ಚಿತ್ರದುರ್ಗ: ಜಿಲ್ಲೆಯಲ್ಲಿ ಅನೇಕ ಸ್ಮಾರಕಗಳಿವೆ, ಗುಡಿ ಗೋಪುರಗಳಿವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇತಿಹಾಸ ಸಾರುವ ಸ್ಮಾರಕಗಳು ಅವನತಿಯ ಅಂಚಿನಲ್ಲಿವೆ. ಅದರಂತೆ ಬುಡಕಟ್ಟು ಸಮುದಾಯದ ಆರಾಧ್ಯದೈವ ಜಗಳೂರಜ್ಜ ಅವರ ಜನ್ಮಸ್ಥಳದ ದೇಗುಲಕ್ಕೆ ಕೂಡ ಧಕ್ಕೆ ಎದುರಾಗಿದೆ, ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶ್ರಕ್ಕೆ ಕಾರಣವಾಗಿದೆ.
ಇದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ. ವಾಲ್ಮೀಕಿ ನಾಯಕ ಸಮುದಾಯದ ಸಾಂಪ್ರದಾಯಿಕ ಕಟ್ಟೆಮನೆ ಇರುವ ದೊರೆಗಳ ಸಂಸ್ಥಾನವೆಂದೇ ಖ್ಯಾತಿ ಪಡೆದ ಊರು. ಅಂತೆಯೇ ವಾಲ್ಮೀಕಿ ನಾಯಕ ಸಮುದಾಯದ ಆರಾಧ್ಯ ದೈವ ಜಗಳೂರಜ್ಜ ಅವರ ಜನ್ಮ ಸ್ಥಳವಾದ ಶುಕ್ಲಗಿರಿ ಪರ್ವತವೂ ಇದೇ ಗ್ರಾಮದ ಬಳಿಯಲ್ಲಿದೆ.
ಜಗಳೂರಜ್ಜ ಅವರ ಜನ್ಮ ಸ್ಥಳದ ತುದಿಯಲ್ಲಿ ಐತಿಹಾಸಿಕ ದೇಗುಲವಿದೆ. ಆದರೆ ಇತ್ತೀಚೆಗೆ ಪಿಎನ್ಸಿ ಕಂಪನಿ ಇದೇ ಪರ್ವತದಲ್ಲಿ ಗಣಿಗಾರಿಕೆ ನಡೆಸಿ ಪರ್ವತದ ಮಣ್ಣು ಕೊರೆದು ಹೈವೇಗಳಿಗೆ ಸಾಗಿಸುತ್ತಿದೆ. ಪರ್ವತದ ಬುಡದಲ್ಲಿ ಸುಮಾರು 10 ಅಡಿ ಆಳಕ್ಕೆ ಕೊರೆದು ಮಣ್ಣು ಸಾಗಿಸಲಾಗುತ್ತಿದೆ. ಪರಿಣಾಮ ಮುಂದೊಂದು ದಿನ ಮಡಿಕೇರಿಯಲ್ಲಿ ಗಿರಿಧಾಮಗಳು ಕುಸಿದಂತೆ ಶುಕ್ಲಗಿರಿ ಪರ್ವತ ಕುಸಿದರೆ ಗತಿಯೇನೆಂಬ ಭೀತಿ ಮೂಡಿದೆ. ಮತ್ತೊಂದು ಕಡೆ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ಕಾಮಗಾರಿ, ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಅವೈಜ್ಞಾನಿಕ ಕಾಮಗಾರಿ, ಜೆಸಿಬಿಗಳ ಆರ್ಭಟದಿಂದಾಗಿ ಐತಿಹಾಸಿಕ ಪರ್ವತ ಮತ್ತು ದೇಗುಲಕ್ಕೆ ಧಕ್ಕೆ ಆಗುತ್ತಿದೆ.
ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾಡಳಿತದವರೆಗೆ ದೂರು ನೀಡಲಾಗಿದೆ. ಮನವಿ ಸಲ್ಲಿಸಲಾಗಿದೆ. ಆದರೆ ಗ್ರಾಮಸ್ಥರು ಪ್ರಶ್ನಿಸಿದಾಗ ಮಾತ್ರ ಕೆಲ ದಿನ ಕೆಲಸ ನಿಲ್ಲಿಸಿ ಮತ್ತೆ ಆರಂಭಿಸುವ ಮೂಲಕ ಐತಿಹಾಸಿಕ ಪರ್ವತ ಮತ್ತು ದೇಗುಲಕ್ಕೆ ಧಕ್ಕೆ ಮಾಡಲಾಗುತ್ತಿದೆ ಎಂದು ಸ್ಥಳೀಯರಾದ ನಾಗರಾಜ ಆರೋಪಿಸಿದ್ದಾರೆ.
ಇನ್ನು ಪ್ರತಿವರ್ಷ ಶಿವರಾತ್ರಿ ಸಮಯದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಜನರು ಶುಕ್ಲಗಿರಿ ಪರ್ವತದ ಜಗಳೂರಜ್ಜ ದೇಗುಲದಲ್ಲಿ ವಿಶೇಷ ಜಾತ್ರೆ, ಉತ್ಸವ ಆಚರಿಸುತ್ತಾರೆ. ಮೂಲೆ ಮೂಲೆಗಳಿಂದ ಬುಡಕಟ್ಟು ಸಮುದಾಯದ ಜನರು ದೇಗುಲಕ್ಕೆ ಆಗಮಿಸುತ್ತಾರೆ. ಸೋಮವಾರಕ್ಕೊಮ್ಮೆ ಅನೇಕ ಭಕ್ತಾದಿಗಳು ಬಂದು ದರ್ಶನ ಪಡೆಯುತ್ತಾರೆ. ಆದರೆ, ಜಿಲ್ಲಾಡಳಿತ ಮಾತ್ರ ಈ ಬಗ್ಗೆ ನಿರ್ಲಕ್ಷ ತೋರುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳಿಂದ ಐತಿಹಾಸಿಕ ಪರ್ವತಕ್ಕೆ ಧಕ್ಕೆ ಆಗುತ್ತಿದೆ. ನಾಯಕ ಸಮುದಾಯದ ಭಾವನೆಗಳಿಗೆ ಘಾಸಿ ಉಂಟಾಗಿದೆ. ಇದೇ ರೀತಿ ಮುಂದುವರೆದರೆ ಅಧಿಕಾರಿಗಳು ಮತ್ತು ಸರ್ಕಾರ ಜನರ ಆಕ್ರೋಶಕ್ಕೆ ಗುರಿ ಆಗಬೇಕಾಗುತ್ತದೆ ಎಂದು ಗ್ರಾಮದ ಮುಖಂಡ ಚಿನ್ನಯ್ಯ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಬುಡಕಟ್ಟು ಸಮುದಾಯದ ಆರಾಧ್ಯ ದೈವ ಜಗಳೂರುಜ್ಜ ಅವರ ಜನ್ಮಸ್ಥಳವಾದ ಶುಕ್ಲಗಿರಿ ಪರ್ವತ ಮತ್ತು ದೇಗುಲಕ್ಕೆ ಧಕ್ಕೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳೀಯರ ಜನರ ಆಕ್ರೋಶ ಭುಗಿಲೇಳುವ ಹಂತಕ್ಕೆ ಬಂದು ತಲುಪಿದೆ. ಹೀಗಾಗಿ, ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಶುಕ್ಲಗಿರಿ ಪರ್ವತಕ್ಕೆ ಧಕ್ಕೆ ಆಗದ ನಿಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ವರದಿ: ಬಸವರಾಜ ಮುದನೂರ್
ಇದನ್ನೂ ಓದಿ:
ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ
ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?