ಮಲೀನವಾಗ್ತಿದೆ ಐತಿಹಾಸಿಕ ಪಾಪವಿನಾಶ ಮಂದಿರದ ಕೆರೆ; ವಿಷಕಾರಿ ನೀರು ಕುಡಿದು ಮೀನು, ಪಕ್ಷಿಗಳು ಸಾವು
ಅದು ನೂರಾರು ವರ್ಷದಷ್ಟು ಪುರಾತನ ಕೆರೆ. ಕೆರೆಯ ಸುತ್ತಮುತ್ತಲೂ ನೂರಾರು ಎಕರೆಯಷ್ಟು ಸುಂದರ ಅರಣ್ಯ ಪ್ರದೇಶವಿದೆ. ಇಲ್ಲಿನ ಅರಣ್ಯದಲ್ಲಿ ನೂರಾರು ವಿವಿಧ ಜಾತಿ ಔಷಧಿ ಸಸ್ಯಗಳು, ಹತ್ತಾರು ಬಗೆಯ ಪಕ್ಷಿಗಳು ಇಲ್ಲಿವೆ. ಆದರೆ, ಇಂದು ಇಂತಹ ಐತಿಹಾಸಿಕ ಕೆರೆ ಮಲೀನವಾಗುತ್ತಿದ್ದು, ಕೆರೆ ತನ್ನ ಅಂಧವನ್ನೇ ಕಳೆದುಕೊಂಡಿದೆ.
ಬೀದರ್, ಮೇ.01: ನಗರದಲ್ಲಿರುವ ಪಾಪವಿನಾಶ ಮಂದಿರ(papvinash temple) ಒಂದು ಶತಮಾನದಷ್ಟು ಹಳೆಯದಾದ ದೇವಸ್ಥಾನ, ಶ್ರೀರಾಮ ಚಂದ್ರ ರಾವಣನನ್ನ ಯುದ್ದದಲ್ಲಿ ಹತ್ಯೆ ಮಾಡಿದಾಗ ರಾವಣ ಶ್ರೀರಾಮನಿಗೆ ಭ್ರಹ್ಮಹತ್ಯೆ ದೋಷದ ಶಾಪ ಕೊಡುತ್ತಾನೆ. ಬಳಿಕ ಶ್ರಿರಾಮ ತಪ್ಪಸ್ಸು ಮಾಡಿ ಈ ಕೆರೆಯಲ್ಲಿ ಸ್ನಾನ ಮಾಡಿ ಪಾಪನಾಶ ಮಾಡಿಕೊಂಡು ಹೋಗುತ್ತಾನೆ. ಇದರಿಂದ ಅಂದಿನಿಂದ ಈ ದೇವಸ್ಥಾನಕ್ಕೆ ಪಾಪನಾಶ ಮಂದಿರ ಎಂದು ಹೆಸರು ಬಂದಿದೆ. ಆದರೆ, ಇಂತಹ ಐತಿಹಾಸಿಕ ಪಾಪವಿನಾಶ ಮಂದಿರದ ಕೆರೆ, ಇಲ್ಲಿಗೆ ಬರುವ ಭಕ್ತರಿಂದಲೇ ಮಲೀನವಾಗುತ್ತಿದೆ. ಹೌದು, ಪೂಜೆ ಪುನಸ್ಕಾರ ಮಾಡಿದ ವಸ್ತುಗಳನ್ನ ಕೆರೆಗೆ ತಂದು ಹಾಕುತ್ತಿರುವ ಹಿನ್ನಲೆ ನೀರು ವಿಷಕಾರಿಯಾಗಿ ಮೀನುಗಳು, ಪಕ್ಷಿಗಳು ಸಾವನ್ನಪ್ಪುತ್ತಿವೆ.
ಈ ದೇವಸ್ಥಾನದಲ್ಲಿ ಉದ್ಭವ ಲಿಂಗವಿದ್ದು ರಾಜ್ಯವಷ್ಟೇ ಅಲ್ಲದೇ ನರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಈ ಶ್ರಾವಣ ಮಾಸದಲ್ಲಿ ಸಾಗೋರಾಪಾದಿಯಲ್ಲಿ ಭಕ್ತರ ದಂಡು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ. ಈ ಐತಿಹಾಸಿಕ ಕೆರೆಯ ಸುತ್ತಮುತ್ತಲೂ ಸುಂದರವಾದ ಪರಿಸರವಿದ್ದು, ನೂರಾರು ಬಗೆಯ ಪಕ್ಷಿಗಳು ಇಲ್ಲಿ ವಾಸವಾಗಿವೆ. ಈ ಕೆರೆಯ ನೀರು ಮಲೀನವಾಗುತ್ತಿದೆ ಜನರು ಪಾಪವಿನಾಶ ಕೆರೆಯನ್ನ ಮಲೀನ ಮಾಡಬೇಡಿ ಎಂದು ಅರ್ಚಕರು ಮನವಿ ಮಾಡುತ್ತಿದ್ದಾರೆ.
ಕೆರೆಯ ಸುತ್ತಮುತ್ತಲಿದೆ ಸುಂದರ ಪರಿಸರ
ಇನ್ನು ಐತಿಹಾಸಿಕ ದೇವಸ್ಥಾನದ ಪಕ್ಕದಲ್ಲಿಯೇ ಸುಮಾರು 125 ಎಕರೆ ವಿಸ್ತೀರ್ಣದ ಬೃಹತ್ತಾದ ಐತಿಹಾಸಿ ಕೆರೆಯಿದೆ. ಕೆರೆಯ ಸುತ್ತಮುತ್ತ ನೂರಾರು ಎಕರೆಯಷ್ಟೂ ಸುಂದರ ಪರಿಸರ ಕಾಡಿದೆ. ಇಲ್ಲಿನ ಮಾನವ ನಿರ್ಮಿತ ಕಾಡಿನಲ್ಲಿ ನೂರಾರು ಔಷಧಿಯ ಸಸ್ಯಗಳಿವೆ. ಇದರ ಜೊತೆಗೆ ವಿವಿಧ ಬಗೆಯ ಚಿಟ್ಟೆಗಳು, ಪಕ್ಷಿಗಳು, ನವಿಲುಗಳ ವಾಸಸ್ಥಾನ ಇದಾಗಿದೆ. ಆದರೆ ಇಂದು ಈ ಕೆರೆ ಮಲೀನವಾಗುತ್ತಿದ್ದು, ಜಲಚರ, ಪಕ್ಷಿಗಳ ಸಾವಿಗೆ ಕಾರಣವಾಗುತ್ತಿದೆ. ಜೊತೆಗೆ ದೇವಸ್ಥಾನದ ಪಕ್ಕದಲ್ಲಿರುವ ಶಿವನಗರದ ಬಡಾವಣೆಯ ಸಾವಿರಾರು ಲೀಟರ್ ಡ್ರೈನೇಜ್ ನೀರು ಇಲ್ಲಿನ ಕೆರೆಗೆ ಸೇರುತ್ತಿದೆ. ಸುಂದರವಾದ ಪರಿಸರ ಕಾಪಾಡಿ ಎಂದು ಇಲ್ಲಿನ ಭಕ್ತರು ವಿನಂತಿಸುತ್ತಿದ್ದಾರೆ.
ಪ್ರತಿವರ್ಷ ಈ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಹಣವನ್ನ ದೇಣಿಗೆ ರೂಪದಲ್ಲಿ ಕೊಡುತ್ತಿದ್ದಾರೆ. ಆದರೆ ಇಲ್ಲಿಗೆ ಬಂದಿರುವ ಹಣವನ್ನ ಸರಕಾರ ಪಡೆದುಕೊಳ್ಳುತ್ತಿದ್ದು, ದೇವಾಲಯದ ಕೆರೆಯ ಸ್ವಚ್ಚತೆಗೆ ಮಾತ್ರ ಗಮನಹರಿಸದಿರುವುದು ವಿರ್ಯಾಸವೇ ಸರಿ. ಲಕ್ಷಾಂತರ ಭಕ್ತರನ್ನ ಹೊಂದಿರುವ ಈ ದೇವಾಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ಅನಿವಾರ್ಯತೆ ಈಗ ಸರಕಾರದ ಮೇಲಿದೆ. ಏನೇ ಇರಲಿ ಕೆರೆಗೆ ಸೇರುತ್ತಿರುವ ವಿಷಕಾರಿ ನೀರನ್ನ ತಡೆದು ಕೆರೆಯ ನೀರು ಶುಚಿತ್ವವಾಗಿ ಇಡಿ ಎಂದು ಇಲ್ಲಿನ ಭಕ್ತರು ಮನವಿ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 pm, Wed, 1 May 24