Chitradurga News: ಶಿವಮೂರ್ತಿ ಮುರುಘಾ ಶರಣರ ಪೀಠತ್ಯಾಗದ ಪರ-ವಿರುದ್ಧದ ಚರ್ಚೆ ಮತ್ತೆ ಚುರುಕು, ಶೀಘ್ರದಲ್ಲಿಯೇ ಮತ್ತೊಂದು ಸಭೆಯ ಸಾಧ್ಯತೆ

ಶಿವಮೂರ್ತಿ ಮುರುಘಾ ಶರಣರ ಬೆಂಬಲಿಗರು ಗಾಂಧಿ ಜಯಂತಿಯಂದು ಮುರುಘಾ ಮಠದಲ್ಲಿ ಸರ್ವಧರ್ಮ ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Chitradurga News: ಶಿವಮೂರ್ತಿ ಮುರುಘಾ ಶರಣರ ಪೀಠತ್ಯಾಗದ ಪರ-ವಿರುದ್ಧದ ಚರ್ಚೆ ಮತ್ತೆ ಚುರುಕು, ಶೀಘ್ರದಲ್ಲಿಯೇ ಮತ್ತೊಂದು ಸಭೆಯ ಸಾಧ್ಯತೆ
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 30, 2022 | 12:36 PM

ಚಿತ್ರದುರ್ಗ: ಪೊಕ್ಸೋ ಪ್ರಕರಣದ ಆರೋಪ ಹೊತ್ತು ಜೈಲು ಸೇರಿರುವ ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ (ಸೆ 29) ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ನಿನ್ನೆ ಎಸ್.ನಿಜಲಿಂಗಪ್ಪ ಸ್ಮಾರಕದ ಆವಣರದಲ್ಲಿ ನಡೆದಿದ್ದ ವೀರಶೈವ-ಲಿಂಗಾಯತರ ಸಮಾಲೋಚನಾ ಸಭೆಯಲ್ಲಿ ‘ಮಠದ ಪೀಠಾದ್ಯಕ್ಷ ಸ್ಥಾನದಿಂದ ಶಿವಮೂರ್ತಿ ಮುರುಘಾ ಶರಣರನ್ನು ವಜಾ ಮಾಡಿ, ಹೊಸ ಪೀಠಾಧ್ಯಕ್ಷರನ್ನು ನೇಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದು ನಿರ್ಧರಿಸಲಾಗಿತ್ತು.

ಈ ಸಭೆಯ ನಿರ್ಣಯವನ್ನು ವಿರೋಧಿಸಿರುವ ಶಿವಮೂರ್ತಿ ಶರಣರ ಬೆಂಬಲಿಗರು ಗಾಂಧಿ ಜಯಂತಿಯಂದು (ಅಕ್ಟೋಬರ್ 2) ಮುರುಘಾ ಮಠದಲ್ಲಿ ಸರ್ವಧರ್ಮ ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಚರ್ಚಿಸಲು ಮಠದಲ್ಲಿ ಶಿವಮೂರ್ತಿ ಶರಣರ ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಸಭೆ ನಡೆದ ಬಗ್ಗೆ ಅಧಿಕೃತವಾಗಿ ಮಠದ ವತಿಯಿಂದ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಅಕ್ಟೋಬರ್ 2ರ ಸರ್ವಧರ್ಮ ಸಭೆಯು ಮಠದ ಪ್ರಭಾರ ಪೀಠಾದ್ಯಕ್ಷ ಮಹಾಂತ ರುದ್ರೇಶ್ವರ ಶ್ರೀ ನೇತೃತ್ವದಲ್ಲಿ ನಡೆಯಬಹುದು. ವಿವಿಧ ಮಠಗಳ ಮಠಾಧೀಶರು ಮತ್ತು ಮುಖಂಡರು ಸಭೆಯಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.

ಮಠದಲ್ಲಿ ನಡೆದ ಸಭೆಯಲ್ಲಿ ಶಿವಮೂರ್ತಿ ಶರಣರ ವಿರುದ್ಧದ ಆರೋಪದ ಸುದೀರ್ಘ ಚರ್ಚೆ ನಡೆಯಿತು. ಮುರುಘಾಶ್ರೀ ಪೀಠ ತ್ಯಾಗ ಮಾಡಬೇಕೆಂಬ ಒತ್ತಾಯ ಖಂಡಿಸಲು ನಿರ್ಧರಿಸಲಾಯಿತು. ಮಠದ ಪರಂಪರೆ, ಪೂಜಾ ಕೈಂಕರ್ಯ, ಆಡಳಿತವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವ ಬಗ್ಗೆಯೂ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ಮನವಿ ಸಲ್ಲಿಸಲು ಭಕ್ತರ ಸಭೆ ನಿರ್ಧಾರ

ಪೊಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪದಚ್ಯುತಿಗೊಳಿಸಿ, ಹೊಸ ಪೂರ್ಣಕಾಲೀನ ಪೀಠಾಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡಬೇಕು ಎಂದು ಮನವಿ ಸಲ್ಲಿಸಲು ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ನಿನ್ನೆ (ಸೆ 29) ನಡೆದಿದ್ದ ಸಭೆ ನಿರ್ಧರಿಸಿತ್ತು. ಪ್ರಸ್ತುತ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೀಠಾಧ್ಯಕ್ಷರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಿದೆ. ಮಠದ ಧಾರ್ಮಿಕ, ಆಡಳಿತಾತ್ಮಕ ಚಟುವಟಿಕೆಗೆ ಅಡೆತಡೆ ಆಗಿದೆ. ಇಂಥ ಸಂದರ್ಭದಲ್ಲಿ ಹೊಸ ಪೀಠಾಧ್ಯಕ್ಷರ ನೇಮಕ ಅಗತ್ಯವಾಗಿದೆ. ಸರ್ಕಾರವು ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಲವು ಅಭಿಪ್ರಾಯಪಟ್ಟಿದ್ದರು.

ಸಭೆಯ ನಂತರ ಮಾತನಾಡಿದ್ದ ಏಕಾಂತಯ್ಯ, ಸರ್ಕಾರ ಮತ್ತು ನ್ಯಾಯಾಲಯಕ್ಕೆ ಹೊಸ ಪೀಠಾಧ್ಯಕ್ಷೆ ಬಗ್ಗೆ ತೀರ್ಮಾನ ಮಾಡಲು ಅಧಿಕಾರವಿದೆ. ಕಾನೂನಾತ್ಮಕ ಅಥವಾ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಯನ್ನು ಮುಖತಃ ಭೇಟಿ ಮಾಡಿ ಪರಿಸ್ಥಿತಿ ವಿವರಿಸಲು ತೀರ್ಮಾನಿಸಿದ್ದೇವೆ. ಈಗಿನ ಪೀಠಾದ್ಯಕ್ಷರನ್ನು ವಜಾಗೊಳಿಸಿ ಹೊಸಬರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದರು.