ಚಿತ್ರದುರ್ಗ: ಬೋವಿ ಸಮುದಾಯದ ಕೆಲ ಶಾಸಕರಿಗೆ ಕೈ ತಪ್ಪಿದ ಟಿಕೆಟ್: ಬಿಜೆಪಿ, ಕಾಂಗ್ರೆಸ್ ವಿರುದ್ಧ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಕಿಡಿ
ಬೋವಿ ಸಮುದಾಯದ ಕೆಲ ಶಾಸಕರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಕಿಡಿಕಾರಿದ್ದಾರೆ. ಹೌದು ಬೋವಿ ಸಮುದಾಯ ಕಡೆಗಣಿಸಿದ ಪಕ್ಷಗಳನ್ನು ನಮ್ಮ ಸಮುದಾಯ ಕೈಬಿಡಲಿದ್ದು, ಬೋವಿ ಸಮಾಜದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಭಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ: ವಿಧಾನಸಭೆ ಚುನಾವಣೆಗೆ(Karnataka Assembly Election) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಉಭಯ ಪಕ್ಷಗಳು ಈಗಾಗಲೇ ಟಿಕೆಟ್ ಹಂಚಿಕೆ ಮಾಡಿದ್ದು, ಹಾಲಿ, ಮಾಜಿ ಶಾಸಕರುಗಳನ್ನ ಕೈ ಬಿಟ್ಟಿದ್ದು ಹೊಸಬರಿಗೆ ಮಣೆ ಹಾಕಲಾಗಿದೆ. ಹೌದು ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೋವಿ ಸಮುದಾಯದ ಕೆಲ ಶಾಸಕರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ(Immadi Siddharameshwara Shri) ಕಿಡಿಕಾರಿದ್ದಾರೆ.
ಬಿಜೆಪಿಯಿಂದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಖಂಡ ಶ್ರೀನಿವಾಸ್ ಅವರನ್ನ ಕಡೆಗಣನೆ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಈ ಇಬ್ಬರು ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಕಾಂಗ್ರೆಸ್ನಿಂದ ಅಖಂಡ ಶ್ರೀನಿವಾಸ್ ಹೆಚ್ಚಿನ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದರು. ಆದರೀಗ ಈ ಎರಡು ಪಕ್ಷಗಳು ಇವರನ್ನ ಕಡೆಗಣಿಸಿದ್ದರ ಕುರಿತು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೆವು. ಈ ಹಿಂದೆ 8-10 ಜನ ಬೋವಿ ಸಮುದಾಯದವರಿಗೆ ಟಿಕೆಟ್ ನೀಡುತ್ತಿದ್ದರು. ಅದರಂತೆ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಬೇಕು. ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ಗೆ ಬಿಜೆಪಿ ಹಾಗೂ ಅಖಂಡ ಶ್ರೀನಿವಾಸ್ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಆಗ್ರಹಿಸಿದ್ದಾರೆ. ಇಲ್ಲವಾದರೆ ಬೋವಿ ಸಮುದಾಯ ಕಡೆಗಣಿಸಿದ ಪಕ್ಷಗಳನ್ನು ನಮ್ಮ ಸಮುದಾಯ ಕೈಬಿಡಲಿದ್ದು, ಬೋವಿ ಸಮಾಜದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Fri, 14 April 23