ಮಾಜಿ ಶಾಸಕ ಎಸ್ ಕೆ ಬಸವರಾಜನ್ ವಿರುದ್ಧದ ರೇಪ್ ಕೇಸ್ ದಾಖಲು : ಹಾಸ್ಟೆಲ್ನಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಚಿತ್ರದುರ್ಗ: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರಿಂದ ಹಾಸ್ಟೆಲ್ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಹಾಸ್ಟೆಲ್ನ ಮಹಿಳಾ ವಾರ್ಡನ್, ಎಸ್.ಕೆ.ಬಸವರಾಜನ್ ವಿರುದ್ಧ ಅತ್ಯಾಚಾರಕ್ಕೆ ಯತ್ನ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಆ. 26 ರಂದು ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354ರಡಿ ಪ್ರಕರಣ ದಾಖಲಾಗಿದೆ.
ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ IPC ಸೆಕ್ಷನ್ 341, 342, 504, 506ರಡಿ ಪ್ರಕರಣ ದಾಖಲಾಗಿತ್ತು. ಈಗ ಮುರುಘಾಮಠದ ಹಾಸ್ಟೆಲ್ಗೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಗಿರೀಶ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಮುಂಜಾಗ್ರತೆ ಕ್ರಮವಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ. ಪ್ರಕರಣದಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರದಂತೆ ನ್ಯಾಯಾಧೀಶರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
ಮತ್ತೆ ಒಂದಾಗಿದ್ದ ಮುರಘಾ ಶರಣರು ಮತ್ತು ಮಾಜಿ ಶಾಸಕ ಎಸ್.ಕೆ.ಬಸವರಾಜನ್
ಒಂದೂವರೆ ದಶಕಗಳ ಕಾಲ ಹಾವು ಮುಂಗಸಿಯಂತ್ತಿದ್ದವರು ದಿಢೀರ್ ಒಂದಾಗಿದ್ದು ಸಂಚಲನ ಮೂಡಿಸಿತ್ತು. ಕೋಟೆನಾಡು ಚಿತ್ರದುರ್ಗ ನಗರದ ಮುರುಘಾಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ನಡುವೆ ಕದನ ನಡೆಯುತ್ತಿತ್ತು. ಆದರೆ ಇವರು ಮಾರ್ಚ 7 ರಂದು ಇಬ್ಬರ ಕೋಪ ತಣ್ಣಗಾಗಿ ಒಂದಾಗಿದ್ದರು.
ಮುರುಘಾಮಠದ ಆಡಳಿತಾಧಿಕಾರಿ ಆಗಿದ್ದ ಎಸ್.ಕೆ.ಬಸವರಾಜನ್, 2007ರಲ್ಲಿ ಮಠದಿಂದ ಹೊರಬಿದ್ದಿದ್ದರು. ಬಳಿಕ ಇಬ್ಬರ ನಡುವೆ ಬಹಿರಂಗ ಕದನವೇ ನಡೆದಿತ್ತು. ಆರೋಪ ಪ್ರತ್ಯಾರೋಪಗಳ ಸಮರವೇ ನಡೆದಿತ್ತು. ಇನ್ನೇನು ಇವರಿಬ್ಬರು ರಾಜಿ ಆಗುವುದು ಅಸಾಧ್ಯ ಎಂಬಂತ ಸ್ಥಿತಿ ನಿರ್ಮಾಣ ಆಗಿತ್ತು. ಈ ನಡುವೆ ಎಸ್.ಕೆ.ಬಸವರಾಜನ್ 2008ರಲ್ಲಿ ಜೆಡಿಎಸ್ನಿಂದ ಚಿತ್ರದುರ್ಗದ ಶಾಸಕರಾಗಿ ಆಯ್ಕೆ ಆಗಿದ್ದರು. 2013ರಲ್ಲಿ ಸೋಲು ಕಂಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದು 2018ರಲ್ಲಿ ಕಾಂಗ್ರೆಸ್ ಟಿಕೆಟ್ ದಕ್ಕಿರಲಿಲ್ಲ. ಆದರೆ, ದಿಢೀರ್ ಬೆಳವಣಿಗೆ ನಡೆದಿದ್ದು ಎಸ್.ಕೆ.ಬಸವರಾಜನ್ ಮಠಕ್ಕೆ ಭೇಟಿ ನೀಡಿ ಮುರುಘಾಶ್ರೀಗಳನ್ನು ಭೇಟಿ ಆಗಿದ್ದರು.
ಮುರುಘಾಶ್ರೀಗಳಿಗೆ ಮಾಲೆ ಹಾಕಿದ್ದು, ಅಭಿಮಾನಿಗಳು ಎಸ್.ಕೆ.ಬಸವರಾಜನ್ಗೆ ಮಾಲೆ ಹಾಕಿದ್ದ ಫೋಟೋಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದವು. ಸಾಕಷ್ಟು ಜನ ಈ ಫೋಟೋಗಳು ಫೇಕ್ ಅನ್ನುವ ಮಟ್ಟಕ್ಕೆ ಚರ್ಚೆ ಶುರುವಾಗಿತ್ತು. ಇದೇ ವೇಳೆ ಟಿವಿ9ಗೆ ಎಸ್.ಕೆ.ಬಸವರಾಜ್ ಮಾತನಾಡಿದ್ದು ಮತ್ತೆ ಮುರುಘಾಮಠದ ಆಡಳಿತಾಧಿಕಾರಿ ಹಾಗೂ ಎಸ್.ಜೆ.ಎಮ್ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆಂದು ಹೇಳಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಟಿವಿ9 ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಸಂಪರ್ಕಿಸಲು ಯತ್ನಿಸಿತ್ತು. ಆದರೆ, ಮುರುಘಾಶ್ರೀಗಳು ಕರೆ ಸ್ವೀಕರಿಸಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್.ಕೆ.ಬಸವರಾಜನ್ ಆಡಳಿತಾತ್ಮಕ ದೃಷ್ಠಿಯಿಂದ ಅನುಭವಿಯಾದ ನನಗೆ ಗುರುಗಳು ಮತ್ತೆ ಅವಕಾಶ ನೀಡಿದ್ದಾರೆ. ಅಂತೆಯೇ ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆತು ಈ ಮೊದಲಿನಂತೆ ಉತ್ತಮ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಮುರುಘಾಮಠಕ್ಕೆ ಮಾಜಿ ಶಾಸಕ, ಮಾಜಿ ಆಡಳಿತಾಧಿಕಾರಿ ರಿ ಎಂಟ್ರಿ ಆಗಿದ್ದು ಸದ್ಯ ಹೊಸ ಸಂಚಲನ ಮೂಡಿಸಿತ್ತು. ಸಮರಭ್ಯಾಸದಲ್ಲಿ ನಿರತರಾಗಿದ್ದ ಮುರುಘಾಶ್ರೀ ಹಾಗೂ ಎಸ್ಕೆ ಬಸವರಾಜನ್ ದಿಢೀರ್ ಕದನ ವಿರಾಮ ಘೋಷಿಸಿ ಕೈ ಕುಲುಕಿ ಶಾಕ್ ನೀಡಿದ್ದರು.
ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Wed, 31 August 22