
ಚಿತ್ರದುರ್ಗ, (ಜುಲೈ 27): ಚಿತ್ರದುರ್ಗದ (Chitradurga) ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರ್ಯಾದೆ ಹತ್ಯೆ ನಡೆದಿರುವ ಅಮಾನುಷ ಕೃತ್ಯವೊಂದು ನಡೆದು ಹೋಗಿದೆ. ಮಾರಣಾಂತಿಕ ಖಾಯಿಲೆ ಇದೆ ಎಂದು ಮರ್ಯಾದೆಗೆ ಅಂಜಿದ ಅಕ್ಕ, ಒಡ ಹುಟ್ಟಿದ ತಮ್ಮನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆರೋಗ್ಯ ತಪಾಸಣೆ ವೇಳೆ ದುಮ್ಮಿ ಗ್ರಾಮದ ಮಲ್ಲಿಕಾರ್ಜುನನಿಗೆ (23) ಮಾರಣಾಂತಿಕ ಖಾಯಿಲೆ ಇರುವುದು ಪತ್ತೆಯಾಗಿದೆ. ಇದರಿಂದ ಮರ್ಯಾದೆಗೆ ಅಂಜಿದ ಅಕ್ಕ, ಹೆಚ್ಚಿನ ಚಿಕಿತ್ಸೆಗೆಂದು ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿರುವಾಗಲೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಜುಲೈ 23ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ 23 ವರ್ಷದ ಮಲ್ಲಿಕಾರ್ಜುನ ಕಾರು ಅಪಘಾತವಾಗಿತ್ತು. ಅಪಘಾತದಲ್ಲಿ ಮಂಜುನಾಥನ ಕಾಲಿಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆಪರೇಷನ್ ಮಾಡುವ ಅಗತ್ಯ ಇತ್ತು. ಹೀಗಾಗಿ ವೈದ್ಯಾಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಮಾರಣಾಂತಿಕ ಖಾಯಿಲೆ ಇರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬಸ್ಥರಿಗೆ ಮಾರಣಾಂತಿಕ ಖಾಯಿಲೆ ಇರುವ ಮಾಹಿತಿ ನೀಡಿದ್ದರು. ಅಪಘಾತ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ತಮ್ಮನಿಗೆ ಮಾರಣಾಂತಿಕ ಖಾಯಿಲೆ ಇರುವುದನ್ನು ಅಕ್ಕ ಸಹಿಸಲಿಲ್ಲ. ಎಲ್ಲಿ ಮನೆಯ ಮರ್ಯಾದೆ ಹೋಗುತ್ತೋ ಎನ್ನುವ ಕಾರಣಕ್ಕೆ ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಕ್ಕ-ಭಾವ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಮೃತದೇಹವನ್ನು ದುಮ್ಮಿ ಗ್ರಾಮಕ್ಕೆ ತಂದಿದ್ದಾರೆ. ಕುತ್ತಿಗೆಯಲ್ಲಿ ಗಾಯ ಇರೋದನ್ನು ಗಮನಿಸಿದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೊಳಲ್ಕೆರೆ ಠಾಣೆಗೆ ಮೃತನ ತಂದೆ ದೂರು ನೀಡಿದ್ದಾರೆ. ಬೆನ್ನಲ್ಲೇ ಅಸಲಿ ಸತ್ಯ ಗೊತ್ತಾಗಿದೆ.
ಈ ಸಂಬಂಧ ಮೃತ ಮಲ್ಲಿಕಾರ್ಜುನನ ತಂದೆ ನಾಗರಾಜ್ ಅವರು ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.