ಚಿತ್ರದುರ್ಗ: ಚಿತ್ರದುರ್ಗದ ಪ್ರವಾಸಿ ಮಂದಿರ ಬಳಿ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ರೋಡ್ ಡಿವೈಡರ್ಗೆ ಕಾರ್ ಡಿಕ್ಕಿಯಾಗಿ ಕಾರ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಈವರೆಗೆ ಮೃತರ ಗುರುತು ಪತ್ತೆ ಆಗಿಲ್ಲ. ಇಬ್ಬರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿತ್ರದುರ್ಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿಗಳನ್ನು ಸಾಗಿಸುತ್ತಿದ್ದ ವಾಹನ ಅಪಘಾತ
ಕಾರವಾರ: ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ತಾಲೂಕು ಆಸ್ಪತ್ರೆ ಬಳಿ ಕುರಿಗಳನ್ನ ಸಾಗಿಸುತ್ತಿದ್ದ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 7 ಕುರಿಗಳು ಮೃತಪಟ್ಟಿವೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಾಹನದಲ್ಲಿ 30ಕ್ಕೂ ಅಧಿಕ ಕುರಿಗಳನ್ನು ಸಾಗಿಸಲಾಗುತ್ತಿತ್ತು. ಡಿಕ್ಕಿಯಾದ ರಭಸಕ್ಕೆ ವಾಹನ ಜಖಂ ಆಗಿದ್ದು ವಾಹನದ ಹಿಂಬದಿ ಕುಳಿತಿದ್ದ ಕುರಿಗಾಹಿ ಕಾಲು ಮುರಿದಿದೆ. ಗಾಯಾಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಡರಾತ್ರಿ 2 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.
ಮೈಸೂರಿನಲ್ಲಿ ಹೆಚ್ಚುತ್ತಿರುವ ಗಾಂಜಾ ಇಸ್ಪೀಟ್ ದಂಧೆ
ಮೈಸೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಗಾಂಜಾ ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದವರನ್ನು ಅರೆಸ್ಟ್ ಮಾಡಿದ್ದಾರೆ. ನೆನ್ನೆಯಷ್ಟೇ ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ದಂಧೆಯಲ್ಲಿ ಮತ್ತಷ್ಟು ಜನರು ಇರುವ ಬಗ್ಗೆ ಮಾಹಿತಿ ನೀಡಿದ್ದರು. ನಿನ್ನೆ ಸಿಸಿಬಿ ಪೊಲೀಸರು ಕೊಡಗಿನ ದರ್ಶನ್ ಕುಮಾರ್ (26), ಮೈಸೂರು ಮಂಡಿ ಮೊಹಲ್ಲಾದ ಸಯ್ಯದ್ ಅರ್ಫಾತ್ (28), ಕೊಡಗಿನ ಹ್ಯಾರಿಸ್ (28) ಹಾಗೂ ಎರಡನೇ ಪ್ರಕರಣದಲ್ಲಿ ಗೌಸಿಯಾ ನಗರದ ರಿಯಾಜ್ (24) ಬಂಧಿಸಲಾಗಿತ್ತು. ಬಂಧಿತರು ನೀಡಿರುವ ಮಾಹಿತಿ ಆಧರಿಸಿ ಅದರಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇವರ ಬಳಿ ಇದ್ದ 23 ಲಕ್ಷ ರೂ ಮೌಲ್ಯದ 46 ಕೆ.ಜಿ. 691 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ. 10 ಸಾವಿರ ನಗದು, 3 ಮೊಬೈಲ್ ಫೋನ್ ಒಂದು ಕಾರು ವಶಪಡಿಸಿಕೊಳ್ಳಲಾಗಿತ್ತು. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮಸ್ಥರಿಗೆ ಗುತ್ತಿಗೆದಾರ ಆವಾಜ್
ಕಳಪೆ ರಸ್ತೆ ಕಾಮಗಾರಿ ಗುಣಮಟ್ಟ ಪ್ರಶ್ನಿಸಿದ ಗ್ರಾಮಸ್ಥರಿಗೆ ಗುತ್ತಿಗೆದಾರ ಆವಾಜ್ ಹಾಕಿದ ಘಟನೆ ಹುಣಸೂರು ತಾಲ್ಲೂಕು ದೇವಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಸಕರ ಅನುದಾನದಲ್ಲಿ ರಸ್ತೆ ಕಳಪೆ ಕಾಮಗಾರಿ ಮಾಡಿರುವ ಆರೋಪ ಮಾಡಿದ್ದು ಗುಣಮಟ್ಟದ ಬಗ್ಗೆ ಗುತ್ತಿಗೆದಾರನಿಗೆ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈ ವೇಳೆ ಗುತ್ತಿಗೆದಾರ ಗ್ರಾಮಸ್ಥರಿಗೆ ಆವಾಜ್ ಹಾಕಿ ಹೋಗಿದ್ದಾನೆ. ಸದ್ಯ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:20 am, Tue, 25 October 22