ಪೋಕ್ಸೋ ಕಾಯಿದೆ: A1 ಆರೋಪಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪೊಲೀಸ್ ಕಸ್ಟಡಿಗೆ
Chitradurga police: ಪೋಕ್ಸೋ ಪ್ರಕರಣದಲ್ಲಿ ಮೊದಲ ಆರೋಪಿ ಮುರುಘಾ ಮಠದ ಸ್ವಾಮೀಜಿ ಡಾ. ಶಿವಮೂರ್ತಿ ಮುರುಘಾ ಶರಣರನ್ನು 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮೊದಲ ಆರೋಪಿ (POCSO-Accused) ಮುರುಘಾ ಮಠದ ಸ್ವಾಮೀಜಿ ಡಾ. ಶಿವಮೂರ್ತಿ ಮುರುಘಾ ಶರಣರನ್ನು (Shivamurthy Murugha Sharanaru) 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಈ ಆದೇಶ ನೀಡಲಾಗಿದೆ. ಪೋಕ್ಸೋ ಕೇಸ್ನಲ್ಲಿ ಸ್ವಾಮೀಜಿಯನ್ನು ನಿನ್ನೆ ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು.
ಮುರುಘಾ ಶ್ರೀಯವರನ್ನು ಸೆಪ್ಟೆಂಬರ್ 5ರಂದು ಮತ್ತೆ ಕೋರ್ಟ್ ಮುಂದೆ ಹಾಜರು ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಅದರಂತೆ ಅಂದು ಬೆಳಗ್ಗೆ 11 ಗಂಟೆಗೆ ಪೊಲೀಸರು ಶ್ರೀಗಳನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಇತ್ತ ನ್ಯಾಯಾಲಯದಿಂದ ಆದೇಶ ಹೊರಬೀಳುತ್ತಿದ್ದಂತೆ ಮುರುಘಾ ಶ್ರೀಗಳು ನ್ಯಾಯಾಧೀಶರ ಮುಂದೆಯೇ ಕಣ್ಣೀರಿಟ್ಟು ಸ್ಥಳದಲ್ಲೇ ಕುಸಿದುಬಿದ್ದಾರೆ.
ಶ್ರೀಗಳನ್ನು ಮತ್ತೆ ಆಸ್ಪತ್ರೆಗೆ ಕರೆತಂದ ಪೊಲೀಸರು
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು ಕೋರ್ಟ್ ಸೂಚನೆಯಂತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದ ನಂತರ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋರ್ಟ್ನಿಂದ ಪೊಲೀಸ್ ವಾಹನದಲ್ಲೇ ಶ್ರೀಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಯ ಒಳಗೆ ಶ್ರೀಗಳು ನಡೆದುಕೊಂಡೇ ಹೋಗಿದ್ದಾರೆ. ಖುದ್ದು ಎಸ್ಪಿ ಕೆ.ಪರಶುರಾಮ್ ಅವರು ಸ್ವಾಮಿಜಿಗೆ ಭದ್ರತೆ ನೀಡಿದ್ದು, ಜಿಲ್ಲಾಸ್ಪತ್ರೆಗೂ ತೆರಳಿದ್ದಾರೆ.
ಏನಿದು ಪ್ರಕರಣ?
ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಆಗಸ್ಟ್ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು. ಅದರಂತೆ ಚಿತ್ರದುರ್ಗ ಪೊಲೀಸರು ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇನ್ನೊಂದೆಡೆ ಶ್ರೀಗಳ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದರು. ಅದರಂತೆ ಗುರುವಾರ ರಾತ್ರಿ ಮುರುಘಾ ಮಠದಲ್ಲಿಯೇ ಮುರುಘಾ ಶ್ರೀ ಅವರನ್ನು ಬಂಧಿಸಿದ್ದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Fri, 2 September 22