ಚಿತ್ರದುರ್ಗ: ಕೋಟೆನಾಡನು ಆಳಿದ ಪಾಳೇಗಾರರ ಬಗ್ಗೆ ಇಡೀ ನಾಡಿಗೇ ಅಪಾರ ಗೌರವ ಅಭಿಮಾನವಿದೆ. ಆದರೆ, ರಾಜ ಓಬಣ್ಣ ನಾಯಕರ ಸಮಾಧಿ ಸ್ಮಾರಕದ ಗುರುತು ಉಳಿಯದಂತೆ ನಾಶ ಪಡಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು, ಇದು ಸಹಜವಾಗಿಯೇ ದುರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರದುರ್ಗ ತಾಲೂಕಿನ ಹಳಿಯೂರು ಗ್ರಾಮದ ಬಳಿ. 16ನೇ ಶತಮಾನದಲ್ಲಿ ಚಿನ್ಮೂಲಾದ್ರಿ ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ ರಾಜ ಓಬಣ್ಣ ನಾಯಕ, ನೀರಿನ ಜಾಡು ಹಿಡಿದು ಹಲವು ರೈತಪರ, ಜನಪರ ಕೆಲಸ ಮಾಡಿದ್ದರು. ಅಂತೆಯೇ ಕಾಲವಾದ ಬಳಿಕ ಹಳಿಯೂರು ಬಳಿಯ 105/2 ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದು, ಸಮಾಧಿ ಸ್ಥಳದಲ್ಲಿ ಅಪರೂಪದ ಶಿಲ್ಪಕಲೆಯಿಂದ ಸ್ಮಾರಕ ನಿರ್ಮಾಣ ಆಗಿತ್ತು.
ಖಾಸಗಿ ಜಮೀನು ಮತ್ತು 1 ಗುಂಟೆ ಖರಾಬು ಜಮೀನು ಇರುವ ಸ್ಥಳದಲ್ಲಿ ಸಮಾಧಿ ನಿರ್ಮಾಣವಾಗಿತ್ತು. ಆದರೆ ಇತ್ತೀಚೆಗೆ ಖಾಸಗಿ ಜಮೀನನ್ನು ಮಾಜಿ ನಗರಸಭೆ ಸದಸ್ಯೆ ರುದ್ರಾಣಿ ಗಂಗಾಧರ್ ಖರೀದಿಸಿದ್ದರು. ನೂರಾರು ವರ್ಷಗಳ ಇತಿಹಾಸವಿರುವ ರಾಜಾ ಓಬಣ್ಣ ನಾಯಕರ ಸಮಾಧಿ ಸ್ಮಾರಕ ಎಂಬುವುದು ಗೊತ್ತಿದ್ದರೂ ಸಂಪೂರ್ಣ ನಾಶಗೊಳಿಸಿದ್ದು, ಶಿಲ್ಪ ಕಲೆಯುಳ್ಳ ಕಲ್ಲುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ.
ರಾಜರ ಸಮಾಧಿ ಆಗಿರುವ ಕಾರಣ ನಿಧಿ ಸಿಗುವ ಆಸೆಯಿಂದಲೇ ಈ ಕೃತ್ಯವೆಸಗಿದ್ದಾರೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜರ ಸಮಾಧಿಯನ್ನು ಪುನರ್ ನಿರ್ಮಾಣ ಮಾಡುವವರೆಗೆ ಹೋರಾಟ ನಡೆಸುತ್ತೇವೆ ಎಂದು ಚಿತ್ರನಾಯಕ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಚಿತ್ರನಾಯಕ ವೇದಿಕೆ ಅಧ್ಯಕ್ಷ ಪ್ರಶಾಂತ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅಂತೆಯೇ ಕೆಲ ತಿಂಗಳುಗಳ ಹಿಂದೆಯೇ ರಾಜ ಓಬಣ್ಣ ನಾಯಕರ ಸಮಾಧಿ ಸಂರಕ್ಷಣೆ ಮಾಡುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂಥ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಎಸ್ಪಿ. ಜಿ.ರಾಧಿಕಾ ಅವರನ್ನು ಕೇಳಿದಾಗ ರುದ್ರಾಣಿ ಗಂಗಾಧರ್ ಅವರ ವಿರುದ್ಧ ಐಪಿಸಿ ಕಲಂ 295ಎ, 427 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಹಳಿಯೂರು ಗ್ರಾಮದ ಬಳಿಯ, ರಾಜ ಓಬಣ್ಣ ನಾಯಕರ ಸಮಾಧಿ ನಾಮಾವಶೇಷ ಆದಂತಾಗಿದೆ. ದುರ್ಗದ ಜನರ ಹೆಮ್ಮೆಯ ರಾಜನ ಸಮಾಧಿ ಸ್ಮಾರಕ ಅಳಿದು ಹೋಗಿದ್ದು, ಜನರನ್ನು ಆಕ್ರೋಶಕ್ಕಿಡುಮಾಡಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಶೀಘ್ರ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.
ವರದಿ: ಬಸವರಾಜ ಮುದನೂರ್
ಇದನ್ನೂ ಓದಿ:
ಈ ಸ್ಮಾರಕ ಇಡೀ ವಿಶ್ವಕ್ಕೆ ಸ್ಫೂರ್ತಿ; ಜಲಿಯನ್ ವಾಲಾಬಾಗ್ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು
Explained: ನವೀಕರಣಗೊಂಡ ಜಲಿಯನ್ ವಾಲಾಬಾಗ್ನಲ್ಲಿ ಏನೇನಿದೆ? ಸ್ಮಾರಕದ ಹಿನ್ನೆಲೆ ಏನು? ಇಲ್ಲಿದೆ ವಿವರ