Murugha Shree Profile: ಕಾವಿಧಾರಿ ಶಿವಮೂರ್ತಿ ಮುರುಘಾ ಶರಣರ ಮೇಲಿನ ಕಾಮದ ಆರೋಪಕ್ಕಿದೆ ಲೋಭ, ಕ್ರೋಧದ ನಂಟು
Dr Shivamurthy Murugha Sharanaru: ಡಾ ಶಿವಮೂರ್ತಿ ಮುರುಘಾ ಶರಣರು ಸಾಗಿ ಬಂದ ಹಾದಿಯಿದು. ಇದೀಗ ಜೈಲಿನಲ್ಲಿರುವ ಸನ್ಯಾಸಿಯ ಬದುಕಿನ ಪುಟಗಳು ಹೀಗಿದ್ದವು.
ಚಿತ್ರದುರ್ಗದಲ್ಲಿರುವ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠವು ಕರ್ನಾಟಕದ ಸಾಮಾಜಿಕ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಜನಪ್ರಿಯ ಶ್ರದ್ಧಾಕೇಂದ್ರ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಠಕ್ಕೆ ಭಕ್ತರಿದ್ದಾರೆ. ಲಿಂಗಾಯತ ಪರಂಪರೆಯ ಮಠವಾದರೂ ವಿವಿಧ ಜಾತಿ ಮತ್ತು ಧರ್ಮಗಳಲ್ಲಿಯೂ ಪ್ರಭಾವ ಹೊಂದಿದೆ. ಸಮಾಜ ಸುಧಾರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹುಕಾಲದಿಂದ ಸಕ್ರಿಯವಾಗಿದ್ದು, ಕರ್ನಾಟಕದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ಕೊಟ್ಟಿದೆ. 17ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳಯಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನ ಆಳ್ವಿಕೆಯ ಅವಧಿಯಲ್ಲಿ ರಾಜಾಶ್ರಯ ಪಡೆದ ಮಠಕ್ಕೆ ನಂತರದ ದಿನಗಳಲ್ಲಿ ಪ್ರತಿ ಆಡಳಿತಗಾರರು ಗೌರವ ಸಲ್ಲಿಸಿದರು.
ಸ್ವಾತಂತ್ರ್ಯ ನಂತರದ ಕರ್ನಾಟಕ ರಾಜಕಾರಣದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ ಅಥವಾ ಇಳಿಸುವ ಸಾಮರ್ಥ್ಯವನ್ನು ಎನಿಸಿದ ವೀರಶೈವ ಲಿಂಗಾಯತ ಸಮುದಾಯ ಹಲವು ಬಾರಿ ಪ್ರದರ್ಶಿಸಿದೆ. ಇದೇ ಸಮುದಾಯಕ್ಕೆ ಸೇರಿದ ಮಠವನ್ನು ನಿರ್ಲಕ್ಷಿಸಲು ಅಥವಾ ಮೂಲೆಗುಂಪು ಮಾಡಲು ಯಾವೊಂದು ಪಕ್ಷವೂ ಧೈರ್ಯ ಮಾಡಲಿಲ್ಲ. ಆದರೆ ಮಠವು ರಾಜಕಾರಣಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಸಹಜವಾಗಿಯೇ ಭಕ್ತಿಯೊಂದಿಗೆ ಜನರು ಗೌರವ, ಪ್ರೀತಿಗಳೂ ದೊರೆತವು.
ಇಂದು ಪೊಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಚಿತ್ರದುರ್ಗ ಜೈಲಿನ ವಿಚಾರಣಾಧೀನ ಕೈದಿ ನಂ 2261 ಆಗಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಈವರೆಗೆ ಹೇಳಿಕೊಳ್ಳುವಂಥ ಆರೋಪಗಳು ಇರಲಿಲ್ಲ. ಸ್ವಾಮೀಜಿ ಆಪ್ತರಾಗಿದ್ದ ಬಸವರಾಜನ್ ಈ ಹಿಂದೆಯೂ ಹಲವು ಆರೋಪಗಳನ್ನು ಮಾಡಿದ್ದರಾದರೂ, ಪರಿಸ್ಥಿತಿ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ ಇದೀಗ ಮಠದ ಆಶ್ರಯದಲ್ಲಿದ್ದ ಮಕ್ಕಳೇ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದರೊಂದಿಗೆ ಅವರ ಘನತೆಗೆ ಧಕ್ಕೆ ಬಂದಿದೆ. ‘ಇದು ನಂಬಿಕೆದ್ರೋಹ. ನಿರಪರಾಧಿ ಎಂದು ಸಾಬೀತಾಗುವವರೆಗೆ ಅವರು ಪೀಠದಿಂದ ಕೆಳಗಿಳಿದು ತನಿಖೆ ಎದುರಿಸಬೇಕು’ ಎಂದು ರಾಜ್ಯದ ಹಲವೆಡೆ ಭಕ್ತರು ಒತ್ತಾಯಿಸುತ್ತಿದ್ದಾರೆ.
ಸ್ವಾಮೀಜಿಗೆ ಈ ಪರಿಸ್ಥಿತಿ ಬರಲು ಹಿಂದೊಮ್ಮೆ ಅವರ ಆಪ್ತರಾಗಿದ್ದ ಬಸವರಾಜನ್ ಅವರೇ ಮುಖ್ಯ ಕಾರಣ ಎಂದು ದೂರಲಾಗುತ್ತಿದೆ. ಈ ಹಿಂದೆ ಮಠದ ಆಡಳಿತಾಧಿಕಾರಿಯಾಗಿದ್ದ ಬಸವರಾಜನ್ ಮೇಲೆಯೂ ಅತ್ಯಾಚಾರದ ದೂರು ದಾಖಲಾಗಿದೆ. ಧಾರ್ಮಿಕ ಮನೋಭಾವದ ಭಕ್ತರಿಗೆ ಈ ದೂರು-ಪ್ರತಿದೂರುಗಳು ಅಸಹ್ಯ ಹುಟ್ಟಿಸಿವೆ.
ಇದನ್ನೂ ಓದಿ: ಪೊಕ್ಸೋ ಕೇಸ್ನ A1 ಆರೋಪಿ ಮುರುಘಾ ಮಠದ ಶಿವಮೂರ್ತಿ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನ
ಒಲಿದು ಬಂದ ಪೀಠಾಧಿಕಾರ
ಚಿತ್ರದುರ್ಗ ತಾಲೂಕಿನ ಗೊಡಬನಾಳ್ ಗ್ರಾಮದಲ್ಲಿ ನವೆಂಬರ್ 4, 1958ರಂದು ಗುರುಮೂರ್ತೆಪ್ಪ – ಮುರುಗೆಮ್ಮ ದಂಪತಿಯ ಮಗನಾಗಿ ಶಿವಮೂರ್ತಿ ಮುರುಘಾ ಶರಣರು ಜನಿಸಿದರು. ಇವರ ಪೋಷಕರು ಮುರುಘಾ ಮಠದ ಭಕ್ತರಾಗಿದ್ದರು. ಬಾಲ್ಯದಲ್ಲೇ ಶಿಕ್ಷಣಕ್ಕಾಗಿ ಮಠದ ಆಶ್ರಯ ದೊರೆಯಿತು. ಮುರುಘಾಮಠದ ಅಂದಿನ ಪೀಠಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಗೆ ಇವರ ನಡವಳಿಕೆ ಮತ್ತು ಬುದ್ಧಿವಂತಿಕೆ ಇಷ್ಟವಾಯಿತು. ಹೀಗಾಗಿ ಮಠದ ಅಧಿಕಾರ ವಲಯದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಂತಹಂತವಾಗಿ ಮೇಲೇರುತ್ತಾ ಬಂದರು. 1978ರಲ್ಲಿ ಶಿರಸಿ ರುದ್ರದೇವರ ಮಠದ ಮರಿದೇವರು, 1982ರಲ್ಲಿ ಶಿರಸಿ ರುದ್ರದೇವರ ಮಠದ ಪಟ್ಟಾಧಿಕಾರಿ, 1984ರಲ್ಲಿ ಹಾವೇರಿ ಮಠದ ಪೀಠಾದ್ಯಕ್ಷರಾದರು. ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರಾಗಿ ಜನವರಿ 31, 1991ರಲ್ಲಿ ಅಧಿಕಾರ ಸ್ವೀಕರಿಸಿದರು.
ಇದೀಗ ಸ್ವಾಮೀಜಿ ವಿರುದ್ಧ ಹಲವು ಆರೋಪ ಮಾಡಿರುವ ಎಸ್.ಕೆ.ಬಸವರಾಜನ್ ಸಹ ಹಿಂದಿನ ಪೀಠಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಗೆ ನೆಚ್ಚಿನ ಆಪ್ತ ಶಿಷ್ಯರಾಗಿದ್ದವರು. ಬಸವರಾಜನ್ ಅವರನ್ನೇ ಪೀಠಾಧ್ಯಕ್ಷರನ್ನಾಗಿ ಘೋಷಿಸಲು ಮಲ್ಲಿಕಾರ್ಜುನ ಮುರುಘ ರಾಜೇಂದ್ರರು ಮನಸ್ಸು ಮಾಡಿದ್ದರು. ಆದರೆ ಪೀಠಾಧ್ಯಕ್ಷರಾಗಲು ಬಸವರಾಜನ್ ಒಪ್ಪದ ಹಿನ್ನೆಲೆಯಲ್ಲಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ಘೋಷಿಸಿ, ಶಿವಮೂರ್ತಿ ಮುರುಘಾ ಶರಣನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು. ಚಿತ್ರದುರ್ಗ ತಾಲೂಕಿನ ಸೊಂಡೆಕೊಳ ಗ್ರಾಮದ ನಿವಾಸಿ ಎಸ್.ಕೆ.ಬಸವರಾಜನ್. ಈ ಗ್ರಾಮದ ಪಕ್ಕದಲ್ಲಿಯೇ ಶಿವಮೂರ್ತಿ ಮುರುಘಾ ಶರಣದ ಗೊಡಬನಾಳ್ ಗ್ರಾಮವಿದೆ. ಬಸವರಾಜನ್ ಸಹ 6 ವರ್ಷದ ಹುಡುಗನಾಗಿದ್ದಾಗಲೇ ಭಕ್ತರಾಗಿ ಮಠ ಸೇರಿದ್ದರು. ಚಿಕ್ಕಂದಿನಿಂದಲೇ ಬಸವರಾಜನ್, ಮುರುಘಾ ಶ್ರೀ ಪರಿಚಿತರಾಗಿದ್ದರು.
ಸಮಾಜ ಸುಧಾರಣೆ, ಹಲವು ಪ್ರಥಮಗಳಿಗೆ ಶ್ರೀಕಾರ
ಗುರುಪೀಠಗಳು ಇಲ್ಲದಿದ್ದ ಕರ್ನಾಟಕದ ಹಲವು ಸಮುದಾಯಗಳಿಗೆ ಗುರುಪೀಠಗಳನ್ನು ಆರಂಭಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಶಿವಮೂರ್ತಿ ಮುರುಘಾ ಶರಣರು ಮುನ್ನುಡಿ ಬರೆದರು. 17ನೇ ಶತಮಾನದಲ್ಲಿ ರಾಜಮನೆತನದ ಆಶ್ರಯದಲ್ಲಿ ಪ್ರವರ್ಧಮಾನಕ್ಕೆ ಬಂದ ಮಠದ ಪರಂಪರೆಯಂತೆ ಇವರು ತಮ್ಮನ್ನು ತಾವು ಜಗದ್ಗುರುಗಳು ಎಂದು ಕರೆಸಿಕೊಳ್ಳಲಿಲ್ಲ. ಶರಣ ಸಂಸ್ಕೃತಿಯ ಪ್ರತೀಕವಾಗಿ ತಮ್ಮನ್ನು ತಾವು ‘ಶರಣ’ ಎಂದೇ ಕರೆದುಕೊಂಡರು. ಬೆಳ್ಳಿಸಿಂಹಾಸನ ಹಾಗೂ ಅಡ್ಡಪಲ್ಲಕ್ಕಿಗಳನ್ನು ತಿರಸ್ಕರಿಸಿ ‘ನಾನು ಸಾಮಾನ್ಯರಲ್ಲಿ ಸಾಮಾನ್ಯ, ಬಸವ ಧರ್ಮದ ಅನುಯಾಯಿ’ ಎಂದು ಘೋಷಿಸಿಕೊಂಡರು. ಜಾತಿ ಭೇದ ಮಾಡದೆ ಸಮಾಜದ ಎಲ್ಲಾ ವರ್ಗದ ಜನರನ್ನು ಮಠದೊಳಗೆ ಕರೆತಂದರು. ಹಲವು ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನೂ ತುಂಬಿದರು. ಇವರ ಆಡಳಿತ ಅವಧಿಯಲ್ಲಿ ಮುರುಘಾ ಮಠದ ಪ್ರಭಾವ ಮತ್ತು ಚಟುವಟಿಕೆಗಳು ದೊಡ್ಡಮಟ್ಟದಲ್ಲಿ ಬೆಳೆದವು. ಈ ಬೆಳವಣಿಗೆಯ ಹಿಂದೆ ಬಸವರಾಜನ್ ಅವರ ಪರಿಶ್ರಮ ಮತ್ತು ಆಲೋಚನೆಗಳೂ ಕೆಲಸ ಮಾಡಿದ್ದವು.
ಮೂಡಿತು ಭಿನ್ನಾಬಿಪ್ರಾಯ
ಬಹುಕಾಲದ ಒಡನಾಡಿಗಳಾಗಿದ್ದ ಬಸವರಾಜನ್ ಹಾಗೂ ಶಿವಮೂರ್ತಿ ಮುರುಘಾ ಶರಣರ ನಡುವೆ 2007ರಲ್ಲಿ ಮೊದಲ ಬಾರಿಗೆ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಮಠದ ಹಣ, ಆಸ್ತಿ ಕಬಳಿಕೆ, ವೆಚ್ಚಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಒಬ್ಬರು ಇನ್ನೊಬ್ಬರ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ತೀವ್ರ ಅಸಮಾಧಾನದಿಂದ 2007ರಲ್ಲಿ ಬಸವರಾಜನ್ ಮಠದಿಂದ ಹೊರ ನಡೆದಿದ್ದರು. ಬಳಿಕ ಮುರುಘಾಶ್ರೀ, ಬಸವರಾಜನ್ ನಡುವೆ ವಿವಿಧ ಆಸ್ತಿಗಳ ಬಗ್ಗೆ ಕೋರ್ಟು, ಕಚೇರಿಗಳಲ್ಲಿ ನಿರಂತರ ವ್ಯಾಜ್ಯಗಳು ನಡೆದಿದ್ದವು.
2008ರಲ್ಲಿ ಬಸವರಾಜನ್ ಚಿತ್ರದುರ್ಗ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು. ನಂತರ ಕಳೆದ ಮಾರ್ಚ್ 7ರಂದು ಬಸವರಾಜನ್ ದಿಢೀರ್ ಮಠಕ್ಕೆ ಮರುಪ್ರವೇಶ ಮಾಡಿದರು. ಮತ್ತೆ ಅವರಿಗೆ ಮಠದ ಆಡಳಿತಾಧಿಕಾರಿ ಹುದ್ದೆ ನೀಡಲಾಯಿತು. ಇಬ್ಬರೂ ಒಗ್ಗೂಡಿ ಮಠದ ಅಭಿವೃದ್ಧಿಗೆ ಶ್ರಮಿಸುವುದಾಗಿ ಘೋಷಿಸಿದರು. ಮಠದ ವಿರುದ್ಧ ಷಡ್ಯಂತ್ರ ಮಾಡಕೂಡದು, ಆಸ್ತಿ ವ್ಯಾಜ್ಯಗಳಲ್ಲಿ ರಾಜಿ ಮಾಡಿಕೊಳ್ಳಬೇಕು ಎನ್ನುವುದೂ ಸೇರಿದಂತೆ ಹಲವು ಷರತ್ತುಗಳನ್ನು ಈ ವೇಳೆ ಸ್ವಾಮೀಜಿ ವಿಧಿಸಿದ್ದರು. ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯನ್ನೂ ಬಸವರಾಜನ್ ಅವರಿಗೆ ನೀಡಲಾಗಿತ್ತು.
ಮುರಿದ ಮನಸ್ಸುಗಳಿಗೆ ಹಾಕಿದ್ದ ತೇಪೆ ಹೆಚ್ಚು ಕಾಲ ಬಾಳಲಿಲ್ಲ. ಮೂರೇ ತಿಂಗಳಲ್ಲಿ ಮುರುಘಾಶ್ರೀ, ಬಸವರಾಜನ್ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮಠದ ಹಾಸ್ಟೆಲ್ನಿಂದ ನಾಪತ್ತೆಯಾದ ಬಾಲಕಿಯರನ್ನು ಬಸವರಾಜನ್ ಬೆಂಗಳೂರಿನಿಂದ ಕರೆತಂದಿದ್ದರು. ಈ ಬೆಳವಣಿಗೆಯ ನಂತರ ಇಬ್ಬರ ನಡುವೆ ಶೀತಲಸಮರ ಸ್ಫೋಟಗೊಂಡಿತ್ತು. ಸ್ವಾಮೀಜಿ ವಿರುದ್ಧ ಬಾಲಕಿಯರು ಆರೋಪ ಮಾಡಲು, ಅವರನ್ನು ಮೈಸೂರಿಗೆ ಒಡನಾಡಿ ಸಂಸ್ಥೆಗೆ ತಲುಪಿಸಲು ಬಸವರಾಜನ್ ಅವರೇ ಮುಖ್ಯ ಕಾರಣ ಎಂದು ಇದೀಗ ಬಹಿರಂಗವಾಗಿ ದೂರಲಾಗುತ್ತಿದೆ.
Published On - 9:30 am, Fri, 2 September 22