ಚಿತ್ರದುರ್ಗ: ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಘೋಷಣೆ ಬೆನ್ನಲ್ಲೆ ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಆಧಾರ ಸ್ತಂಭವಿದ್ದಂತೆ. ಬಿಎಸ್‌ವೈ ರಾಜೀನಾಮೆಯಿಂದ ನಮ್ಮ ಬಲ ಕುಸಿದ ಭಾವನೆ ಎಂದರು.
ಈ ವೇಳೆ ಮಾತನಾಡುತ್ತ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಸರೇಳುವವರಿಲ್ಲದಾಗ ಪಕ್ಷ ಕಟ್ಟಿದ್ದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದರು. ನಮ್ಮಂಥವರನ್ನು ಗೆಲ್ಲಿಸಲು ಯುವಕರಂತೆ ಪ್ರವಾಸ ಮಾಡಿದರು.224ಕ್ಷೇತ್ರಗಳಲ್ಲಿ ಬಿಎಸ್ ವೈ ಸುಂಟರಗಾಳಿಯಂತೆ ತಿರುಗಿದರು. ಬಿಎಸ್ ವೈ ರಾಜೀನಾಮೆಯಿಂದ ವಿರೋಧಿಗಳಲ್ಲೂ ದುರದೃಷ್ಠ ಎಂಬ ಭಾವನೆ. ವೀರಶೈವ ಮಾತ್ರವಲ್ಲದೆ ಪ್ರತಿ ಮಠಗಳಿಗೂ ನೆರವು ನೀಡಿದ್ದಾರೆ. ಬಿಎಸ್ವೈರಂತ ಉನ್ನತ ಮಟ್ಟದ ನಾಯಕತ್ವ ನಮ್ಮ ಪಕ್ಷದಲ್ಲಿ ವಿರಳ. ಈಗ ಬಿಎಸ್ವೈ ಭೇಟಿ ಮಾಡಲು ತೆರಳುವೆ. ಇವರು ಪಕ್ಷಾತೀತ, ಜಾತ್ಯಾತೀತ ನಾಯಕ. ಬಿಎಸ್ ವೈ ರಾಜೀನಾಮೆ ಘೋಷಣೆ ವೇಳೆ ಸಹಜ ನೋವಾಗಿತ್ತು. ಪಕ್ಷ ಬೇರೆ ಉನ್ನತ ಸ್ಥಾನ ನೀಡಿ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಮುಂದಿನ ಸಿಎಂ, ಸಚಿವ ಸಂಪುಟ ಬಗ್ಗೆ ರಾಷ್ಟ್ರೀಯ ನಾಯಕರಿಂದ ತೀರ್ಮಾನ ಮಾಡಲಾಗುತ್ತೆ. ಈ ವೇಳೆ ಸಚಿವ ಸ್ಥಾನದ ಬಗ್ಗೆ ಕೇಳುವುದು ಸಣ್ಣತನ ಆಗುತ್ತದೆ. ಪಕ್ಷದ ಆದೇಶವನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದರು.
ನಾನು ಶಾಸಕನಾಗುವುದಕ್ಕೆ ಯಡಿಯೂರಪ್ಪನವರೇ ಕಾರಣ
ಇನ್ನು ಇದೇ ರೀತಿ ಮೈಸೂರಿನಲ್ಲಿ ಬಿಜೆಪಿ ಶಾಸಕ ಎಲ್.ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. BSY ರಾಜೀನಾಮೆಯಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ನಾನು ಶಾಸಕನಾಗುವುದಕ್ಕೆ ಯಡಿಯೂರಪ್ಪನವರೇ ಕಾರಣ. ನನ್ನ ಕೆಲಸ ಗಮನಿಸಿ ಬಿಎಸ್‌ವೈ ನನಗೆ ಟಿಕೆಟ್ ಕೊಡಿಸಿದ್ದರು. ರಾಜ್ಯದ ಅಭಿವೃದ್ಧಿಗೆ ಶ್ರಮವಹಿಸಿದ ನಾಯಕ ಯಡಿಯೂರಪ್ಪ. ಇಂತಹ ವಯಸ್ಸಿನಲ್ಲೂ ರಾಜ್ಯಾದ್ಯಂತ ಸಂಚಾರ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಬಿಜೆಪಿ ಅಗ್ರಗಣ್ಯ ನಾಯಕ ಬಿಎಸ್ವೈ ಅವರ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಶಿಸ್ತಿನ ಪಕ್ಷ, ಹಾಗಾಗಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಇದನ್ನೂ ಓದಿ: ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಹೇಳಿಕೆ ವಿಚಾರ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀನಿವಾಸ ಪ್ರಸಾದ್ ಲೆಫ್ಟ್-ರೈಟ್