ಚಿತ್ರದುರ್ಗದಲ್ಲಿ ನೂತನ ವೃತ್ತಗಳು, ಹೊಸ ವಿಗ್ರಹಗಳ ಸ್ಥಾಪನೆ; ಕ್ಯಾರೆ ಎನ್ನದ ಜಿಲ್ಲಾಡಳಿತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2023 | 8:18 PM

ಕೋಟೆನಾಡು ಚಿತ್ರದುರ್ಗ ನಗರದಲ್ಲಿ ನೂತನ ವೃತ್ತಗಳು, ಹೊಸ ವಿಗ್ರಹಗಳ ಸ್ಥಾಪನೆ ನಡೆಯುತ್ತಲೇ ಇದೆ. ಯಾವುದೇ ನಿಯಮ ಪಾಲಿಸದೆ ಹೊಸ ಸರ್ಕಲ್​ಗಳು ಹುಟ್ಟಿಕೊಳ್ಳುತ್ತಿವೆ. ಆದ್ರೂ, ನಗರಸಭೆ ಮತ್ತು ಜಿಲ್ಲಾಡಳಿತ ಮಾತ್ರ ಸೈಲೆಂಟಾಗಿದೆ. 

ಚಿತ್ರದುರ್ಗದಲ್ಲಿ ನೂತನ ವೃತ್ತಗಳು, ಹೊಸ ವಿಗ್ರಹಗಳ ಸ್ಥಾಪನೆ; ಕ್ಯಾರೆ ಎನ್ನದ ಜಿಲ್ಲಾಡಳಿತ
ಚಿತ್ರದುರ್ಗ
Follow us on

ಚಿತ್ರದುರ್ಗ, ಡಿ.10: ಕೋಟೆನಾಡು ಚಿತ್ರದುರ್ಗ(Chitradurga)ದಲ್ಲಿ ಪರವಾನಿಗೆ ಇಲ್ಲದೆ ರಾತೋರಾತ್ರಿ ಶ್ರೀಕೃಷ್ಣ ವೃತ್ತ ರಚನೆ, ಕೃಷ್ಣ ವಿಗ್ರಹ(Statue)ಸ್ಥಾಪನೆಯಾಗುತ್ತಿದೆ. ಆದರೆ, ನಗರಸಭೆ ಮತ್ತು ಜಿಲ್ಲಾಡಳಿತ ಜಾಣ ಮೌನ ವಹಿಸಿದೆ. ಕೆಲ ತಿಂಗಳ ಹಿಂದಷ್ಟೇ ಮಾಳಪ್ಪನಹಟ್ಟಿ ಬಳಿ ರಾತೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಿ ಹೊಸ ವೃತ್ತ ರಚನೆ ಮಾಡಲಾಗಿತ್ತು. ಇದೀಗ ಹೊಳಲ್ಕೆರೆ ರಸ್ತೆಯಲ್ಲಿ ಶ್ರೀಕೃಷ್ಣ ವಿಗ್ರಹ ಸ್ಥಾಪಿಸಿ, ಶ್ರೀಕೃಷ್ಣ ವೃತ್ತ ಸ್ಥಾಪನೆ ಆಗಿದೆ. ಆದ್ರೆ, ನೂತನ ವಿಗ್ರಹ ಸ್ಥಾಪನೆಗೆ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಸಹ ಅಧಿಕಾರಿಗಳು ಸೈಲೆಂಟಾಗಿದ್ದಾರೆ.

ಇನ್ನು ವಿಗ್ರಹ ಸ್ಥಾಪಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಶ್ನಿಸುತ್ತಾರಾದರು, ಬಳಿಕ ಯಾವುದೇ ಕ್ರಮ ಮಾತ್ರ ಕೈಗೊಂಡಿಲ್ಲ. ಈ ಕುರಿತು ಯಾದವ ಸಮುದಾಯದ ಮುಖಂಡರಾದ ಉಗ್ರೇಶ್ ಮಾತನಾಡಿ ‘ ಚಿತ್ರದುರ್ಗದಲ್ಲಿ ಎಲ್ಲಾ ಸಮುದಾಯದವರು ಸಾಂಸ್ಕೃತಿಕ ನಾಯಕರ ವಿಗ್ರಹ ಸ್ಥಾಪಿಸಿ ವೃತ್ತ ರಚಿಸಿದ್ದಾರೆ. ಅಂತೆಯೇ ಯಾದವ ಸಮುದಾಯ ಹೆಚ್ಚಾಗಿರುವ ದುರ್ಗದಲ್ಲೇ ಶ್ರೀಕೃಷ್ಣ ವೃತ್ತ, ಪುಥ್ಥಳಿ ಇಲ್ಲದ ಕಾರಣ ಶ್ರೀಕೃಷ್ಣ ವಿಗ್ರಹ ಸ್ಥಾಪಿಸಿ ವೃತ್ತ ಸ್ಥಾಪಿಸಿದ್ದೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ:ಹಾಸನದಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ; ಸಿದ್ದರಾಮಯ್ಯ ನೋಡಲು ಓಡಿ ಬಂದ ಅಭಿಮಾನಿಗಳು

ರಾತೋರಾತ್ರಿ ಶ್ರೀಕೃಷ್ಣ ವಿಗ್ರಹ ಸ್ಥಾಪನೆ ಆಗಿದ್ದು, ಶ್ರೀಕೃಷ್ಣ ಯಾದವ ಮಠದ ಕೃಷ್ಣ ಯಾದವಾನಂದ ಶ್ರೀ ಪೂಜೆ
ಸಲ್ಲಿಸಿ ಚಾಲನೆ ನೀಡಿದ್ದಾರೆ. ಇಷ್ಟೇಲ್ಲಾ ಆದರೂ ನಗರಸಭೆ ಮತ್ತು ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಸೈಲೆಂಟಾಗಿದೆ. ಘಟನೆ ಕುರಿತು ಯಾದವ ಮುಖಂಡರನ್ನು ಕೇಳಿದ್ರೆ, ‘ಈ ಹಿಂದೆ ಬಿ.ಕಾಂತರಾಜ್ ನಗರಸಭೆ ಅದ್ಯಕ್ಷರಾಗಿದ್ದ ವೇಳೆಯೇ ನಾವು ಪರವಾನಿಗೆ ಕೇಳಿದ್ದೆವು. ಏಳೆಂಟು ವರ್ಷದ ಹಿಂದೆಯೇ ನಮಗೆ ಪರವಾನಿಗೆ ನೀಡಲಾಗಿತ್ತು. ಹೀಗಾಗಿ, ಶ್ರೀಕೃಷ್ಣ ವೃತ್ತ ರಚಿಸಿ ಶ್ರೀಕೃಷ್ಣ ಪ್ರತಿಮೆ ಸ್ಥಾಪಿಸಿದ್ದೇವೆ. ಜಿಲ್ಲಾಡಳಿತ ಮತ್ತು ಸರ್ಕಾರ ಸಹಕರಿಸಿಬೇಕು ಎನ್ನುತ್ತಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ರಾತೋರಾತ್ರಿ ಹೊಸ ವೃತ್ತಗಳು, ಹೊಸ ವಿಗ್ರಹಗಳು ಸ್ಥಾಪನೆ ಆಗುತ್ತಿವೆ.
ಆದ್ರೆ, ನಗರಸಭೆ ಮತ್ತು ಜಿಲ್ಲಾಡಳಿತ ಮಾತ್ರ ಸೈಲೆಂಟಾಗಿದೆ. ಹೀಗಾಗಿ, ಮುಂದೊಂದು ದಿನ ಹೊಸ ವೃತ್ತ, ಹೊಸ ಪುಥ್ಥಳಿ ನಿರ್ಮಾಣದ ವಿಚಾರದಲ್ಲೇ ವಿವಾದ ಹುಟ್ಟಿದರೂ ಆಶ್ಚರ್ಯವಿಲ್ಲ. ಹೀಗಾಗಿ, ಜಿಲ್ಲಾಡಳಿತ ನಿಯಮಾನುಸಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ