ಗೋಶಾಲೆಗೆ ಅನುದಾನದ ಕೊರತೆ; ಗೋವುಗಳ ದೈನಂದಿನ ನೆರವಿನ ಹಣ ಹೆಚ್ಚಿಸುವಂತೆ ಶಿವಲಿಂಗಾನಂದ ಶ್ರೀಗಳಿಂದ ಸರ್ಕಾರಕ್ಕೆ ಮನವಿ
ರ್ಕಾರ ಆಹಾರಕ್ಕಾಗಿ ದಿನಕ್ಕೆ ಒಂದು ಗೋವಿಗೆ ಕೇವಲ 17 ರೂಪಾಯಿಯಂತೆ ನೀಡಲು ನಿರ್ಧರಿಸಿದ್ದು, ಅದು ಸಹ ಸಮರ್ಪಕವಾಗಿ ನೀಡುತ್ತಿಲ್ಲ. ಹೀಗಾಗಿ, ರಾಜ್ಯದ ಬಹುತೇಕ ಗೋಶಾಲೆಗಳಲ್ಲಿ ಗೋವುಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಚಿತ್ರದುರ್ಗ: ಗೋವುಗಳ ಸಂರಕ್ಷಣೆ ಬಗ್ಗೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ. ಜಾಗೃತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಗೋಶಾಲೆಗಳು ಮಾತ್ರ ಅನುದಾನದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ಚಿತ್ರದುರ್ಗ ತಾಲೂಕಿನಲ್ಲಿ ಸರ್ಕಾರಿ ಅನುದಾನವಿಲ್ಲದೆ ಗೋವುಗಳ ಆಹಾರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಿತ್ರದುರ್ಗ ತಾಲೂಕಿನ ಕಾತ್ರಾಳ್ ಗ್ರಾಮದ ಬಳಿಯ ಆದಿ ಚುಂಚನಗಿರಿ ಗೋಶಾಲೆಯಲ್ಲಿ ನಗರದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀಗಳು ಪ್ರೀತಿಯಿಂದ ಗೋವು ಸಾಕಣೆ ಮಾಡಿದ್ದಾರೆ. ಬರಗಾಲ, ಕೊರೊನಾ ಕಾಲದಲ್ಲೂ ಸಹ ಗೋವುಗಳಿಗೆ ಯಾವುದೇ ಕೊರತೆ ಆಗದಂತೆ ಸಂರಕ್ಷಣೆ ಮಾಡುವ ಧ್ಯೇಯದೊಂದಿಗೆ ಸಾಗಿದ್ದಾರೆ. ಆದರೆ, ಸರ್ಕಾರ ಮಾತ್ರ ಗೋವುಗಳಿಗೆ ನೀಡುವ ಅನುದಾನ ಕಡಿಮೆ ಮಾಡಿದೆ.
ಸರ್ಕಾರ ಆಹಾರಕ್ಕಾಗಿ ದಿನಕ್ಕೆ ಒಂದು ಗೋವಿಗೆ ಕೇವಲ 17 ರೂಪಾಯಿಯಂತೆ ನೀಡಲು ನಿರ್ಧರಿಸಿದ್ದು, ಅದು ಸಹ ಸಮರ್ಪಕವಾಗಿ ನೀಡುತ್ತಿಲ್ಲ. ಹೀಗಾಗಿ, ರಾಜ್ಯದ ಬಹುತೇಕ ಗೋಶಾಲೆಗಳಲ್ಲಿ ಗೋವುಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬರಗಾಲ ಮತ್ತು ಕೊರೊನಾ ಕಾಲದಂಥ ಸಂಕಷ್ಟದ ಕಾಲದಲ್ಲಿ ಸರ್ಕಾರ ನೆರವು ನೀಡಿದಿದ್ದರೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ಸರ್ಕಾರ ಕೂಡಲೇ ಗೋಶಾಲೆಗಳಿಗೆ ಹೆಚ್ಚಿನ ಅನುದಾನ ಅಂದರೆ ದಿನಕ್ಕೆ ಒಂದು ಗೋವಿಗೆ 30 ರೂಪಾಯಿಯಂತೆ ಅನುದಾನ ನೀಡಬೇಕೆಂದು ಗೋಶಾಲೆಗಳ ಸಂಘದಿಂದ ಆಗ್ರಹಿಸಿದ್ದೇವೆ ಎಂದು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀ ಹೇಳಿದ್ದಾರೆ.
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಇಂದು ಆದಿ ಚುಂಚನಗಿರಿ ಗೋಶಾಲೆಗೆ ಭೇಟಿ ನೀಡಿದರು. ಅಚ್ಚುಕಟ್ಟಾಗಿ ಗೋಶಾಲೆ ನಡೆಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯದ ಗೋಶಾಲೆಗಳ ಸಂಘದ ಪರವಾಗಿ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀಗಳು ಗೋಶಾಲೆಗಳಿಗೆ ಸಕಾಲಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡುವ ಮೂಲಕ ಗೋವುಗಳ ಪಾಲನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸೂಕ್ತ ಅನುದಾನ ನೀಡುವ ಭರವಸೆ ನೀಡಿದ್ದು, ನಿಯಮಾನುಸಾರ ಅನುದಾನ ಕೇಳಿದವರಿಗೆ ಸೂಕ್ತ ನೆರವು ನೀಡಲು ಸಾಕಷ್ಟು ಅನುದಾನವಿದೆ ಎಂದು ಹೇಳಿದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಆದಿ ಚುಂಚನಗಿರಿ ಗೋಶಾಲೆ ಹಾಗೂ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಬಳಿಯ ದೇವರ ಎತ್ತುಗಳ ಗೋಶಾಲೆಗೂ ಅನುದಾನದ ಕೊರತೆ ಎದುರಾಗಿದೆ. ಹೀಗಾಗಿ, ಗೋವುಗಳು ಸಂಕಷ್ಟಕ್ಕೆ ಸಿಲುಕುವ ಸಂದರ್ಭ ಉಂಟಾಗಿದೆ. ಹೀಗಾಗಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಸಕಾಲಕ್ಕೆ ಸೂಕ್ತ ನೆರವು ನೀಡಬೇಕಿದೆ ಎನ್ನುವುದು ಈ ಭಾಗದ ಜನರ ಆಶಯ.
ವರದಿ: ಬಸವರಾಜ ಮುದನೂರ್
ಇದನ್ನೂ ಓದಿ:
ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಅಗತ್ಯ ಕ್ರಮ, ಗಾಂಧಿ ಜಯಂತಿಗೆ ಜಿಲ್ಲೆಗೊಂದು ಗೋಶಾಲೆ: ಸಚಿವ ಪ್ರಭು ಚವ್ಹಾಣ್
ಗೋಶಾಲೆಯಲ್ಲಿಯೇ ಕೊವಿಡ್ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ