚಲುವರಾಯಸ್ವಾಮಿ
ಮದ್ದೂರು ಗಲಭೆ ಟೀಕಿಸುವ ಭರದಲ್ಲಿ ಬಿಜೆಪಿ ಶಾಸಕ ಮುನಿರಾಜು, ‘‘ಭಯೋತ್ಪಾದಕರು ಅಂದರೆ ಮುಸ್ಲಿಮರು’’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮದ್ದೂರು ಗಲಭೆ ಬಗ್ಗೆ ಆರ್.ಅಶೋಕ್, ಸಿಟಿ ರವಿ ಮತ್ತಿತ್ತರ ನಾಯಕ ವಾಗ್ದಾಳಿ ಮುಂದುವರಿದಿದೆ.
ಒಟ್ಟಾರೆಯಾಗಿ, ಮದ್ದೂರು ಗಣೇಶ ಗಲಾಟೆ ನಡುವೆ ಇದೀಗ ಚಿತ್ರದುರ್ಗದಲ್ಲಿ ಡಿಜೆಗಾಗಿ ಬಿಜೆಪಿ ಮತ್ತು ಹಿಂದೂಸಂಘಟನೆಗಳು ಹೋರಾಟಕ್ಕಿಳಿದಿವೆ. ಸರ್ಕಾರ ಅನುಮತಿ ಕೊಡುತ್ತದೆಯಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
ವರದಿ: ಬಸವರಾಜ ಮುದನೂರ್, ದಿಲೀಪ್ ಚೌಡಳ್ಳಿ, ಜಗದೀಶ್ ಟಿವಿ9