ಚಿತ್ರದುರ್ಗ: ಮುರುಘಾಶ್ರೀ ವಿರುದ್ಧದ ಪೋಕ್ಸೋ ಕೇಸ್ನ್ನು ತಟಸ್ಥಗೊಳಿಸಲು ಸರ್ಕಾರದಲ್ಲಿರುವ ಪ್ರಭಾವಿ ಸಚಿವರ ಕಡೆಯಿಂದ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಅವರಿಗೆ 3ಕೋಟಿ ರೂಪಾಯಿ ಹಣ ನೀಡುವ ಆಮಿಷ ತೋರಿಸಲಾಗಿದ್ದು, ಹಣ ಪಡೆದು ಮುರುಘಾಶ್ರೀ ವಿರುದ್ಧದ ಕೇಸ್ನಲ್ಲಿ ತಟಸ್ಥರಾಗುವಂತೆ ಒತ್ತಡ ಹೇರಿದ್ದಾರಂತೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮೈಸೂರಿನಲ್ಲಿ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಅವರು ಗಂಭೀರ ಆರೋಪ ಮಾಡಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ಮುರುಘಾಶ್ರೀ ಜೈಲುಪಾಲಾಗಿ ಮೂರು ತಿಂಗಳು ಕಳೆಯುತ್ತ ಬಂದಿದೆ. ಪೊಲೀಸರು ಮೊದಲ ಪೋಕ್ಸೋ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿಯಾಗಿದೆ. ಇನ್ನು ಕೋರ್ಟ್ನಲ್ಲಿ ಪ್ರಕರಣ ಆರಂಭಿಸುವುದೊಂದೆ ಬಾಕಿ ಉಳಿದಿದೆ. ಇದರ ನಡುವೆ ಒಡನಾಡಿ ಸಂಸ್ಥೆಯ ಪರಶು ಅವರ ಗಂಭೀರ ಆರೋಪಕ್ಕೆ ಮುರುಘಾಮಠ ತಿರುಗೇಟು ನೀಡಿದೆ.
ಮುರುಘಾಮಠದ ಮಾಧ್ಯಮ ವಕ್ತಾರ ಜಿತೇಂದ್ರ.ಎನ್ ಹುಲಿಕುಂಟಿ ಅವರು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ, ಒಡನಾಡಿ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಮುರುಘಾಶ್ರೀ ಹೆಸರಿಗೆ ಕಳಂಕ ತರಲು ಈ ರೀತಿ ಹೇಳಿಕೆ ನೀಡಿದ್ದಾರೆ. ಒಡನಾಡಿ ಸಂಸ್ಥೆಯ ಜತೆ ಸಂಧಾನ ಮಾಡಿಕೊಳ್ಳುವ ಅಗತ್ಯ ನಮಗಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆಯಿದೆ. ಒಡನಾಡಿ ಸಂಸ್ಥೆಯ ಪರಶು ಬಳಿ 3ಕೋಟಿ ರೂ. ಆಮಿಷವೊಡ್ಡಿದ ಸಾಕ್ಷಿಗಳನ್ನು ಸಿಎಂ, ರಾಜ್ಯಪಾಲರು ಮತ್ತು ಅಧಿಕಾರಿಗಳಿಗೆ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಮೊದಲು ಆಮಿಷವೊಡ್ಡಿದವರು ಯಾರು ಎಂದು ಪರಶು ಬಹಿರಂಗ ಪಡಿಸಲಿ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಶು ಅವರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಹಾಗೂ ಒಡನಾಡಿ ಸಂಸ್ಥೆಯ ಪರಶು ಅವರು ಸರ್ಕಾರದ ಮಂತ್ರಿಯೊಬ್ಬರು ಆಮಿಷ ಒಡ್ಡಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳಿಂದ ಈ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಮುರುಘಾಮಠದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ
ದಾಖಲಾದ ಬಳಿಕ ಒಂದಲ್ಲಾ ಒಂದು ಕಾರಣಕ್ಕೆ ನಿತ್ಯ ಸುದ್ದಿಯಲ್ಲಿದೆ. ಹೀಗಾಗಿ, ಪೊಲೀಸರು ಪ್ರಕರಣದ ಬಗ್ಗೆ ಸಮಗ್ರ
ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕಾಗಿದೆ.
ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ