Murugha Shree: ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ ಮುರುಘಾ ಶರಣರು: ಆಕ್ಷೇಪ ಸಲ್ಲಿಸಲು ಸರ್ಕಾರಿ ವಕೀಲರ ನಿರ್ಧಾರ
ಸಂತ್ರಸ್ತ ಬಾಲಕಿಯರ ಪರವಾಗಿ ವಾದ ಮಂಡಿಸಲು ಖಾಸಗಿ ವಕೀಲರಿಗಾಗಿ ಚಿತ್ರದುರ್ಗದ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಯು ಅರ್ಜಿ ಸಲ್ಲಿಸಿದೆ.
ಚಿತ್ರದುರ್ಗ: ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪೊಕ್ಸೊ ಪ್ರಕರಣದಲ್ಲಿ (Protection of Children from Sexual Offences Act, 2012) ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಗುರುವಾರ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸ್ವಾಮೀಜಿ ಅರ್ಜಿಯ ಪ್ರತಿಯನ್ನು ಪಡೆದುಕೊಂಡಿದ್ದು, ಅವರು ಪ್ರಸ್ತಾಪಿಸಿರುವ ಅಂಶಗಳಿಗೆ ಆಕ್ಷೇಪ ಸಲ್ಲಿಸುತ್ತೇವೆ ಎಂದು ಸರ್ಕಾರಿ ವಕೀಲರು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಮುರುಘಾ ಶ್ರೀಗಳ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು (National Commission for Protection of Child Rights – NCPCR) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ದೂರಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರಿಗೆ 9 ಪ್ರಶ್ನೆಗಳನ್ನು ಕೇಳಿದೆ.
ಇಂದಿನ ಬೆಳವಣಿಗೆಗಳ ಕುರಿತು ‘ಟಿವಿ9’ಗೆ ಪ್ರತಿಕ್ರಿಯಿಸಿರುವ ಮಠದ ಪರ ವಕೀಲ ವಿಶ್ವನಾಥಯ್ಯ, ‘ಮುರುಘಾ ಶರಣರಿಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದೆವು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದೆ. ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ನಾಳೆಗೆ (ಸೆಪ್ಟೆಂಬರ್ 2) ಮುಂದೂಡಿದೆ’ ಎಂದು ಹೇಳಿದರು.
ಸರ್ಕಾರದ ಪರ ವಕೀಲ ಶ್ರೀನಿವಾಸ್ ಮಾತನಾಡಿ, ‘ಸಂತ್ರಸ್ತರು ತಮ್ಮ ಪರ ವಕಾಲತ್ತು ನಡೆಸುವಂತೆ ನನಗೆ ಮನವಿ ಮಾಡಿದ್ದಾರೆ. ಸ್ವಾಮೀಜಿ ಜಾಮೀನು ಅರ್ಜಿಗೆ ನಾಳೆ ಆಕ್ಷೇಪಣೆ ಸಲ್ಲಿಸುತ್ತೇವೆ. ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಿದ್ದಾರೆ. ತಮ್ಮ ಪರ ವಕಾಲತ್ತಿಗೆ ಸಂತ್ರಸ್ತ ಬಾಲಕಿಯರು ಮನವಿ ಮಾಡಿದ್ದರು. ಸಂತ್ರಸ್ತ ಬಾಲಕಿಯರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದರು’ ಎಂದು ತಿಳಿಸಿದರು.
ವಿಚಾರಣೆ ಮುಂದೂಡಿಕೆ
ಮುರುಘಾ ಶರಣರು ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಚಿತ್ರದುರ್ಗದ ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯ ನಾಳೆಗೆ ಮುಂದೂಡಿದೆ. ನಾಳೆಯೇ ತಕರಾರು ಅರ್ಜಿ ಸಲ್ಲಿಸಿ ಎಂದು ಸರ್ಕಾರಿ ವಕೀಲರಿಗೆ ನ್ಯಾಯಾಧೀಶರು ಸೂಚನೆ ನೀಡಿದರು.
ಮತ್ತೊಂದು ಅರ್ಜಿ ದಾಖಲು
ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯರ ಪರವಾಗಿ ವಾದ ಮಂಡಿಸಲು ಖಾಸಗಿ ವಕೀಲರಿಗಾಗಿ ಚಿತ್ರದುರ್ಗದ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಯು ಅರ್ಜಿ ಸಲ್ಲಿಸಿದೆ.
ಮುರುಘಾಶ್ರೀ ವಿರುದ್ಧ ಇಂದು ಅಟ್ರಾಸಿಟಿ ಹೇಳಿಕೆ ದಾಖಲು ಸಾಧ್ಯತೆ
ಮುರುಘಾಶ್ರೀ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣಕ್ಕೆ ಇದೀಗ ಅಟ್ರಾಸಿಟಿ ಅಧಿನಿಯಮವನ್ನೂ ಅಳವಡಿಸಲಾಗಿದೆ. ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬರು ಪರಿಶಿಷ್ಟ ಜನಾಂಗಕ್ಕೆ ಸೇರಿದವರು. ಹೀಗಾಗಿ ಇಂದು ಅಟ್ರಾಸಿಟಿ ಪ್ರಕರಣದ ನಿಯಮಗಳ ಅನ್ವಯ ಸಂತ್ರಸ್ತ ಬಾಲಕಿಯು ಜಿಲ್ಲಾ 1ನೇ ಅಪರ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲಾ ಅವರ ಎದುರು ಹೇಳಿಕೆ ದಾಖಲು ಮಾಡುವ ಸಾಧ್ಯತೆಯಿದೆ. ಚಿತ್ರದುರ್ಗದ ಮುರುಘಾಮಠದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬ್ಯಾರಿಕೇಡ್ಗಳನ್ನು ಹಾಕಿ ಜನಸಂಚಾರವನ್ನು ನಿರ್ಬಂಧಿಸಲಾಗಿದೆ. 50ಕ್ಕೂ ಹೆಚ್ಚು ಪೊಲೀಸರನ್ನು ಮಠದ ಬಳಿ ಭದ್ರತೆಗೆ ನಿಯೋಜಿಸಲಾಗಿದೆ.
ಮುರುಘಾಶ್ರೀ ವಿರುದ್ಧ ಫೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಚಿತ್ರದುರ್ಗದಲ್ಲಿ ರಾಷ್ಟ್ರೀಯ ಪ್ರಬುದ್ಧ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
Published On - 1:39 pm, Thu, 1 September 22