Chitradurga: ಎಂಎಸ್ಸಿ ಓದಿದ್ದ ವಿವಾಹಿತೆ ತನ್ನ ಬರ್ತ್ ಡೇ ದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಪತಿ ಅರೆಸ್ಟ್
ಎಂಎಸ್ಸಿ ಬಿಇಡಿ ಓದಿರುವ ವಿನುತಾಳೇ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿ ಮನೆ ನಡೆಸಬೇಕಿತ್ತು. ಕಿರಣ್ ಮಾತ್ರ ದುಶ್ಚಟಗಳಿಗೆ ದಾಸನಾಗಿದ್ದು ಉಂಡಾಡಿ ಗುಂಡನಂತೆ ತಿರುಗುತ್ತಿದ್ದನು. ನಿನ್ನೆ ರಾತ್ರಿ ವೇಳೆಗೆ ಪತ್ನಿಯನ್ನೇ ಕೊಂದಿದ್ದಾನೆಂಬುದು ಮೃತಳ ಸಂಬಂಧಿ ಮೋಹನ್ ರೆಡ್ಡಿ ಆರೋಪ.
ಮೂರು ವರ್ಷಗಳ ಹಿಂದಷ್ಟೇ ಆ ಜೋಡಿ ಪ್ರೇಮ ವಿವಾಹವಾಗಿತ್ತು. ಸುಂದರ ಬದುಕಿಗೆ ಒಂದೂವರೆ ವರ್ಷದ ಗಂಡು ಮಗುವೂ ಜತೆಯಾಗಿದೆ. ಆದ್ರೆ, ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಬರ್ತ್ ಡೇ (birthday) ದಿನವೇ ಪತಿ ತನ್ನ ಪತ್ನಿಯ (Wife) ಜೀವ ಬಲಿ ಪಡೆದ ದಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹಾಗಾದ್ರೆ, ಅಸಲಿಗೆ ಅಲ್ಲಿ ನಡೆದಿದ್ದೇನು? ನೋಡೋಣ ಬನ್ನಿ.
ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ. ಕಂಗಾಲಾಗಿ ಕುಳಿತಿರುವ ಮೃತಳ ಕುಟುಂಬಸ್ಥರು. ಸ್ಥಳ ಪರಿಶೀಲಿಸಿ ಆರೋಪಿ ಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯಲ್ಲಿ. ಹೌದು, ಚಿತ್ರದುರ್ಗ (chitradurga) ಜಿಲ್ಲೆ ಚಳ್ಳಕೆರೆ (challakere) ತಾಲೂಕಿನ ಬಾಲೇನಹಳ್ಳಿಯ ವಿನುತಾ, ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯ ಕಿರಣ್ ನಡುವೆ ಪ್ರೇಮಾಂಕುರ ಆಗಿತ್ತು. ಚಿತ್ರದುರ್ಗದಲ್ಲಿ ಎಂಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿನುತಾ, ಡಿಪ್ಲೋಮಾ ಓದುತ್ತಿದ್ದ ಕಿರಣ್ ನಡುವೆ ಪರಿಚಯವಾಗಿದ್ದು ಪರಿಚಯ ಪ್ರೇಮಕ್ಕೆ ತಿರುಗಿತ್ತು.
ಹೀಗಾಗಿ, ಮೂರು ವರ್ಷಗಳ ಹಿಂದೆ ನಗರದ ಕಣಿವೆ ಮಾರಮ್ಮ ದೇಗುಲದ ಬಳಿ ಪ್ರೇಮ ವಿವಾಹ ಆಗಿದ್ದರು. ಅಂತೆಯೇ ಸುಂದರ ಸಂಸಾರಕ್ಕೆ ಒಂದೂವರೆ ವರ್ಷದ ಗಂಡು ಮಗುವು ಜತೆಯಾಗಿದೆ. ಆದ್ರೆ, ಕಳೆದ ಆರು ತಿಂಗಳಿಂದ ಕಿರಣ್ ಗೆ ದುಡ್ಡಿನ ಆಸೆ ಹುಟ್ಟಿದ್ದು ವರದಕ್ಷಿಣೆ ಕಿರುಕುಳ ಆರಂಭಿಸಿದ್ದಾನೆ. ಪತ್ನಿಗೆ ಹೊಡೆದು ತವರು ಮನೆಗೆ ಕಳಿಸಿದ್ದಾನೆ. ಈ ಬಗ್ಗೆ ಕೆಲ ತಿಂಗಳ ಹಿಂದಷ್ಟೇ ಬಡಾವಣೆ ಠಾಣೆ ಪೊಲೀಸ್ರು ಕರೆಸಿ ಎಚ್ಚರಿಸಿದ್ದಾರೆ. ಆದ್ರೆ, ನಿನ್ನೆ ವಿನುತಾ ಬರ್ತ್ ಡೇ ಆಗಿದ್ದು ಸಂಜೆಗೆ ದೇಗುಲಕ್ಕೆ ಹೋಗಿ ಬರೋಣವೆಂದು ಕರೆದಿದ್ದಾಳೆ.
ಅಷ್ಟಕ್ಕೇ ಗಲಾಟೆ ಮಾಡಿದ ಕಿರಣ್ ಮಗಳನ್ನು ಹೊಡೆದು ಸಾಯಿಸಿ ನೇಣು ಬಿಗಿದಿದ್ದು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ. ಒಂದೂವರೆ ವರ್ಷದ ಮಗು ವಿನುತಾ(27) ನೇಣಿಗೀಡಾದ ಸ್ಥಳದಲ್ಲಿ ಕಾಲ ಬಳಿಯಲ್ಲೇ ಇದೆ. ಮಗುವಿಟ್ಟುಕೊಂಡು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದರೆ ನಂಬಲು ಸಾಧ್ಯವಿಲ್ಲ. ಕಿರಣ್ ಗೆ ಡ್ರಗ್ಸ್, ಮದ್ಯ ಸೇವನೆ, ಗಾಂಜಾ ಸೇವನೆಯ ದುಶ್ಚಟಗಳಿವೆ. ಅಂತೆಯೇ ಇನ್ನೂ ಕೆಲ ಯುವತಿಯರಿಗೆ ಇದೇ ರೀತಿ ನಂಬಿಸಿ ಮೋಸ ಮಾಡಿದ್ದಾನೆಂದು ಮೃತಳ ತಾಯಿ ರಾಜಶ್ರೀ ಆರೋಪಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಬಡಾವಣೆ ಠಾಣೆಯ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಆರೋಪಿ ಕಿರಣ್ ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಿರಣ್ -ವಿನೂತಾ ಒಂದೇ ಸಮುದಾಯದವರಾಗಿದ್ದರೂ ಕಿರಣ್ ಸರಿಯಿಲ್ಲ ಎಂಬ ಕಾರಣಕ್ಕೆ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು.
Also Read: 28 ವರ್ಷಗಳ ದಾಂಪತ್ಯ ಅಂತ್ಯ: ಆಸ್ತಿಗಾಗಿ ಗಂಡನ ಕೊಂದು ನಾಟಕ ಮಾಡಿದ್ದವಳು, ಈಗ ಅಂದರ್ ಆಗಿದ್ದಾಳೆ!
ಕೊನೆಗೂ ಕಿರಣ್ ವರದಕ್ಷಿಣೆ ಕಿರುಕುಳ ನೀಡಲು ಶುರು ಮಾಡಿದ್ದನು. ಕಿರಣ್ ಕುಟುಂಬದವರು ಸಹ ಕಿರುಕುಳ ನೀಡಿದ್ದರು. ಈ ಬಗ್ಗೆ ಪೊಲೀಸ್ರಿಗೆ ದೂರು ನೀಡಿದಾಗ ಕೆಳಗೋಟೆ ಬಡಾವಣೆಯಿಂದ ಐಯುಡಿಪಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆದ್ರೆ, ಎಂಎಸ್ಸಿ ಬಿಇಡಿ ಓದಿರುವ ವಿನುತಾಳೇ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿ ಮನೆ ನಡೆಸಬೇಕಿತ್ತು. ಕಿರಣ್ ಮಾತ್ರ ದುಶ್ಚಟಗಳಿಗೆ ದಾಸನಾಗಿದ್ದು ಉಂಡಾಡಿ ಗುಂಡನಂತೆ ತಿರುಗುತ್ತಿದ್ದನು. ನಿನ್ನೆ ರಾತ್ರಿ ವೇಳೆಗೆ ಪತ್ನಿಯನ್ನೇ ಕೊಂದಿದ್ದಾನೆಂಬುದು ಮೃತಳ ಸಂಬಂಧಿ ಮೋಹನ್ ರೆಡ್ಡಿ ಆರೋಪ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಪತಿಯ ಕಪಿಮುಷ್ಠಿಗೆ ಸಿಲುಕಿ ಅಮಾಯಕ ಪತ್ನಿ ಬಲಿ ಆಗಿರುವ ಘಟನೆ ನಡೆದಿದೆ. ಒಂದೂವರೆ ವರ್ಷದ ಮಗ ಅನಾಥನಾಗುವಂಥ ದುಸ್ಥಿತಿ ನಿರ್ಮಾಣ ಆಗಿದೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ನಡೆಸಿ ಪತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. (ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ)