ಚಿತ್ರದುರ್ಗ: ಚಳ್ಳಕೆರೆಯಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆ ಹಿನ್ನೆಲೆ ಅವಾಂತರ ಸೃಷ್ಟಿಯಾಗಿದ್ದು, ಗಾಳಿ, ಮಳೆಗೆ ಅಂಗಡಿ ಮುಂಭಾಗದಲ್ಲಿ ಹಾಕಿದ್ದ ತಗಡಿನ ಸೀಟುಗಳು ನೆಲಕ್ಕುರುಳಿದೆ. ಬೈಕ್ಗಳು ಹಾಗೂ ಆಟೋಗೆ ಹಾನಿಯಾಗಿದ್ದು, ಚಳ್ಳಕೆರೆ ಪಟ್ಟಣದ ನೆಹರು ವೃತ್ತದ ಬಳಿ ಘಟನೆ ನಡೆದಿದೆ. ನೆಹರು ವೃತ್ತದ ಬಳಿ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ರಸ್ತೆ ಮೇಲೆ ಬಿದ್ದಿದ್ದ ತಗಡಿನ ಸೀಟನ್ನು ಪೊಲೀಸರು ತೆರವುಗೊಳಿಸಿದರು. ಚಳ್ಳಕೆರೆಯ ರಹೀಂ ನಗರ, ಶಾಂತಿ ನಗರದ ರಸ್ತೆಗಳು ಜಲವೃತವಾಗಿದ್ದು, ತಗ್ಗು ಪ್ರದೇಶದ ಕೆಲ ಮನೆಗಳಿಗೂ ನೀರು ನುಗ್ಗಿದೆ. ಸ್ಥಳಕ್ಕೆ ತಹಸೀಲ್ದಾರ್ ಎನ್.ರಘುಮೂರ್ತಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಳೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದ ಬಳಿಯ ಗೂಡಂಗಡಿ ಮೇಲೆ ನೆಟ್ವರ್ಕ್ ಟವರ್ ಉರುಳಿ ಬಿದ್ದಿದೆ. ನೆಟ್ವರ್ಕ್ ಟವರ್ ಬಿದ್ದ ಕಾರಣ ಗೂಡಂಗಡಿ ಜಖಂ ಆಗಿದ್ದು, ನೆಟ್ವರ್ಕ್ ಟವರ್ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಿನ್ ಶೆಡ್ಗಳ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಬಾಲಕಿಯ ಕಾಲು ಮುರಿತ
ರಾಯಚೂರು: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಹಿನ್ನೆಲೆ ಮರಗಳು ನೆಲಕ್ಕೆ ಉರುಳಿದ್ದು, ಒಂದು ಎಮ್ಮೆ, 12 ಆಡುಗಳು ಸಾವನ್ನಪ್ಪಿವೆ. ಬಿರುಗಾಳಿಗೆ ಆರು ಮನೆಗಳ ಟಿನ್ ಶೆಡ್ಗಳು ಹಾರಿ ಹೋಗಿವೆ. ಆರು ಮನೆಗಳಿಗೆ ಹಾನಿಯಾಗಿದ್ದು, ಭಾಗಶಃ ಮನೆಗಳು ಬಿದ್ದಿವೆ. ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಘಟನೆ ನಡೆದಿದೆ. ಟಿನ್ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಬಾಲಕಿ ಕಾಲು ಮುರಿದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಾಲಕಿ ಪಾರಾಗಿದ್ದಾಳೆ. ಮನೆಯಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಾನವಿ ತಾಲ್ಲೂಕಿನ ಮಲದಗುಡ್ಡದಲ್ಲಿ12 ಮೇಕೆಗಳು ಸಾವನ್ನಪ್ಪಿದ್ದು, ಬೇವಿನ ಮರದ ಪಕ್ಕ ಶೆಡ್ನಲ್ಲಿ ಮೇಕೆಗಳನ್ನಿರಿಸಲಾಗಿತ್ತು. ರಾತ್ರಿ ಗಾಳಿ ಮಳೆಗೆ ಬೇವಿನ ಮರಕ್ಕೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಮರದ ಪಕ್ಕದಲ್ಲಿದ್ದ ಶೆಡ್ಗೆ ವಿದ್ಯುತ್ ಪಾಸಾಗಿದ್ದು, ವಿದ್ಯುತ್ ಶಾಕ್ನಿಂದ 12 ಮೇಕೆಗಳು ದರ್ಮರಣ ಹೊಂದಿವೆ.
ಬಿರುಗಾಳಿ ಸಹಿತ ಮಳೆಗೆ ಹಾರಿಹೋದ ಶಾಲೆ ಶೆಡ್
ಚಿಕ್ಕೋಡಿ: ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಶಾಲೆ ಶೆಡ್ ಹಾರಿ ಅವಘಡ ಸಂಭವಿಸಿರುವಂತಹ ಘಟನೆ ಅನಂತಪುರ, ಬೆಳ್ಳಿಗೇರಿ, ಗ್ರಾಮಗಳಲ್ಲಿ ನಡೆದಿದೆ. ಭಾರಿ ಮಳೆಗೆ ಶೆಡ್ ಕೆಳಗಡೆ ನಿಲ್ಲಿಸಿದ್ದ ಬೈಕ್ಗಳು ಜಖಂಗೊಂಡಿವೆ. ಅದೃಷ್ಠವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು
ರಾಮನಗರ: ತಡರಾತ್ರಿ ಬಿರುಗಾಳಿ ಸಹಿತ ಧಾರಕಾರ ಮಳೆ ಹಿನ್ನೆಲೆ ಮರಗಳು, ವಿದ್ಯುತ್ ಕಂಬಗಳು, ಮನೆಯ ಶೀಟ್ಗಳು ಹಾರಿ ಹೋದಂತಹ ಘಟನೆ ಮುರುಕಣಿ ಗ್ರಾಮದಲ್ಲಿ ನಡೆದಿದೆ. ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬ, ಐದು ಮರಗಳು ನೆಲಕ್ಕೆ ಉರುಳಿದ್ದು, ಹತ್ತು ಮನೆಯ ಶೀಟ್ಗಳು ಗಾಳಿಗೆ ಹಾರಿ ಹೋಗಿವೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಳೆಯಿಂದಾಗಿ ವಾಣಿಜ್ಯ ಮಳಿಗೆಗಳಿಗೆ ನುಗ್ಗಿದ ನೀರು
ಮಂಡ್ಯ: ರಾತ್ರಿ ಸುರಿದ ಮಳೆಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿರುವಂತಹ ಘಟನೆ ನಡೆದಿದೆ. ಪ್ರತಿ ಬಾರಿ ಮಳೆ ಬಂದಾಗಲು ಸಾರ್ವಜನಿಕರಿಗೆ ಈ ಗೋಳು ತಪ್ಪಿದಂಲ್ಲ. ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ರು ಶಾಶ್ವತ ಪರಿಹಾರ ಸಿಕ್ಕಿಲ್ಲ. ಬೇಕರಿ, ಸ್ಟುಡಿಯೋ ಮತ್ತಿತರ ಅಂಗಡಿಗಳಿಗೆ ನೀರು ನುಗ್ಗಿದೆ. ನೀರಿನಿಂದ ಲಕ್ಷಾಂತರ ರೂ. ಹಾನಿಯಾಗಿದ್ದು, ಕ್ಯಾಮೆರಾ ಇತರ ವಸ್ತುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅವೈಜ್ಞಾನಿಕ ಮೋರಿಯಿಂದ ಈ ಅವಘಡಕ್ಕೆ ಕಾರಣವೆನ್ನಲಾಗುತ್ತಿದೆ. ಶ್ರೀರಂಗಪಟ್ಟಣ ಮುಖ್ಯರಸ್ತೆಯಿಂದ ಹರಿದು ಬಂದ ನೀರು ವಾಣಿಜ್ಯ ಮಳಿಗೆಗಳಿಗೆ ಈ ಅವಾಂತರಕ್ಕೆ ಕಾರಣವಾಗಿದೆ. ರಸ್ತೆಗಾಗಿ ನಿರ್ಮಿಸಿದಂತ ಚೀನಾ ಮಹಾಗೋಡೆ ಇಂದ ಈ ಅವಘಡಕ್ಕೆ ಉಂಟಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.