
ಚಿತ್ರದುರ್ಗ: ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಆಯಾ ಜಿಲ್ಲೆಯಲ್ಲಿ ಸೂಕ್ತ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಕೂಡ ನಾನಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸೋಂಕು ಹರಡುವುದನ್ನು ಕಡಿಮೆ ಮಾಡಲು ಹೋಂ ಐಸೋಲೇಷನ್ ಬದಲು ಕೊವಿಡ್ ಕೇರ್ ಸೆಂಟರ್ಗಳನ್ನು ತೆರೆದಿದೆ. ಆದರೆ ಕೊವಿಡ್ ಕೇರ್ ಸೆಂಟರ್ಗೆ ಬನ್ನಿ ಎನ್ನುತ್ತಿರುವ ಜಿಲ್ಲಾಡಳಿತದ ಮನವಿಗೆ ಕೊವಿಡ್ ಪೀಡಿತರು ಒಪ್ಪುತ್ತಿಲ್ಲ ಎನ್ನುವುದು ಸದ್ಯ ಆತಂಕ ಸೃಷ್ಟಿಮಾಡಿದೆ.
10 ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೋಂ ಐಸೋಲೇಷನ್ ಬದಲು ಕೇರ್ ಸೆಂಟರ್ ತೆರೆಯಲು ನಿರ್ಧರಿಸಿದ್ದರು. ಅಂತೆಯೇ ಜಿಲ್ಲೆಯಲ್ಲಿ ಹಲವು ಹಾಸ್ಟೆಲ್ಗಳನ್ನು ವಶಕ್ಕೆ ಪಡೆದು 22 ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಸೋಂಕಿತರಿಗಾಗಿ ಒಟ್ಟು 1042 ಬೆಡ್ ವ್ಯವಸ್ಥೆ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಹೋಂ ಐಸೋಲೇಷನ್ನಲ್ಲಿರುವ 1289 ಜನರ ಪೈಕಿ 202 ಜನ ಮಾತ್ರ ಕೊವಿಡ್ ಕೇರ್ ಸೆಂಟರ್ಗೆ ದಾಖಲಾಗಿದ್ದಾರೆ. ಹೀಗಾಗಿ, ಹೋಂ ಐಸೋಲೇಷನ್ ಮೂಲಕ ಸೋಂಕು ಹರಡುವಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ಕೊರೊನಾ ನಿಯಂತ್ರಣಕ್ಕಾಗಿ ಕೊವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ. ಅಂತೆಯೇ ಮನೆಯಲ್ಲಿ ಐಸೋಲೇಟ್ ಆಗುವ ಬದಲು ಕೇರ್ ಸೆಂಟರ್ಗೆ ಬರುವುದು ಸುರಕ್ಷಿತ. ಈ ಬಗ್ಗೆ ಸೋಂಕಿತರಿಗೆ ಮನವರಿಕೆ ಮಾಡಿ ಕೇರ್ ಸೆಂಟರ್ಗಳಿಗೆ ಶಿಫ್ಟ್ ಮಾಡಲಾಗುವುದು ಎಂದು ಡಿಹೆಚ್ಓ ಡಾ.ಪಾಲಾಕ್ಷ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೊವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡಿ ಕೇರ್ ಸೆಂಟರ್ ನಿರ್ಮಿಸಲಾಗಿದೆ. ಆದರೆ ಹೋಂ ಐಸೋಲೇಷನ್ ಇರುವ ಸೋಂಕಿತರನ್ನು ಕೇರ್ ಸೆಂಟರ್ಗೆ ಶಿಫ್ಟ್ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇನ್ನಾದರು ಅಧಿಕಾರಿಗಳು ರೂಪಿಸಿದ ಯೋಜನೆ ಯಶಸ್ವಿಯಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಕೊರೊನಾ ಕಟ್ಟಿಹಾಕಬೇಕಿದೆ.
ಇದನ್ನೂ ಓದಿ:
ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ