ಕೊವಿಡ್ ಆಸ್ಪತ್ರೆ ನಿರ್ಮಾಣ ಮಾಡಿದರೆ ಸಾಲದು, ಚಿಕಿತ್ಸೆ ನೀಡಲು ಸಿಬ್ಬಂದಿಗಳು ಬೇಕು; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ
ವೇದಾಂತ ಮೈನ್ಸ್ ಸಂಸ್ಥೆ ನೆರವು ಹಸ್ತ ಚಾಚಿದ್ದು, ಜಿಲ್ಲಾಸ್ಪತ್ರೆ ಆವರಣದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೆಲವೇ ದಿನದಲ್ಲಿ ಆಸ್ಪತ್ರೆ ಪೂರ್ಣವಾಗಲಿದೆ. ಆದರೆ ಜಿಲ್ಲಾಸ್ಪತ್ರೆ ಸೇರಿದಂತೆ ಬಹುತೇಕ ಕಡೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ವೈದ್ಯರೇ ಇಲ್ಲದೆ ಬರೀ ಆಸ್ಪತ್ರೆ, ಬೆಡ್ ಇದ್ದರೇನು ಪ್ರಯೋಜನ. ಮೊದಲು ವೈದ್ಯಕೀಯ ಸಿಬ್ಬಂದಿ ಭರ್ತಿ ಕೆಲಸ ನಡೆಯಲಿ ಎಂಬುದು ಸ್ಥಳೀಯರ ಆಗ್ರಹ.
ಚಿತ್ರದುರ್ಗ: ಜಿಲ್ಲೆಯಲ್ಲಿ ಕೊವಿಡ್ ಸೋಂಕು ಶರವೇಗದಲ್ಲಿ ಏರಿಕೆ ಕಾಣುತ್ತಿದೆ. ಈ ಕಾರಣಕ್ಕೆ ಎಚ್ಛೆತ್ತುಕೊಂಡ ಚಿತ್ರದುರ್ಗ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಖಾಸಗಿ ಗಣಿ ಸಂಸ್ಥೆಯ ಸಹಯೋಗದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿಕೊಡುತ್ತಿದೆ. ಆದರೆ ಈ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಮಾತ್ರ ನೀಗಿಸುವ ಕೆಲಸ ಆಗುತ್ತಿಲ್ಲ. ಇದರಿಂದ ಬೇಸತ್ತ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24488 ಕ್ಕೆ ತಲುಪಿದ್ದು, 5446 ಸಕ್ರಿಯ ಪ್ರಕರಣಗಳಿವೆ. ಈಗಾಗಲೇ ಜಿಲ್ಲೆಯಲ್ಲಿ ಕೊವಿಡ್ಗೆ 129 ಮಂದಿ ಬಲಿ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ರೇಟ್ ಶೇಕಡಾ 20ರಷ್ಟಿದೆ. ಹೀಗಾಗಿ, ಆಕ್ಸಿಜನ್ ಬೆಡ್ ಸಿಗದೆ ರೋಗಿಗಳು ಪರದಾಡುವ ಸ್ಥಿತಿ ಇದೆ. ಇದರಿಂದಾಗಿ ವೇದಾಂತ ಮೈನ್ಸ್ ಸಂಸ್ಥೆ ನೆರವು ಹಸ್ತ ಚಾಚಿದ್ದು, ಜಿಲ್ಲಾಸ್ಪತ್ರೆ ಆವರಣದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೆಲವೇ ದಿನದಲ್ಲಿ ಆಸ್ಪತ್ರೆ ಪೂರ್ಣವಾಗಲಿದೆ. ಆದರೆ ಜಿಲ್ಲಾಸ್ಪತ್ರೆ ಸೇರಿದಂತೆ ಬಹುತೇಕ ಕಡೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ವೈದ್ಯರೇ ಇಲ್ಲದೆ ಬರೀ ಆಸ್ಪತ್ರೆ, ಬೆಡ್ ಇದ್ದರೇನು ಪ್ರಯೋಜನ. ಮೊದಲು ವೈದ್ಯಕೀಯ ಸಿಬ್ಬಂದಿ ಭರ್ತಿ ಕೆಲಸ ನಡೆಯಲಿ ಎಂಬುದು ಸ್ಥಳೀಯರ ಆಗ್ರಹ.
ಸುಮಾರು 25ಸಾವಿರ ಚದರ ಅಡಿಯಲ್ಲಿ ಸುಸಜ್ಜಿತ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. 20ಕ್ಕೂ ಹೆಚ್ಚು ಆಕ್ಸಿಜನ್ ಬೆಡ್, ವೆಂಟಿಲೆಟರ್ ವ್ಯವಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಉಪಕರಣಗಳು ಇರಲಿದ್ದು, ಆಸ್ಪತ್ರೆ ಕೆಲವೇ ದಿನಗಳಲ್ಲಿ ನೂತನವಾಗಿ ನಿರ್ಮಾಣ ಆಗಲಿದೆ. ಅಂತೆಯೇ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಈಗಾಗಲೇ ಕೊವಿಡ್ ನಿರ್ವಹಣೆಗಾಗಿ ವೈದ್ಯಕೀಯ ಸಿಬ್ಬಂದಿ ಭರ್ತಿಗೆ ಕರೆ ಮಾಡಿತ್ತು. 33 ವೈದ್ಯ ಹುದ್ದೆ ಭರ್ತಿಗೆ ಕರೆ ಮಾಡಿದರೆ ಅರ್ಜಿ ಹಾಕಿದ್ದು, ಮಾತ್ರ ನಾಲ್ವರು. 10ಜನ ಸ್ಪೇಷಲಿಷ್ಟ್ ಹುದ್ದೆಗೆ ಕರೆ ಮಾಡಿದ್ದು, ಯಾರೊಬ್ಬರೂ ಸುಳಿದಿಲ್ಲ. ಕೊವಿಡ್ಗಾಗಿ 213 ಜನ ವೈದ್ಯಕೀಯ ಸಿಬ್ಬಂದಿಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಕೊವಿಡ್ ತಾತ್ಕಾಲಿಕ ಸೇವೆಗಾಗಿ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಗ್ರೂಪ್ ಡಿ, ಡಾಟಾ ಎಂಟ್ರಿ ಆಪರೇಟರ್ಸ್, ಪ್ರಯೋಗ ಶಾಲಾ ತಜ್ಞರು, ಕ್ಷ ಕಿರಣ ತಂತ್ರಜ್ಞರು ಸೇರಿ ಒಟ್ಟು 113 ಜನರನ್ನು ನೇಮಿಸಲಾಗಿದೆ ಎಂದು ಡಿಹೆಚ್ ಓ ಡಾ.ಪಾಲಾಕ್ಷ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ನೂತನ ಆಸ್ಪತ್ರೆಯೇನೋ ನಿರ್ಮಾಣ ಆಗುತ್ತಿದೆ. ಆದರೆ, ವೈದ್ಯರ ನೇಮಕಕ್ಕೆ ಹಿನ್ನಡೆ ಆಗಿದ್ದು, ಜಿಲ್ಲಾಡಳಿತ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.
ಇದನ್ನೂ ಓದಿ:
ವೆಂಟಿಲೇಟರ್ ಆಪರೇಟರ್ಗಳ ಕೊರತೆ; ಉಡುಪಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹೆಚ್ಚಿದ ಒತ್ತಡ
ಗದಗ ಜಿಲ್ಲೆಯಲ್ಲಿ ಕೊವಿಡ್ ಚಿಕಿತ್ಸೆಗೆ ವೈದ್ಯರ ಅಭಾವ; ತಾತ್ಕಾಲಿಕ ನೇಮಕಾತಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನ