ಚಿತ್ರದುರ್ಗ, ಮೇ.23: ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಮೇಣದಬತ್ತಿ ಬೆಳಕಲ್ಲಿ ಚಿಕಿತ್ಸೆ ನೀಡಿದ್ದ ವಿಡಿಯೋ ವೈರಲ್ (Video Viral) ಆಗಿದ್ದು ವೈದ್ಯನಿಗೆ ಮೊಳಕಾಲ್ಮೂರು ಶಾಸಕ ಗೋಪಾಲಕೃಷ್ಣ (NY Gopalakrishna) ತರಾಟೆಗೆ ತೆಗೆದುಕೊಂಡಿದ್ದಾರೆ. ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆ ದುಸ್ಥಿತಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಶಾಸಕ ಎನ್ ವೈ ಗೋಪಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯ ಡಾ.ಸುದೀಂದ್ರಬಾಬುಗೆ ತರಾಟೆ ತೆಗೆದುಕೊಂಡಿದ್ದಾರೆ. ಶಾಸಕ ಹಾಗೂ ವೈದ್ಯನ ನಡುವೆ ಜಟಾಪಟಿ ನಡೆದಿದೆ.
ಆಸ್ಪತ್ರೆ ಬಂದ ಶಾಸಕ ಸೀದಾ ವೈದ್ಯ ಸುಧೀಂದ್ರಬಾಬು ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವೈರಲ್ ವಿಡಿಯೋದಲ್ಲಿ ನೀವಿದ್ದೀರಿ. ಆಸ್ಪತ್ರೆಯಲ್ಲಿ ಸಮಸ್ಯೆ ಇದ್ದರೆ ನನಗೆ ತಿಳಿಸಬೇಕಿತ್ತು ಎಂದು ವೈದ್ಯ ಸುದೀಂದ್ರಬಾಬು ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ವೈದ್ಯ, ವೈರಲ್ ವಿಡಿಯೋಗೂ ನನಗೂ ಸಂಬಂಧವಿಲ್ಲ. ವಿಡಿಯೋ ಯಾರು ತೆಗೆದಿದ್ದಾರೋ ಗೊತ್ತಿಲ್ಲ ಎಂದು ಉತ್ತರಿಸಿದ್ದು ಶಾಸಕರೆದುರೇ ಬೇಜವಬ್ದಾರಿ ಉತ್ತರ ನೀಡುತ್ತಿದ್ದೀರಿ ಎಂದು ಶಾಸಕರ ಬೆಂಬಲಿಗರು ಗರಂ ಆದ ಘಟನೆ ನಡೆಯಿತು.
ಕೈತೋರಿಸಿ ಮಾತಾಡಬೇಡಿ ಎಂದು ಬೆಂಬಲಿಗರು ವೈದ್ಯರ ಕೈ ಕೆಳಗಿಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಆಗ ವೈದ್ಯಾಧಿಕಾರಿ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ವೈದ್ಯ ಪ್ರಶ್ನಿಸಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಂದು ವೈದ್ಯ ಸುದೀಂದ್ರಬಾಬು ಕಿಡಿಕಾರಿದ್ರು. ಶಾಸಕರ ಎದುರೇ ವೈದ್ಯ ಮತ್ತು ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ನನ್ನ ಮೇಲೆ ಆಪಾದನೆ ಮಾಡುವುದು ಅರ್ಥಹೀನ ಎಂದ ವೈದ್ಯ ಕೂಗಾಡಿದ್ದು ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಕೊನೆಗೆ ವೈದ್ಯನಿಗೆ ಕೈಮುಗಿದು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸೋಣ ಎಂದ ಆಸ್ಪತ್ರೆಯಿಂದ ತೆರಳಿದರು.
ಇದನ್ನೂ ಓದಿ: ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವು, ಮತ್ತೋರ್ವನಿಗೆ ಮುಂದುವರೆದ ಚಿಕಿತ್ಸೆ
ಪ್ರಕರಣದ ಬಗ್ಗೆ ತನಿಖೆ ನಡೆಸೋಣವೆಂದು ಎನ್ ವೈ ಗೋಪಾಲಕೃಷ್ಣ ತಿಳಿಸಿದ್ದಾರೆ. ಮತ್ತೊಂದೆಡೆ ವೈದ್ಯರ ಉದ್ಧಟತನದ ಬಗ್ಗೆ ಶಾಸಕ ಗೋಪಾಲಕೃಷ್ಣ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.
ಮೇ 21ರಂದು ಮೊಳಕಾಲ್ಮೂರು ಆಸ್ಪತ್ರೆಯ ವಿಡಿಯೋ ವೈರಲ್ ಆಗಿತ್ತು. ಭಾರೀ ಮಳೆಯಿಂದಾಗಿ ಕಳೆದೊಂದು ವಾರದಿಂದ ಸರಿಯಾಗಿ ಕರೆಂಟ್ ಇಲ್ಲದೆ ಮೊಳಕಾಲ್ಮೂರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ವೈದ್ಯರು ಪರದಾಡುವಂತಾಗಿತ್ತು.
ಆಸ್ಪತ್ರೆಯಲ್ಲಿ ಅಳವಡಿಸಿದ್ದ ಜನರೇಟರ್ ಕೆಟ್ಟು ರಿಪೇರಿ ಮಾಡಿಸಿರಲಿಲ್ಲ. ವೈದ್ಯರು ಮೊಬೈಲ್ ಟಾರ್ಚ್ ಮತ್ತು ಮೇಣದಬತ್ತಿ ಹಚ್ಚಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಈ ರೀತಿ ಚಿಕಿತ್ಸೆ ನೀಡುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ