ಮನೆಯೊಂದರ ಮಹಡಿ ಮೇಲೆ ವಿವಿಧ ಪಕ್ಷಿಗಳ ಕಲರವ; ಬಣ್ಣದಂಗಡಿ ವ್ಯಾಪಾರಿಯ ಪಕ್ಷಿ ಪ್ರೇಮಕ್ಕೆ ಪತ್ನಿ ಸಾಥ್

| Updated By: preethi shettigar

Updated on: Sep 08, 2021 | 12:07 PM

ಸುಮಾರು ಎಂಟು ವರ್ಷಗಳಿಂದ ತಪ್ಪದೆ ನಿತ್ಯ ಪಕ್ಷಿಗಳಿಗೆ ಆಹಾರವಿಡುವ ಕೆಲಸ‌ ಮಾಡುತ್ತ ಬಂದಿದ್ದಾರೆ. ಪರಿಣಾಮ ಈಗ ಮನೆ‌ ಮಹಡಿ ಮೇಲೆ ನಿತ್ಯ ನೂರಾರು‌ ಗುಬ್ಬಿ, ಪಾರಿವಾಳ, ಕಾಗೆ, ಅಳಿಲು ಮತ್ತಿತರೆ ವಿಶೇಷ ಪಕ್ಷಿಗಳು ಬರುತ್ತಿವೆ.

ಮನೆಯೊಂದರ ಮಹಡಿ ಮೇಲೆ ವಿವಿಧ ಪಕ್ಷಿಗಳ ಕಲರವ; ಬಣ್ಣದಂಗಡಿ ವ್ಯಾಪಾರಿಯ ಪಕ್ಷಿ ಪ್ರೇಮಕ್ಕೆ ಪತ್ನಿ ಸಾಥ್
ಮನೆಯೊಂದರ ಮಹಡಿ ಮೇಲೆ ವಿವಿಧ ಪಕ್ಷಿಗಳ ಕಲರವ
Follow us on

ಚಿತ್ರದುರ್ಗ: ಆಧುನಿಕತೆಯ ಭರಾಟೆ ನಡುವೆ ಅನೇಕ ಅಪರೂಪದ ಪಕ್ಷಿಗಳು ಕಾಣದಂತಾಗಿದೆ. ಅದರಲ್ಲೂ ಗುಬ್ಬಿಗಳ ಸಂತತಿ ಇತ್ತೀಚೆಗೆ ಕ್ಷೀಣಿಸಿದೆ. ಹೀಗಿರುವಾಗಲೇ ಕೋಟೆನಾಡಿನಲ್ಲೋರ್ವ ಪಕ್ಷಿ ಪ್ರಿಯ ಮಹಡಿ ಮೇಲೆ ಪಕ್ಷಿ ಲೋಕ ಸೃಷ್ಟಿಸಿದ್ದಾರೆ. ಅದು ಹೇಗೆ ಎಂದು ಹುಬ್ಬೇರಿಸುವವರು ಈ ವರದಿಯನ್ನೊಮ್ಮೆ ಓದಿ.

ಚಿತ್ರದುರ್ಗ ನಗರದ ಕಂಠಿ ಲೇಔಟ್​ನಲ್ಲಿ ವ್ಯಕ್ತಿಯೋರ್ವರು ತಮ್ಮ ಮನೆಯ ಮೇಲೆಯೇ ಪಕ್ಷಿಗಳ ಲೋಕ ಸೃಷ್ಟಿಸಿದ್ದಾರೆ. ಹೌದು, ವೃತ್ತಿಯಲ್ಲಿ ಬಣ್ಣದ ಅಂಗಡಿ ವ್ಯಾಪಾರಿಯಾದ ಮಧುರೆಡ್ಡಿಗೆ ಮೊದಲಿಂದಲೂ ಪರಿಸರ ಅಂದರೆ ಬಲು ಪ್ರೀತಿ. ಇತ್ತೀಚೆಗೆ ಎಲ್ಲೆಂದರಲ್ಲಿ ಮೊಬೈಲ್ ಟವರ್ ಅಳವಡಿಸಿದ ಕಾರಣ ಗುಬ್ಬಿಗಳು ಮರೆಯಾಗುತ್ತಿವೆ. ಇದನ್ನು ಮನಗಂಡಿದ್ದ ಮಧುರೆಡ್ಡಿ ಆಕಸ್ಮಿಕವಾಗಿ ಮನೆ ಮಹಡಿ ಮೇಲೆ‌ ಗುಬ್ಬಿಗಳನ್ನು ಕಂಡಿದ್ದಾರೆ. ಹೀಗಾಗಿ, ಗುಬ್ಬಿಗಳಿಗೆ ನೀರು ಆಹಾರವಿಟ್ಟು ಬರ ಸೆಳೆಯಲು ಶುರು ಮಾಡಿದ್ದಾರೆ.

ಸುಮಾರು ಎಂಟು ವರ್ಷಗಳಿಂದ ತಪ್ಪದೆ ನಿತ್ಯ ಪಕ್ಷಿಗಳಿಗೆ ಆಹಾರವಿಡುವ ಕೆಲಸ‌ ಮಾಡುತ್ತ ಬಂದಿದ್ದಾರೆ. ಪರಿಣಾಮ ಈಗ ಮನೆ‌ ಮಹಡಿ ಮೇಲೆ ನಿತ್ಯ ನೂರಾರು‌ ಗುಬ್ಬಿ, ಪಾರಿವಾಳ, ಕಾಗೆ, ಅಳಿಲು ಮತ್ತಿತರೆ ವಿಶೇಷ ಪಕ್ಷಿಗಳು ಬರುತ್ತಿವೆ. ಪರಿಸರ ಮತ್ತು ಪಕ್ಷಿಗಳ ಜತೆ ಕಾಲ ಕಳೆಯುವುದು‌ ನನಗೆ ಖುಷಿ ನೀಡುತ್ತದೆ ಎಂದು ಪಕ್ಷಿ ಪ್ರಿಯ ಮಧುರೆಡ್ಡಿ ಹೇಳಿದ್ದಾರೆ.

ಇನ್ನು ಪಕ್ಷಿ ಪ್ರಿಯ ಮಧುರೆಡ್ಡಿಗೆ ಪತ್ನಿ ಮಂಜುಳಾ ಸಾಥ್ ನೀಡುತ್ತ ಬಂದಿದ್ದಾರೆ. ಪಕ್ಷಿಗಳ ವಿವಿಧ ಫುಡ್​ಗಾಗಿ ನಿತ್ಯ ನೂರಾರು‌ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಒಂದು ಹೊತ್ತಿನ ಊಟದ ವೇಳೆ‌ ನಾವು ಕಡಿಮೆ ಊಟ ಮಾಡುತ್ತೇವೆ ಹೊರತು, ಪಕ್ಷಿಗಳಿಗೆ ಕಡಿಮೆ ಮಾಡಲ್ಲ. ಪಕ್ಷಿಗಳಿಗೆ ತಪ್ಪದೆ ಆಹಾರ ಹಾಕಬೇಕೆಂಬ ಕಾರಣಕ್ಕೆ ಮನೆ ಬಿಟ್ಟು ಎಲ್ಲೂ ದೂರದ ಊರುಗಳಿಗೆ ಹೋಗಲ್ಲ. ದಿನಪೂರ್ತಿ ಪಕ್ಷಿಗಳು ಮಹಡಿ ಮೇಲೆ ಓಡಾಡುತ್ತಿರುತ್ತವೆ. ಬೇಸರದ ಸಮಯ‌ ಮಹಡಿ ಮೇಲೆ‌ ಹೋದರೆ ಸಾಕು ಮನಸ್ಸು ಉಲ್ಲಾಸಗೊಳ್ಳುತ್ತದೆ  ಎಂದು ಮಧುರೆಡ್ಡಿ ಪತ್ನಿ ಮಂಜುಳಾ ಅಭಿಪ್ರಾಯಪಟ್ಟಿದ್ದಾರೆ.

ಅಪರೂಪದ ಪಕ್ಷಿಗಳು

ಒಟ್ಟಾರೆಯಾಗಿ ಕೋಟೆನಾಡಿನ ಬಣ್ಣದಂಗಡಿ ವ್ಯಾಪಾರಿಯ ಪಕ್ಷಿ ಪ್ರೇಮಕ್ಕೆ ದುರ್ಗದ ಜನ ಫಿದಾ ಆಗಿದ್ದಾರೆ. ಪರಿಸರಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮಧುರೆಡ್ಡಿ ಪರಿಸರ ಮತ್ತು ಪಕ್ಷಿಗಳ ಉಳುವಿಗಾಗಿ ಕಂಕಣ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಪರಿಸರ ಸಂರಕ್ಷಣೆ ಮತ್ತು ಪಕ್ಷಿಸಂಕುಲ ಉಳುವಿನ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ.

ವರದಿ: ಬಸವರಾಜ ಮುದನೂರ್ 

ಇದನ್ನೂ ಓದಿ:
ದೆಹಲಿ ಮೃಗಾಲಯದಲ್ಲಿ ಚಿತ್ರಿಸಿದ ಕೊಕ್ಕರೆಗಳು; 140 ವಿವಿಧ ಬಣ್ಣದ ಪಕ್ಷಿಗಳ ಚಿತ್ರ ಸೆರೆ

ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ

Published On - 11:53 am, Wed, 8 September 21