ಪೊಕ್ಸೊ ಪ್ರಕರಣದ A2 ಆರೋಪಿ, ಮುರುಘಾ ಮಠದ ಹಾಸ್ಟೆಲ್ ವಾರ್ಡನ್ ರಶ್ಮಿ ಬಂಧನ
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂಧನ ಸಂಬಂಧ A- 2 ಆಗಿರುವ ಲೇಡಿ ವಾರ್ಡನ್ನ್ನು ಚಿತ್ರದುರ್ಗ ಪೊಲೀಸರಿಂದ ಬಂಧನ ಮಾಡಲಾಗಿದೆ.
ಚಿತ್ರದರ್ಗ: ಪೋಕ್ಸೋ ಪ್ರಕರಣ (Pocso Act) ದಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ (Shivamurthy Swamiji) ಬಂಧನ ಸಂಬಂಧ A- 2 ಆಗಿರುವ ಲೇಡಿ ವಾರ್ಡನ್ನ್ನು ಚಿತ್ರದುರ್ಗ ಪೊಲೀಸರಿಂದ ಬಂಧನ ಮಾಡಲಾಗಿದೆ. ನಿನ್ನೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು, ಇಂದು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ. ಮುರುಘಾಶ್ರೀ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನವಾಗಿದೆ. ಸ್ವಾಮೀಜಿ ಅವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಹೇಳುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯರು ವಿಚಾರಣೆಯಲ್ಲಿ ಆರೋಪ ಮಾಡಿದ್ದಾರೆ. ಹಾಸ್ಟೆಲ್ನ ಮಹಿಳಾ ವಾರ್ಡನ್, ಎಸ್.ಕೆ.ಬಸವರಾಜನ್ ವಿರುದ್ಧ ಅತ್ಯಾಚಾರಕ್ಕೆ ಯತ್ನ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಆ. 26 ರಂದು ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354ರಡಿ ಪ್ರಕರಣ ದಾಖಲಾಗಿದೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ IPC ಸೆಕ್ಷನ್ 341, 342, 504, 506ರಡಿ ಪ್ರಕರಣ ದಾಖಲಾಗಿತ್ತು.
ನನ್ನ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ: ಮಾಜಿ ಶಾಸಕ ಎಸ್.ಕೆ.ಬಸವರಾಜನ್
ಈ ಕುರಿತಾಗಿ ಟಿವಿ9 ಜೊತೆಗೆ ಮಾತನಾಡಿದ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಶ್ರೀಗಳ ವಿರುದ್ಧ ಕೇಸ್ ದಾಖಲಾಗಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ. ಬೆಂಗಳೂರಿನಿಂದ ಮಕ್ಕಳನ್ನು ಕರೆದುಕೊಂಡು ಬಂದಿದ್ದು ನಿಜ, ನನ್ನ ಮನೆಯಲ್ಲಿ ಕೆಲ ದಿನ ಇಟ್ಟುಕೊಂಡಿದ್ದು ನಿಜ, ನಂತರದಲ್ಲಿ ಬಳಿಕ ಮಠಕ್ಕೆ ಮಕ್ಕಳು ಹೋಗಿದ್ದು ನಿಜ ಎಂದು ಹೇಳಿದ್ದಾರೆ. ಇಲ್ಲಿ ಯಾರು, ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಕೆಲವರ ಅಹಂನಿಂದ ಸಂಸ್ಥೆ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.
ಯಾರು ತಪ್ಪು ಮಾಡಿದ್ದಾರೆಂದು ಕೋರ್ಟ್‌ನಲ್ಲಿ ತೀರ್ಮಾನವಾಗುತ್ತೆ, ಲೈಂಗಿಕ ಆರೋಪ ಇಲ್ಲ ಅನ್ನಲಾಗಲ್ಲ, ಸುಳ್ಳು ಅನ್ನುವುದಕ್ಕೆ ಆಗಲ್ಲ, ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಆರೋಪ ಸುಳ್ಳು ಅನ್ನಲು ಆಗಲ್ಲ, ಅವರಿಗೆ ಅಧಿಕಾರ ಇದೆ, ಹೀಗಾಗಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಶ್ರೀಗಳನ್ನು ತೆಗೆದುಹಾಕುವುದು ಭಕ್ತರಿಗೆ ಬಿಟ್ಟಿದ್ದು. ಮಠ ಸಾರ್ವಜನಿಕರಿಗೆ ಸೇರಿದ ಆಸ್ತಿ. ಮೊದಲು ಮಕ್ಕಳು, ಆ ಮೇಲೆ ಶ್ರೀಗಳು, ಮಕ್ಕಳಿಗೆ ರಕ್ಷಣೆ ಸಿಗಲಿ, ಸಂಧಾನ ಸಭೆ ನಡೆದಿಲ್ಲ, ಸೌಹಾರ್ದ ಸಭೆ ನಡೆದಿದೆ. ಪೋಕ್ಸೋ ಕೇಸ್‌ನಲ್ಲಿ ನಾನು ರಾಜಿ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಶ್ರೀಗಳ ಜೊತೆ ನಾನು ರಾಜಿಯಾದ್ರೆ ಪೋಕ್ಸೋ ಕೇಸ್ ರದ್ದಾಗಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ: ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ
ಪೋಕ್ಸೋ ಕೇಸ್‌ನಲ್ಲಿ ಮುರುಘಾಶ್ರೀಗಳ ಬಂಧನ ಪ್ರಕರಣ ಸಂಬಂಧ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ ಶ್ರೀಗಳ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲಾ ಕಾರಾಗೃಹದಿಂದ ಜಿಲ್ಲಾಸ್ಪತ್ರೆಗೆ ಮುರುಘಾಶ್ರೀ ಶಿಫ್ಟ್ ಮಾಡಿದ್ದು, ಹಿರಿಯ ವೈದ್ಯೆ ರೂಪಾ, ಹೆರಿಗೆ ತಜ್ಞ ಡಾ ಶಿವಕುಮಾರ್ ಸೇರಿ ಮೂವರು ವೈದ್ಯರ ನೇತೃತ್ವದಲ್ಲಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇನ್ನೂ ಶ್ರೀಗಳ ಅಡ್ವೋಕೆಟ್ ಉಮೇಶ್ ಚಿತ್ರದುರ್ಗ ಡಿಸ್ಟ್ರಿಕ್ಟ್ ಸರ್ಜನ್ ಡಾ. ಬಸವರಾಜ್ರಿಂದ ಮಾಹಿತಿ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆ ಶಿಫ್ಟ್ ಮಾಡಿ ಎಂದು ಡಿಸ್ಟ್ರಿಕ್ಟ್ ಸರ್ಜನ್ ಡಾ. ಬಸವರಾಜ್ ಹೇಳಿದ್ದಾರೆ ಎಂದು ಅಡ್ವೋಕೆಟ್ ಉಮೇಶ್ ಮಾಹಿತಿ ನೀಡಿದರು. ಸ್ವಾಮೀಜಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:24 pm, Fri, 2 September 22