ಚಿತ್ರದುರ್ಗ, (ಸೆಪ್ಟೆಂಬರ್ 06): ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ(Rain) ಕೈಕೊಟ್ಟಿದ್ದರಿಂದ ಬೆಳೆ ಇಲ್ಲದೇ ರೈತರು(Farmers) ಕಂಗಾಲಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಬರ (drought) ಕಾಡುತ್ತಿದ್ದು, ಹಲವು ತಾಲೂಕುಗಳನ್ನು ಬರಪೀಡಿತ(drought hit taluks) ಎಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇನ್ನು ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ(Krishna Byre Gowda) ಇಂದು (ಸೆಪ್ಟೆಂಬರ್ 06) ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ಆಗಸ್ಟ್ 18ಕ್ಕೆ ಮಳೆ ಕೊರೆತೆ ಇರುವ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದೇವೆ. ಒಂದು ಸುತ್ತಿನ ಬೆಳೆ ಸಮೀಕ್ಷೆ ಪ್ರಕಾರ 62 ತಾಲೂಕು ಬರ ಪಟ್ಟಿಗೆ ಸೇರಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಬರ ಪಟ್ಟಿಗೆ ಆಯ್ಕೆಯಾಗಿದೆ ಎಂದು ಮಾಹಿತಿ ನೀಡಿದರು.
ಇನ್ನೊಂದು ಸುತ್ತು ಬೆಳೆ ಸಮೀಕ್ಷೆ ಮಾಡಬೇಕು ಎಂದಾಗ ಉಳಿದ 51 ತಾಲೂಕು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ 2ಕ್ಕೆ 83 ತಾಲ್ಲೂಕು ಬರ ಪಟ್ಟಿಗೆ ಸೇರಿಸಲು ಸೂಚನೆ ನೀಡಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಮೀಕ್ಷೆ ವರದಿ ಬರುತ್ತದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಬರ ಘೋಷಣೆ ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಕೂಡಾ ನಾವು ನೀಡುತ್ತೇವೆ ಎಂದು ಹೇಳಿದರು.
ಎಲ್ಲಿ ಬರ ಇದೆ ಅಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡುತ್ತೇವೆ. ಮೇವಿನ ಕೊರತೆ ಆಗಬಾರದು ಎಂದು ರೈತರಿಗೆ 20 ಕೋಟಿ ರೂ. ವೆಚ್ಚದಲ್ಲಿ ಉಚಿತ ಮೇವಿನ ಬೀಜ ನೀಡುತ್ತೇವೆ. ಬರ ಪ್ರದೇಶದಲ್ಲಿ ನರೇಗಾದಲ್ಲಿ 150 ಉದ್ಯೋಗ ಖಾತ್ರಿ ಕೆಲಸ ನೀಡಲು ಚಿಂತನೆ ಮಾಡಿದ್ದೇವೆ. ಜಿಲ್ಲಾಧಿಕಾರಿ ಖಾತೆಯಲ್ಲಿ 529 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿ ಬದಲಾವಣೆಗೆ ಮನವಿ ಮಾಡುತ್ತೇವೆ. ಜನರ ನಿರೀಕ್ಷೆಯಂತೆ ಬರ ಘೋಷಣೆ ಮಾಡಲು ಆಗಲ್ಲ. ನಮ್ಮ ಸರ್ಕಾರ ಬಂದ ಬಳಿಕ ಪತ್ರ ಬರೆದಿದ್ದೇವೆ. ಇನ್ನೊಂದು ಬಾರಿ ಮಾನದಂಡ ಬದಲಾವಣೆ ಮಾಡಿ ಎಂದು ಮನವಿ ಮಾಡುತ್ತೇವೆ. ಜನರಿಗೆ ನ್ಯಾಯ ಕೊಡಲು ಕೇಂದ್ರ ಸರ್ಕಾರದ ಮಾನದಂಡ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.
ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:07 pm, Wed, 6 September 23