ಮುರುಘಾ ಶ್ರೀ ವಿರುದ್ಧ ಮತ್ತೊಂದು ಆರೋಪ: ಕೋರ್ಟ್​​ ಆದೇಶ ಉಲ್ಲಂಘಿಸಿ ಮಠದ ಸೈಟ್​​ ಮಾರಾಟ?

ಮೊದಲ ಪೋಕ್ಸೋ ಕೇಸ್‌ನಲ್ಲಿ ನಿರ್ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಮುರುಘಾ ಶ್ರೀ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, 2 ಕೋಟಿ ಮೌಲ್ಯದ ಮಠದ ನಾಲ್ಕು ನಿವೇಶನಗಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಮಠದ ಆಡಳಿತ ಸಮಿತಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ಮುರುಘಾ ಶ್ರೀ ವಿರುದ್ಧ ಮತ್ತೊಂದು ಆರೋಪ: ಕೋರ್ಟ್​​ ಆದೇಶ ಉಲ್ಲಂಘಿಸಿ ಮಠದ ಸೈಟ್​​ ಮಾರಾಟ?
ಮುರುಘಾ ಶ್ರೀ
Edited By:

Updated on: Dec 28, 2025 | 11:12 AM

ಚಿತ್ರದುರ್ಗ, ಡಿಸೆಂಬರ್​​ 28: ಮೊದಲ ಪೋಕ್ಸೋ ಪ್ರಕರಣ ಸಂಬಂಧ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​​ ಬಿಗ್​​ ರಿಲೀಫ್ ನೀಡಿರುವ ನಡುವೆ ಅವರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮಠದ ಆಡಳಿತದಲ್ಲಿ ಮುರುಘಾ ಶರಣರ ಹಸ್ತಕ್ಷೇಪಕ್ಕೆ ನ್ಯಾಯಾಲಯದ ನಿರ್ಬಂಧದ ನಡುವೆ ​ಮಠದ ಆಸ್ತಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

‘ನಾಲ್ಕು ನಿವೇಶನ ಮಾರಾಟ’

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿರುವ 2 ಕೋಟಿ ರೂ. ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬುವರಿಗೆ ಸ್ಪೇಷಲ್ ಜಿಪಿಎ ನೀಡಿ ಮಾರಾಟ ಮಾಡಲಾಗಿದೆ. ಈ ಬಗ್ಗೆ ಪ್ರಕಾಶ್ ಎಂಬುವರು ಮಠದ ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್​​ಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಶಿವಯೋಗಿ ಅವರು, ಕಾನೂನು ತಜ್ಞರಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:  ಮುರುಘಾ ಶ್ರೀ ಪೋಕ್ಸೋ ಕೇಸ್ ಖುಲಾಸೆ; ಶಿವಮೂರ್ತಿ ಶರಣರು ನಿರಾಳ

2022ರ ಆಗಸ್ಟ್​​ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪೋಕ್ಸೋ ಕೇಸ್​ ಸಂಬಂಧ ಮುರುಘಾ ಶ್ರೀ ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​​ ಹೇಳಿತ್ತು. ಮಠದ ಹಾಸ್ಟೆಲ್​​ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ದೂರು ನೀಡಿದ್ದರು. ಆಗಸ್ಟ್​ 27ರಂದು ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. 2022ರ ಸೆಪ್ಟಂಬರ್​ 1ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿಯನ್ನ ಪೊಲೀಸರು ಬಂಧಿಸಿದ್ದರು. ಚಾರ್ಜ್​​ಶೀಟ್​​ ವೇಳೆ ಎ3 ಬಸವಾದಿತ್ಯ, ಎ5 ವಕೀಲ‌ ಗಂಗಾಧರಯ್ಯ ಅವರನ್ನು ಕೈಬಿಡಲಾಗಿತ್ತು. ಪ್ರಕರದ ವಿಚಾರಣೆ ನಡೆಸಿ ನ್ಯಾಯಾಲಯ ಮುರುಘಾ ಶರಣರ ಜೊತೆ 2ನೇ ಆರೋಪಿ ರಶ್ಮಿ, 4ನೇ ಆರೋಪಿ ಪರಮಶಿವಯ್ಯ ಕೂಡ ನಿರ್ದೋಷಿ ಎಂದು ಇತ್ತೀಚೆಗೆ ತೀರ್ಪು ಪ್ರಕಟಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:06 am, Sun, 28 December 25