ಕೊರೊನಾ ಭೀತಿಯ ನಡುವೆಯೂ ವಿಜೃಂಭಣೆಯಿಂದ ನಡೆಯಿತು ಚಿತ್ರದುರ್ಗ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ

|

Updated on: Mar 30, 2021 | 12:30 PM

ಜಾತ್ರೆಯಲ್ಲಿ ಜನ ಸಮೂಹವೇ ಹರಿದು ಬಂದಿತ್ತು. ಈ ವೇಳೆ ಎಸ್​ಪಿ ಜಿ. ರಾಧಿಕಾ ಪ್ರತಿಕ್ರಿಯಿಸಿ ರಥೋತ್ಸವ ಬಳಿ‌ ಮಾತ್ರ ಒಂದಷ್ಟು ಹೆಚ್ಚು ಜನ ಸೇರಿದ್ದಾರೆ. ಉಳಿದಂತೆ ಎಲ್ಲೆಡೆ ಕಂಟ್ರೋಲ್ ಮಾಡಲಾಗಿದೆ. ಹೊರ ರಾಜ್ಯದ ಜನ ಸೇರಿದಂತೆ‌ ಇತರೆ ಹೊರಗಿನವರು ಬಾರದಂತೆ ತಡೆಯಲಾಗಿದೆ ಎಂದು ಹೇಳಿದರು.

ಕೊರೊನಾ ಭೀತಿಯ ನಡುವೆಯೂ ವಿಜೃಂಭಣೆಯಿಂದ ನಡೆಯಿತು ಚಿತ್ರದುರ್ಗ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ
ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ
Follow us on

ಚಿತ್ರದುರ್ಗ: ಮಧ್ಯ ಕರ್ನಾಟಕದ ಬೃಹತ್​ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕೊರೊನಾ ಭೀತಿಯಿಂದ ಈ ವರ್ಷ ಜಿಲ್ಲಾಡಳಿತ ಜಾತ್ರೆ‌ ರದ್ದುಗೊಳಿಸಿತ್ತು. ಆದರೆ  ಜನ  ಮಾತ್ರ ಜಾತ್ರೆಯಲ್ಲಿ ಎಂದಿನಂತೆಯೇ ಸೇರಿದ್ದು, ಆದೇಶ ಕೇವಲ ಕಾಗದಕ್ಕೆ ಸೀಮಿತವಾಯಿತು.

ಈ ನಾಡಿನ ಆರಾಧ್ಯ ದೈವ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ, ರಥೋತ್ಸವ ಎಂದಿನಂತೆಯೇ ಜರುಗಿತು. ಜಿಲ್ಲಾಡಳಿತ ತಿಂಗಳ ಹಿಂದೇ ಜಾತ್ರೆ, ರಥೋತ್ಸವ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಜಾತ್ರೆಗೆ ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತರು ಬಾರದಂತೆ ಮನವಿ ಮಾಡಿತ್ತು. ಅಂತೆಯೇ ವಾಹನಗಳ ವ್ಯವಸ್ಥೆ ಇರಲಿಲ್ಲ, ಚೆಕ್ ಪೋಸ್ಟ್ ನಿರ್ಮಿಸಿ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇನ್ನು ಗ್ರಾಮದ ಜನರು ಮಾತ್ರ ಸೇರಿ ಸಾಂಪ್ರದಾಯಿಕ ಉತ್ಸವ ಆಚರಿಸುವಂತೆ ಸೂಚಿಸಲಾಗಿತ್ತು.

ಆದರೆ ಜಾತ್ರೆಯಲ್ಲಿ ಜನ ಸಮೂಹವೇ ಹರಿದು ಬಂದಿತ್ತು. ಈ ವೇಳೆ ಎಸ್​ಪಿ ಜಿ. ರಾಧಿಕಾ ಪ್ರತಿಕ್ರಿಯಿಸಿ ರಥೋತ್ಸವ ಬಳಿ‌ ಮಾತ್ರ ಒಂದಷ್ಟು ಹೆಚ್ಚು ಜನ ಸೇರಿದ್ದಾರೆ. ಉಳಿದಂತೆ ಎಲ್ಲೆಡೆ ಕಂಟ್ರೋಲ್ ಮಾಡಲಾಗಿದೆ. ಹೊರ ರಾಜ್ಯದ ಜನ ಸೇರಿದಂತೆ‌ ಇತರೆ ಹೊರಗಿನವರು ಬಾರದಂತೆ ತಡೆಯಲಾಗಿದೆ ಎಂದು ಹೇಳಿದರು.

ಶ್ರೀಗುರು ತಿಪ್ಪೇರುದ್ರಸ್ವಾಮಿ

ಇನ್ನು ಮಾಡಿದಷ್ಟು ನೀಡು ಭಿಕ್ಷೆ ಎಂದು ಸಾರಿದ ತಿಪ್ಪೇರುದ್ರಸ್ವಾಮಿ ಈ ಭಾಗದಲ್ಲಿ ಏಳು ಕೆರೆಗಳನ್ನು ನಿರ್ಮಿಸಿ ಭಗೀರಥ ಎನಿಸಿಕೊಂಡವರು. ಜನರ ಕಷ್ಟಗಳನ್ನು ಪರಿಹರಿಸಿ ದೈವತ್ವಕ್ಕೆ ಏರಿದ ನಿಜ ಸಂತ. ಹೀಗಾಗಿ, ಇಂದಿಗೂ ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಹರಕೆ ಹೊತ್ತುಕೊಂಡು ಸಂಕಷ್ಟ ಪರಿಹಾರ ಕಂಡುಕೊಂಡ ಭಕ್ತರು ಅನೇಕರಿದ್ದಾರೆ. ಹೀಗಾಗಿ, ಜಿಲ್ಲಾಡಳಿತ ಏನೆಲ್ಲಾ ಆದೇಶ ನೀಡಿದರು ಜನರು ಮಾತ್ರ ಜಾತ್ರೆಗೆ ಬಂದು ಭಕ್ತಿಯಲ್ಲಿ ಮಿಂದೆದ್ದಿದ್ದಾರೆ.

ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಜಾತ್ರೆಯಲ್ಲಿ ಭಾಗಿಯಾದ ಜನ ಸಾಗರ

ಅನೇಕರು ತಿಪ್ಪೇರುದ್ರಸ್ವಾಮಿಗೆ ಪ್ರಿಯವಾದ ಕೊಬ್ಬರಿ‌ ಸುಟ್ಟು ಹರಕೆ ತೀರಿಸಿದರು. ಕೊಂಚ ಜನ ಕಡಿಮೆಯಾಗಿದ್ದು, ಸರಳ ಜಾತ್ರೆ ನೋಡಲು ಖುಷಿ ಆಯಿತು. ದೊಡ್ಡ ರಥೋತ್ಸವ ಎಳೆಯುವುದೇ ಅನುಮಾನವಿತ್ತು. ಕೊನೆ ಗಳಿಗೆಯಲ್ಲಿ ಭಕ್ತರ ಆಶಯಕ್ಕೆ‌ ಮಣಿದು ರಥೋತ್ಸವಕ್ಕೆ ಅವಕಾಶ ಸಿಕ್ಕಿದ್ದು, ಕಂಡು ಖುಷಿ ಆಯಿತು ಎಂದು ಭಕ್ತರಾದ ಪ್ರಿಯಾಂಕ ಹೇಳಿದ್ದಾರೆ.

ಚಿತ್ರದುರ್ಗ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಚಿತ್ರಣ

ಒಟ್ಟಾರೆಯಾಗಿ ಜಿಲ್ಲಾಡಳಿತ ಜಾತ್ರೆ ರದ್ದುಗೊಳಿಸಿದ್ದರೂ ಸಹ ಭಕ್ತರ ಉತ್ಸಾಹ ಮಾತ್ರ ಕರಗಿರಲಿಲ್ಲ. ಹೀಗಾಗಿ, ಜಾತ್ರೆ ಎಂದಿನಂತೆ ಜನ ಜಾತ್ರೆಯಾಗಿಯೇ ನಡೆದಿದ್ದು ವಿಶೇಷ. ಆದರೆ ಕೊರೊನಾ ಎಂಬ ಮಹಾಮಾರಿ ಜನರ ಭಕ್ತಿಗೆ ಕರಗಲಿದೆಯೇ ಎಂಬುದು ಮಾತ್ರ ಕಾದು ನೋಡಬೇಕಿದೆ.

ಇದನ್ನೂ ಓದಿ:

ಕೊರೊನಾ ಭೀತಿ ನಡುವೆಯೂ ಕೂಲಹಳ್ಳಿಯಲ್ಲಿ ಅದ್ದೂರಿ ಜಾತ್ರೆ: ರಥೋತ್ಸವದ ಸೊಬಗನ್ನು ಕಣ್ತುಂಬಿಕೊಂಡ ಭಕ್ತಸಾಗರ

Covid-19 Karanataka Update: ಕರ್ನಾಟಕದಲ್ಲಿ ಒಂದೇ ದಿನ 2,792 ಮಂದಿಯಲ್ಲಿ ಕೊರೊನಾ ಸೋಂಕು ದೃಢ