ಪಶು ಮತ್ತು ಕೃಷಿ ಸಂಪತ್ತೇ ಇವರ ಆರಾಧ್ಯ ದೈವ: ಕೋಟೆನಾಡು ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಿತು ಆ ವಿಶಿಷ್ಟ ಆಚರಣೆ
Myasa Beda tribe: ಮ್ಯಾಸ ಬೇಡರ ಸಾಂಸ್ಕೃತಿಕ ನಾಯಕ ದಡ್ಡಿ ಸೂರನಾಯಕನ ಜಾತ್ರೆಯ ವಿಶೇಷವಿದು. ಸಂಪ್ರದಾಯದಂತೆ ಈ ವರ್ಷವೂ ನೂರಾರು ಮಹಿಳೆಯರು ಗ್ರಾಮದಿಂದ 3 ಕಿ.ಮೀ. ದೂರದ ಮಂಗಳ ಬಾವಿ ಬಳಿಗೆ ತೆರಳಿ ಕಾಶಿ ತೀರ್ಥವನ್ನು ಹೊತ್ತು ತಂದರು.
ಬುಡಕಟ್ಟು ಸಮುದಾಯಗಳ ತವರೂರು ಕೋಟೆನಾಡು ಚಿತ್ರದುರ್ಗದಲ್ಲಿ ಅನೇಕ ವಿಶಿಷ್ಟ ಆಚರಣೆಗಳು ಜಾರಿಯಲ್ಲಿವೆ. ನಾಯಕ ಸಮುದಾಯದ ಸಾಂಸ್ಕೃತಿಕ ನಾಯಕ ದಡ್ಡಿ ಸೂರನಾಯಕನ ವಿಶಿಷ್ಟ ಜಾತ್ರೆ ವೇಳೆ ನಡೆಯುವ ಆಚರಣೆ ನಾಡಿನ ಗಮನ ಸೆಳೆಯುತ್ತದೆ. ಹಾಗಾದ್ರೆ, ಆ ಜಾತ್ರೆಯ ವಿಶೇಷ ಏನು ಅಂತೀರಾ, ಈ ಸ್ಟೋರಿ ನೋಡಿ. ಪವಿತ್ರ ಜಲ ತುಂಬಿದ ಮಣ್ಣಿನ ಮಡಿಕೆ ಹೊತ್ತು ಬರಿಗಾಲಲ್ಲಿ ಹೊರಟಿರುವ ನೂರಾರು ಮಹಿಳೆಯರು. ಆರಾಧ್ಯ ದೇವರ ಉತ್ಸವಕ್ಕೆ (annual fair) ಸಾಕ್ಷಿಯಾಗಿರುವ ಬುಡಕಟ್ಟು ಸಮುದಾಯದ ಭಕ್ತ ಗಣ. ಸಾಂಪ್ರದಾಯಿಕ ದೇವರೆತ್ತುಗಳಿಗೆ ನಮಿಸಿ ನವಿಲು ಗರಿ ಹಿಡಿದು ಹೆಜ್ಜೆ ಹಾಕುತ್ತಿರುವ ಮ್ಯಾಸ ಬೇಡರು (Myasa Beda tribe). ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಹಿರೇಹಳ್ಳಿ (Hirehalli) ಗ್ರಾಮದಲ್ಲಿ.
ಹೌದು, ಮ್ಯಾಸ ಬೇಡರ ಸಾಂಸ್ಕೃತಿಕ ನಾಯಕ ದಡ್ಡಿ ಸೂರನಾಯಕನ ಜಾತ್ರೆಯ ವಿಶೇಷವಿದು. ಕಾಲಾನುಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಈ ವರ್ಷವೂ ನೂರಾರು ಮಹಿಳೆಯರು ಗ್ರಾಮದಿಂದ ಸುಮಾರು 3 ಕಿ.ಮೀ. ದೂರದ ಮಂಗಳ ಬಾವಿ ಅಥವಾ ಕಾಶಿ ಕಾಲುವೆ ಬಳಿಗೆ ತೆರಳಿ ಕಾಶಿ ತೀರ್ಥವನ್ನು (ಪವಿತ್ರ ಜಲ) ಹೊತ್ತು ತಂದರು. ಮಡಿಯಿಂದಿದ್ದ ಮಹಿಳೆಯರು ಉಪವಾಸ ವೃತ್ತದಲ್ಲಿದ್ದು ಮಡಿಕೆಯಲ್ಲಿ ಶುದ್ಧ ಜಲವನ್ನು ಹೊತ್ತು ದೇಗುಲಕ್ಕೆ ತರುತ್ತಾರೆ.
ಭಕ್ತರು ಬೆಳೆದ ಧವಸ ಧಾನ್ಯವನ್ನು ದೇವರಿಗೆ ಸಮರ್ಪಿಸುತ್ತಾರೆ. ಅಂತೆಯೇ ಮಹಿಳೆಯರು ತಂದಿದ್ದ ಮೀಸಲು ಜಲದಲ್ಲೇ ಗುಗ್ಗರಿ ಬೇಯಿಸಿ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಮೊದಲ ಹಬ್ಬವಾದ್ದರಿಂದ ಸುಗ್ಗಿ ಹಬ್ಬ, ಗುಗ್ಗರಿ ಹಬ್ಬ ಎಂದೂ ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದವರು ನಿವೃತ್ತ ಪ್ರಾಂಶುಪಾಲರಾದ ಡಾ. ಅನ್ನಪೂರ್ಣ.
ಸಾಂಸ್ಕೃತಿಕ ನಾಯಕರ ದಡ್ಡಿ ಸೂರನಾಯಕ ಸಂರಕ್ಷಿಸಿರುವ ಪಶು ಸಂಪತ್ತು ಮತ್ತು ಕೃಷಿ ಸಂಪತ್ತೇ ಮ್ಯಾಸ ಬೇಡ ಸಮುದಾಯದ ಆರಾಧ್ಯ ದೈವವಾಗಿದೆ. ಹೀಗಾಗಿ, ಸುಗ್ಗಿ ಸಂದರ್ಭದಲ್ಲಿ ರೈತಾಪಿ ವರ್ಗ ಬೆಳೆದ ಧವಸ ಧಾನ್ಯವನ್ನು ದೇವರಿಗೆ ಸಮರ್ಪಿಸಿ ಸಂಭ್ರಮಿಸುವುದು. ದಡ್ಡಿ ಸೂರನಾಯಕ ಸಂರಕ್ಷಿಸಿದ ಗುಡಿಕೋಟೆಯ ಸಾಂಪ್ರದಾಯಿಕ ದೇವರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಬಳಿಕ ಸಾಂಪ್ರದಾಯಿಕ ದೇವರ ಎತ್ತುಗಳ ಓಡಿಸುವ ವಿಶೇಷ ಆಚರಣೆ ನಡೆಯುತ್ತದೆ. ರೋಗ ರುಜಿನಗಳು ದೂರಾಗಿ ನಾಡು ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸುವ ವಿಶೇಷ ಜಾತ್ರೆ ಇದಾಗಿದೆ. ರಾಜ್ಯದ ಜನರು ಮಾತ್ರವಲ್ಲದೆ ಆಂಧ್ರದ ಭಕ್ತರು ಸಹ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸರ್ವ ಸಮುದಾಯದ ಜನರು ಸಹ ವಿಶಿಷ್ಟ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಹಿರೇಹಳ್ಳಿಯಲ್ಲಿ ಮ್ಯಾಸ ಬೇಡ ಸಮುದಾಯದ ಸಾಂಸ್ಕೃತಿಕ ನಾಯಕ ದಡ್ಡಿ ಸೂರನಾಯಕನ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಬರದ ನಾಡಿನ ಜನರ ಕೃಷಿ ಮತ್ತು ಪಶುಪಾಲನೆ ಸಂಸ್ಕೃತಿಯ ಸಿರಿತನವನ್ನು ಅನಾವರಣಗೊಳಿಸಿದೆ.
ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ