Murugha Shree: ಮುರುಘಾ ಮಠದ ಶಿವಮೂರ್ತಿ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನ; ಜೈಲಿನಲ್ಲಿ ಮೌನಕ್ಕೆ ಶರಣಾದ ಸ್ವಾಮೀಜಿ

ಕಿಟಕಿ ಗಾಜಿಗೆ ಪರದೆ ಹಾಕಿದ್ದ ಕಾರಿನಲ್ಲಿ ಸ್ವಾಮೀಜಿಯನ್ನು ಪೊಲೀಸರು ಮಠದ ಆವರಣದಿಂದ ಹೊರಗೆ ಕರೆತಂದರು.

Murugha Shree: ಮುರುಘಾ ಮಠದ ಶಿವಮೂರ್ತಿ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನ; ಜೈಲಿನಲ್ಲಿ ಮೌನಕ್ಕೆ ಶರಣಾದ ಸ್ವಾಮೀಜಿ
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 02, 2022 | 9:32 AM

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಯನ್ನು (Shivamurthy Murugha Sharana Swamiji) ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ನೀಡಿ ಗುರುವಾರ ರಾತ್ರಿ ಆದೇಶ ನೀಡಿದ್ದಾರೆ. ರಾತ್ರಿ 10 ಗಂಟೆಗೆ ಮುರುಘಾ ಶರಣರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಮಧ್ಯರಾತ್ರಿ 2 ಗಂಟೆಗೆ 1ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶೆ ಹಾಗೂ ಮ್ಯಾಜಿಸ್ಟ್ರೇಟ್ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಪೊಕ್ಸೊ ಕಾಯ್ದೆಯಡಿ (POCSO Act) ಪ್ರಕರಣ ದಾಖಲಾಗಿದ್ದು, ವಿಚಾರಣೆಗಾಗಿ ಮುರುಘಾ ಶರಣರನ್ನು 10 ದಿನಗಳ ಅವಧಿಗೆ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಶುಕ್ರವಾರ ಮನವಿ ಮಾಡುವ ಸಾಧ್ಯತೆಯಿದೆ. ಶ್ರೀಗಳ ಪರ ವಕೀಲರು ಮ್ಯಾಜಿಸ್ಟ್ರೇಟ್ ಎದುರು ಜಾಮೀನು ಅರ್ಜಿ ಸಲ್ಲಿಸಲು ಯತ್ನಿಸಿದರು. ಅರ್ಜಿಯನ್ನು ಸರಿರಾತ್ರಿಯಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಒಪ್ಪದ ಮ್ಯಾಜಿಸ್ಟ್ರೇಟ್ ‘ನಾಳೆ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ’ ಎಂದು ಸೂಚಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಇಂದು ನ್ಯಾಯಾಲಯದ ಕಲಾಪದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಪ್ರಕರಣದ 2ನೇ ಆರೋಪಿ ಹಾಸ್ಟೆಲ್​ನ ವಾರ್ಡನ್ ರಶ್ಮಿಯ ವಿಚಾರಣೆ ಮುಂದುವರಿಯಲಿದೆ. ಮಠದ ಆಡಳಿತಾಧಿಕಾರಿಯಾಗಿದ್ದ ಇಂದು‌ ಮಧ್ಯಾಹ್ನದ ವೇಳೆ ರಶ್ಮಿ ಬಂಧನ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಪ್ರಕರಣದ ಇತರ ಮೂವರು ಆರೋಪಿಗಳ ಚಲನವಲನದ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಯಾವಾಗ ಬೇಕಾದರೂ ಅವರ ಬಂಧನವಾಗಬಹುದು ಎಂದು ಹೇಳಲಾಗಿದೆ.

ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿರುವ ಮುರುಘಾ ಶರಣರು ಚಿಂತೆಯಿಂದ ಸಪ್ಪಗಾಗಿದ್ದರು. ರಾತ್ರಿ 2:50ರ ಸುಮಾರಿಗೆ ಅವರನ್ನು ಜೈಲಿಗೆ ಕರೆತರಲಾಯಿತು. ರಾತ್ರಿ 3 ಗಂಟೆಯಿಂದ ಅವರು ಎದ್ದು ಕುಳಿತೇ ಇದ್ದರು. ಜೈಲಿನಲ್ಲಿ ರಾತ್ರಿ ನಿದ್ದೆ ಮಾಡದ ಮುರುಘಾ ಶರಣರು ಮೌನಕ್ಕೆ ಶರಣಾಗಿದ್ದರು. ಮಠದ ಪರ ವಕಾಲತ್ತು ಹಾಕಿರುವ ವಕೀಲ ಉಮೆಶ್ ಅವರು ಔಷಧಿ, ಬ್ರೆಶ್, ಟೂತ್​ಪೇಸ್ಟ್ ಅನ್ನು ಜೈಲಿನ ಸಿಬ್ಬಂದಿಗೆ ಕೊಟ್ಟು ತೆರಳಿದರು. ಅನಾರೋಗ್ಯ ನೆಪದಲ್ಲಿ ಇಂದು ಆಸ್ಪತ್ರೆಗೆ ದಾಖಲು ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: Murugha Shree Arrest: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂಧನ

ಎಫ್​ಐಆರ್ ದಾಖಲಾದ 6 ದಿನಗಳ ಬಳಿಕ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದರು. ಬಾಲಕಿಯರು ಸೆ 1ರಂದು ನೀಡಿದ ಹೇಳಿಕೆ ಹಾಗೂ ಇತರ ಸಾಕ್ಷಿಗಳು ಬಿಗಿಯಾಗಿದ್ದ ಕಾರಣ ಸ್ವಾಮೀಜಿ ಬಂಧನದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮುರುಘಾ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಆರೋಗ್ಯ ಸದೃಢವಾಗಿದೆ, ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ವರದಿ ನೀಡಿದ ನಂತರ ಸ್ವಾಮೀಜಿಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು.

ಮುರುಘಾಶ್ರೀಗಳ ಬಂಧನ ಹಿನ್ನೆಲೆಯಲ್ಲಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ, ಮುರುಘಾಮಠ ಹಾಗೂ ನ್ಯಾಯಾಧೀಶರ ನಿವಾಸದ ಸುತ್ತಮುತ್ತ ಬಿಗಿ ಭದ್ರತೆ ಇತ್ತು. ಕಿಟಕಿ ಗಾಜಿಗೆ ಪರದೆ ಹಾಕಿದ್ದ ಕಾರಿನಲ್ಲಿ ಸ್ವಾಮೀಜಿಯನ್ನು ಪೊಲೀಸರು ಮಠದಿಂದ ಹೊರಗೆ ಕರೆತಂದರು. ಸ್ವಾಮೀಜಿಯನ್ನು ಜಿಲ್ಲಾಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಆಸ್ಪತ್ರೆಗೆ ಮುರುಘಾ ಮಠದ ಒಡೆತನದಲ್ಲಿರುವ ಬಸವೇಶ್ವರ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ ಫಾಲಾಕ್ಷ ಭೇಟಿ ನೀಡಿದ್ದರು.

Published On - 7:08 am, Fri, 2 September 22