ಚಿತ್ರದುರ್ಗದಲ್ಲಿ ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ; ರೂಟ್​ ಮ್ಯಾಪ್ ಇಲ್ಲಿದೆ ನೋಡಿ

ರಾಜ್ಯದ ವಿವಿಧೆಡೆ ಗಣೇಶೋತ್ಸವ ಮತ್ತು ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ ಗದ್ದಲಗಳು ನಡೆದಿವೆ. ಇದೆ ಸಂದರ್ಭದಲ್ಲಿ ನಾಳೆ(ಸೆ.28) ಕೋಟೆನಾಡು ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯುತ್ತಿದೆ. ಗಣೇಶನ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಭಾಗಿ ಆಗಲಿದ್ದು ದುರ್ಗ ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. ಜೊತೆಗೆ ಪೊಲೀಸರು ಕೂಡ ಹೈ ಅಲರ್ಟ ಆಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ.

ಚಿತ್ರದುರ್ಗದಲ್ಲಿ ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ; ರೂಟ್​ ಮ್ಯಾಪ್ ಇಲ್ಲಿದೆ ನೋಡಿ
ಚಿತ್ರದುರ್ಗದಲ್ಲಿ ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2024 | 6:25 PM

ಚಿತ್ರದುರ್ಗ, ಸೆ.27: ಚಿತ್ರದುರ್ಗ(Chitradurga) ನಗರದ ಜೈನಧಾಮದಲ್ಲಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ. ನಾಳೆ(ಸೆ.28) ಹಿಂದೂ ಮಹಾಗಣಪತಿ ಶೊಭಾಯಾತ್ರೆ ಮತ್ತು ವಿಸರ್ಜನೆ ಆಯೋಜಿಸಲಾಗಿದೆ. ಪ್ರತಿ ವರ್ಷದಂತೆ ನಾಳೆಯೂ ಐದಾರು ಲಕ್ಷ ಜನ ಗಣಪತಿಯ ಮೆರವಣಿಗೆಯಲ್ಲಿ ಭಾಗಿಯಾಗುವ
ನಿರೀಕ್ಷೆಯಿದೆ. ಜೊತೆಗೆ ನಿರಾತಂಕದಿಂದ ಭಕ್ತರು ಗಣೇಶೊತ್ಸವದಲ್ಲಿ ಭಾಗಿ ಆಗಬೇಕೆಂದು ಆಯೋಜಕರು ಹೇಳಿದ್ದಾರೆ.

ರೂಟ್​ ಮ್ಯಾಪ್ ಇಲ್ಲಿದೆ

ಸೆ.28ರಂದು ಚಿತ್ರದುರ್ಗ ನಗರದ ಬಿ. ಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂಧಿಸಲಾಗಿದೆ. ಚಿತ್ರದುರ್ಗ ನಗರದ ಹೊರವಲಯದ ಬೈಪಾಸ್ ರಸ್ತೆಗಳ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಅಂತೆಯೇ ಬಿ ಡಿ ರಸ್ತೆ ಉದ್ದಕ್ಕೂ ವಾಹನಗಳಿಗೆ ಎಂಟ್ರಿ ನೀಡದಂತೆ ಬ್ಯಾರಿಕೇಡ್​ಗಳನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ:ತುಮಕೂರು ಹಿಂದೂ ಮಹಾಗಣಪತಿ ವಿಸರ್ಜನೆಯಲ್ಲಿ ಕಿಕ್ಕಿರಿದ ಜನ

ಪೊಲೀಸ್ ಇಲಾಖೆ ಹೈ ಅಲರ್ಟ್, ಮದ್ಯಮಾರಾಟ ನಿಷೇಧ

ಇನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೂ ಹೈ ಅಲರ್ಟ್ ಆಗಿದೆ. ಅದರಂತೆ ಚಿತ್ರದುರ್ಗದಲ್ಲಿ ಇಂದು ಪೊಲೀಸ್ ಇಲಾಖೆಯಿಂದ ಪಥ ಸಂಚಲನ ನಡೆಸಲಾಯಿತು. ಮುಂಜಾಗೃತೆ ಕ್ರಮವಾಗಿ ಸೆ.27ರ ಬೆಳಗ್ಗೆಯಿಂದ 28ರ ಮಧ್ಯರಾತ್ರಿವರೆಗೆ ಚಿತ್ರದುರ್ಗದಲ್ಲಿ ಮದ್ಯಮಾರಾಟ ನಿಷೇಧಿಸಿದೆ. ಈ ಕುರಿತು ಮಾತನಾಡಿದ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು, ‘ಮುಂಜಾಗೃತ ಕ್ರಮವಾಗಿ 6 ಜನ ಎಎಸ್ಪಿ , 16 ಜನ ಡಿವೈಎಸ್ಪಿ 50 ಸಿಪಿಐ, 120ಪಿಎಸ್ ಐ, 167 ಎಎಸ್ಐ, 1886 ಪೊಲೀಸರು, 500 ಜನ ಹೋಂಗಾರ್ಡ್ಸ್, 10 ಕೆಎಸ್​​ಆರ್​​ಪಿ, 12 ಡಿಎಆರ್ , 4 ಕ್ಯೂಆರ್​ಟಿ ತುಕಡಿಗಳನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಒಟ್ಟು 3,500ಕ್ಕೂ ಹೆಚ್ಚು ಜನ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಅಲ್ಲದೆ 26 ವಾಚ್ ಟವರ್, 150 ಕಡೆ ಸಿಸಿಟಿವಿ, 5ಡ್ರೋನ್, 50 ಸ್ಕೈಸೆಂಟ್ರಿಗಳು ಅಳವಡಿಸಲಾಗಿದೆ. 9 ಕಡೆ ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕೋಟೆನಗರಿ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮತ್ತು ವಿಸರ್ಜನೆಗೆ ಸಿದ್ಧವಾಗಿದೆ.
ಬೆಳಗ್ಗೆ 11ಗಂಟೆಗೆ ಚಳ್ಳಕೆರೆ ವೃತ್ತ ಬಳಿಯ ಜೈನಧಾಮದಿಂದ ಆರಂಭವಾಗಿ ಚಂದ್ರವಳ್ಳಿವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಲಕ್ಷಾಂತರ ಜನರು ಉತ್ಸವದಲ್ಲಿ ಭಾಗಿ ಆಗಲಿದ್ದಾರೆ. ಡಿಜೆ ಸದ್ದಿಗೆ ಮೈಮರೆತು
ಕುಣಿಯಲಿದ್ದು, ಪೊಲೀಸರು ಮತ್ತು ಜಿಲ್ಲಾಡಳಿತ ಈ ಸಲ ಹಿಂದೆಂದಿಗಿಂತಲೂ ಹೆಚ್ಚು ಅಲರ್ಟಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮ ಕೈಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us