ಭೀಕರ ಬರಕ್ಕೆ ಬರಿದಾಗಿದೆ ಐತಿಹಾಸಿಕ ಕೆರೆ; ಸಂರಕ್ಷಣೆಗೆ ಸ್ಥಳೀಯರ ಆಗ್ರಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 17, 2024 | 9:46 PM

ಅದು ಇಡೀ ನಗರಕ್ಕೆ ನೀರು ಪೂರೈಸಿದ್ದ ಐತಿಹಾಸಿಕ ಕೆರೆ. ಅರಣ್ಯ ವ್ಯಾಪ್ತಿಯ ಪ್ರಾಣಿ-ಪಕ್ಷಿಗಳಿಗೆ ಜೀವಾಳ ಆಗಿದ್ದ ಅಪರೂಪದ ಕೆರೆ. ಈ ವರ್ಷ ರಣ ಭೀಕರ ಬರಗಾಲದ ಪರಿಣಾಮ ಇತಿಹಾಸ ಪ್ರಸಿದ್ಧ ಕೆರೆಯೂ ಬರಿದಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಭೀಕರ ಬರಕ್ಕೆ ಬರಿದಾಗಿದೆ ಐತಿಹಾಸಿಕ ಕೆರೆ; ಸಂರಕ್ಷಣೆಗೆ ಸ್ಥಳೀಯರ ಆಗ್ರಹ
ಭೀಕರ ಬರಕ್ಕೆ ಬರಿದಾಗಿದೆ ಚಿತ್ರದುರ್ಗದ ಐತಿಹಾಸಿಕ ಕೆರೆ
Follow us on

ಚಿತ್ರದುರ್ಗ, ಮೇ.17: ಕೋಟೆನಾಡು ಆಳ್ವಿಕೆ ನಡೆಸಿದ ಮೊದಲ ಪಾಳೇಗಾರ(Palegara) ತಿಮ್ಮಣ್ಣ ನಾಯಕರು, ಜೀವಪರ
ಕಾಳಜಿ ಉಳ್ಳವರಾಗಿದ್ದರು. ಅನೇಕ ಕೆರೆ-ಕಟ್ಟೆಗಳನ್ನು ಕಟ್ಟಿಸಿ ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ನೀರು ಒದಗಿಸಿದ್ದರು.
ಆಡುಮಲ್ಲೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಒಂದು ಕಡೆ ಕಲ್ಲು ಬಂಡೆಗಳ ಬೆಟ್ಟ, ಮತ್ತೊಂದು ಕಡೆ ಹಸಿರುವನದ ಅದ್ಭುತ
ಪರಿಸರದ ಮಧ್ಯೆ ಕೆರೆಯೊಂದರನ್ನು ನಿರ್ಮಾಣ ಮಾಡಿದ್ದರು. ಕೆರೆಗೆ ತಿಮ್ಮಣ್ಣ ನಾಯಕರ ಕೆರೆ ಎಂದೇ ಕರೆಯಲಾಗುತ್ತಿದೆ.
ಈ ಹಿಂದೆ ಇಡೀ ನಗರ ಪ್ರದೇಶಕ್ಕೆ ನೀರು ಪೂರೈಸುತ್ತಿದ್ದ ಕೆರೆ, ಕೆಲ ವರ್ಷಗಳಿಂದ ಅರಣ್ಯ ವ್ಯಾಪ್ತಿಯ ಪ್ರಾಣಿ-ಪಕ್ಷಿಗಳು,
ಜಾನುವಾರುಗಳಿಗೆ ಜೀವಾಳವಾಗಿ ಉಳಿದಿತ್ತು.

ಇತ್ತೀಚೆಗೆ ಅವನತಿಯ ಅಂಚಿನಲ್ಲಿರುವ ಕೆರೆ ಬಗ್ಗೆ ಟಿವಿ9 ಈ ಹಿಂದೆ ಕೆರೆ ಉಳಿಸಿ ಅಭಿಯಾನದಡಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಟಿವಿ9 ವರದಿಯಿಂದ ಪ್ರೇರಣೆ ಪಡೆದ ಅಂಜಿನಪ್ಪ ಮತ್ತು ಗೆಳೆಯರ ಬಳಗ 2ವರ್ಷದ ಹಿಂದೆ ಕೆರೆ ಹೂಳೆತ್ತುವ ಕೆಲಸ ಮಾಡಿತ್ತು. ಕಳೆದ ವರ್ಷ ಕೆರೆಗೆ ನೀರು ಹರಿದು ಬಂದು ಜೀವಕಳೆ ಪಡೆದಿತ್ತು. ಅರಣ್ಯ ವ್ಯಾಪ್ತಿಯ ಪ್ರಾಣಿ, ಪಕ್ಷಿಗಳಿಗೆ ಹಾಗೂ ಜಾನುವಾರುಗಳಿಗೆ ವರದಾನವಾಗಿತ್ತು. ಆದ್ರೆ, ಈ ವರ್ಷ ಮತ್ತೆ ರಣ ಭೀಕರ ಬರಗಾಲ ಎದುರಾಗಿದ್ದು, ಐತಿಹಾಸಿಕ ಕೆರೆ ಸಂಪುರ್ಣ ಬರಿದಾಗಿದೆ.

ಇದನ್ನೂ ಓದಿ:ಮಲೀನವಾಗ್ತಿದೆ ಐತಿಹಾಸಿಕ ಪಾಪವಿನಾಶ ಮಂದಿರದ ಕೆರೆ; ವಿಷಕಾರಿ ನೀರು ಕುಡಿದು ಮೀನು, ಪಕ್ಷಿಗಳು ಸಾವು

ಇನ್ನು ಈ ಐತಿಹಾಸಿಕ ತಿಮ್ಮಣ್ಣ ನಾಯಕ ಕೆರೆ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆಯ
ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿದೆ. ದೂರದ ಶಾಂತಿ ಸಾಗರ ಮತ್ತು ವಾಣಿ ವಿಲಾಸ ಸಾಗರ ಜಲಾಶಯದಿಂದ
ಚಿತ್ರದುರ್ಗಕ್ಕೆ ಕುಡಿಯುವ ನೀರು ತರಲಾಗುತ್ತಿದೆ. ಆದ್ರೆ, ತಿಮ್ಮಣ್ಣ ನಾಯಕ ಕೆರೆ ಸಂರಕ್ಷಣೆ ಮಾಡಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದರೆ ಇಡೀ ನಗರಕ್ಕೆ ಅನುಕೂಲ ಆಗಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಒಂದು ಕಾಲದಲ್ಲಿ ಇಡೀ ಕೋಟೆನಾಡಿಗೆ ನೀರು ಪೂರೈಸುತ್ತಿದ್ದ ಐತಿಹಾಸಿಕ ಕೆರೆ ಆಳುವ ವರ್ಗದ ನಿರ್ಲಕ್ಷದಿಂದ ಬರಿದಾಗಿದೆ. ಅರಣ್ಯ ವ್ಯಾಪ್ತಿಯ ಪ್ರಾಣಿ-ಪಕ್ಷಿಗಳ ಸಹ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಇನ್ನಾದ್ರೂ ಜಿಲ್ಲಾಡಳಿತ,  ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ದುರ್ಗದ ಜನರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ