ಚಿತ್ರದುರ್ಗ, ಡಿಸೆಂಬರ್ 29: ನಗರದ ಚಳ್ಳಕೆರೆ (Challakere) ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರ (Skeleton) ಪತ್ತೆ ಆಗಿವೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಪ್ರತಿಕ್ರಿಯಿಸಿದ್ದು, ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತೆ. ಕೆಲ ದಿನಗಳಿಂದ ಜಗನ್ನಾಥರೆಡ್ಡಿ ಮನೆಯ ಬಾಗಿಲು ತೆರೆದಿತ್ತು. ನಿನ್ನೆ ಸಂಜೆ ವೇಳೆ ಅಸ್ಥಿಪಂಜರ ಪತ್ತೆ ಎಂದು ಸ್ಥಳೀಯರಿಂದ ಮಾಹಿತಿ ದೊರೆತಿದೆ. ಈ ಸಂಬಂಧ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಎಂಬುವವರು ಆತ್ಮಹತ್ಯೆಗೆ ಶರಣಾಗಿರುವ ಅನುಮಾನವಿದೆ ಎಂದು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಚೀಟಿಯೊಂದು ಸಿಕ್ಕಿದೆ, ಪರಿಶೀಲನೆ ನಡೆಸುತ್ತಿದ್ದೇವೆ. ಪುತ್ರ ನರೇಂದ್ರರೆಡ್ಡಿ ವಿರುದ್ಧ ಬಿಡದಿ ಠಾಣೆಯಲ್ಲಿ ದರೋಡೆ ಕೇಸ್ ಇತ್ತು. ಜಗನ್ನಾಥರೆಡ್ಡಿ ಕುಟುಂಬ 3-4 ವರ್ಷದಿಂದ ಯಾರಿಗೂ ಕಾಣಿಸಿಕೊಂಡಿಲ್ಲ. ಹತ್ತು ವರ್ಷಗಳಿಂದಲೂ ಸಂಬಂಧಿಕರು, ಸ್ನೇಹಿತರಿಂದ ದೂರವಾಗಿದ್ದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಸಿಕ್ಕ ಪ್ರಕರಣ: ಆತ್ಮಹತ್ಯೆ ಮಾಡಿಕೊಂಡಿತಾ ಜಗನ್ನಾಥರೆಡ್ಡಿ ಕುಟುಂಬ?
2019ರ ಜನವರಿಯಲ್ಲಿ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಮೃತಪಟ್ಟು ಹಲವು ವರ್ಷಗಳಾದರೂ ಯಾರಿಗೂ ತಿಳಿದಿಲ್ಲ. ಆತ್ಮಹತ್ಯೆ, ಕೊಲೆ, ಆರೋಗ್ಯ ಸಮಸ್ಯೆ ಸೇರಿ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದ್ದು, ನಾಳೆ ಮರಣೋತ್ತರ ಪರೀಕ್ಷೆ ನಡೆಯಲಿದೆ, ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ಡೆತ್‌ನೋಟ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ರಾಬರಿ ಕೇಸ್ ದಾಖಲಾಗಿತ್ತು. 2013ರಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ನರೇಂದ್ರರೆಡ್ಡಿ, ಗೆಳೆಯರ ಜೊತೆ ತೆರಳಿ ದರೋಡೆ ಕೇಸ್‌ನಲ್ಲಿ ಭಾಗಿ ಆಗಿದ್ದ.
ಇದನ್ನೂ ಓದಿ: ಚಿತ್ರದುರ್ಗ: ಪಾಳುಬಿದ್ದ ಮನೆಯಲ್ಲಿ ನಿಗೂಢ ಐದು ಅಸ್ಥಿಪಂಜರ ಪತ್ತೆ
2013ರಲ್ಲಿ ಬಿಡದಿ ಬಳಿ ವಾಹನ ತಡೆದು ದರೋಡೆ ಮಾಡಿದ್ದರು. ದರೋಡೆ ಕೇಸ್‌ನಲ್ಲಿ ಕೆಲ ದಿನ ಜೈಲುಪಾಲಾಗಿದ್ದ. ಪುತ್ರನ ವಿರುದ್ಧದ ಕೇಸ್‌ನಿಂದ ನೊಂದು 2019ರಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುವುದು ಸದ್ಯ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.