Explained: ನವೀಕರಣಗೊಂಡ ಜಲಿಯನ್ ವಾಲಾಬಾಗ್​ನಲ್ಲಿ ಏನೇನಿದೆ? ಸ್ಮಾರಕದ ಹಿನ್ನೆಲೆ ಏನು? ಇಲ್ಲಿದೆ ವಿವರ

Jallianwala Bagh: ಜಲಿಯನ್ ವಾಲಾಬಾಗ್​ನಲ್ಲಿ ನೋಡಲು ಏನೇನಿದೆ? ಮೂಲ ಅಥವಾ ಮೊದಲಿನ ಸ್ಮಾರಕಕ್ಕೆ ಹಾಗೂ ಈಗಿನ ಸ್ಮಾರಕಕ್ಕೆ ಏನು ಬದಲಾವಣೆ ಮಾಡಲಾಗಿದೆ? ಏನು ಹೆಚ್ಚು ಸೇರ್ಪಡೆಯಾಗಿದೆ? ಇಲ್ಲಿದೆ ಮಾಹಿತಿ.

Explained: ನವೀಕರಣಗೊಂಡ ಜಲಿಯನ್ ವಾಲಾಬಾಗ್​ನಲ್ಲಿ ಏನೇನಿದೆ? ಸ್ಮಾರಕದ ಹಿನ್ನೆಲೆ ಏನು? ಇಲ್ಲಿದೆ ವಿವರ
ಜಲಿಯನ್ ವಾಲಾಬಾಗ್
Follow us
TV9 Web
| Updated By: ganapathi bhat

Updated on: Aug 28, 2021 | 10:02 PM

ನವೀಕೃತಗೊಂಡ ಜಲಿಯನ್​ ವಾಲಾಬಾಗ್​ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ, ಶನಿವಾರ (ಆಗಸ್ಟ್ 28) ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ. ಹತ್ಯಾಕಾಂಡದಲ್ಲಿ ಬಲಿಯಾದ ಮುಗ್ಧ ಬಾಲಕ, ಬಾಲಕಿ, ಸಹೋದರ, ಸಹೋದರಿಯರ ಕನಸುಗಳು ಜಲಿಯನ್ ವಾಲಾಬಾಗ್ ಗೋಡೆ ಮೇಲಿನ ಬುಲೆಟ್ ಗುರುತುಗಳಲ್ಲಿ ಈಗಲೂ ಕಾಣುತ್ತಿದೆ. ನಾವು ಅದನ್ನು ಇಂದು ಸ್ಮರಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಜಲಿಯನ್ ವಾಲಾಬಾಗ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಸ್ಮರಿಸಲು ಇದು ಉತ್ತಮ ಅವಕಾಶವಾಗಿದೆ. ಜಲಿಯನ್ ವಾಲಾಬಾಗ್​ನಲ್ಲಿ ನೋಡಲು ಏನೇನಿದೆ? ಮೂಲ ಅಥವಾ ಮೊದಲಿನ ಸ್ಮಾರಕಕ್ಕೆ ಹಾಗೂ ಈಗಿನ ಸ್ಮಾರಕಕ್ಕೆ ಏನು ಬದಲಾವಣೆ ಮಾಡಲಾಗಿದೆ? ಏನು ಹೆಚ್ಚು ಸೇರ್ಪಡೆಯಾಗಿದೆ? ಇಲ್ಲಿದೆ ಮಾಹಿತಿ.

ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಮೊದಲ ಬಾರಿಗೆ ಏಪ್ರಿಲ್ 13, 1961 ರಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಏಪ್ರಿಲ್ 19, 1919 ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಬಲಿಯಾದವರ ಸ್ಮರಣೆಯಾಗಿ ಈ ಸ್ಮಾರಕವನ್ನು ದೇಶಕ್ಕೆ ಅರ್ಪಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಸೈಫುದೀನ್ ಕಿಚ್ಲು ಮತ್ತು ಸತ್ಯ ಪಾಲ್ ಅವರ ಬಂಧನವನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯ ವೇಳೆ ಈ ಹತ್ಯಾಕಾಂಡ ನಡೆದಿತ್ತು.

ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಸೇರುವಿಕೆಯನ್ನು ಗಮನಿಸಿದ ಬ್ರಿಟೀಷ್ ಅಧಿಕಾರಿ ಕರ್ನಲ್ ರಿಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈರ್ ಎಂಬಾತ ಜನರ ಮೇಲೆ ಗುಂಡು ಹಾರಿಸುವಂತೆ ಆದೇಶ ನೀಡಿದ. ಆ ವೇಳೆ, ಅಲ್ಲಿ ನೆರೆದಿದ್ದ ನೂರಾರು ಮಂದಿ ದೇಶಪ್ರೇಮಿಗಳು ಅನ್ಯಾಯವಾಗಿ ಜೀವ ತೆತ್ತರು. ಇಂತಹ ಹಿನ್ನೆಲೆಯುಳ್ಳ ಜಲಿಯಾನ್ ವಾಲಾಬಾಗ್ ಸ್ಮಾರಕವನ್ನು ಇದೀಗ ಪುನರ್ ನಿರ್ಮಾಣ ಮಾಡಲಾಗಿದೆ.

2019 ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ನೂರು ವರ್ಷ ಸಂದ ನೆನಪಿಗೆ ಸುಮಾರು 20 ಕೋಟಿ ಹಣವನ್ನು ಬಿಡುಗಡೆ ಮಾಡಲಾಯಿತು. ಆ ಮೂಲಕ, ಜಲಿಯಾನ ವಾಲಾಬಾಗ್ ಪುನರ್​ನಿರ್ಮಾಣ ಹಾಗೂ ಸ್ಮಾರಕವನ್ನು ಉಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಕಟ್ಟಡ ವ್ಯವಸ್ಥೆಗಳು, ಶೌಚಾಲಯ, ಟಿಕೆಟ್ ಕೌಂಟರ್. ಕುಡಿಯುವ ನೀರು ಇತ್ಯಾದಿ ಸೌಕರ್ಯಗಳನ್ನು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಯಿತು. ಹಾಗಾಗಿ, 2019 ಫೆಬ್ರವರಿಯಿಂದ ಸ್ಮಾರಕವನ್ನು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು.

ಇದೀಗ, ಜಲಿಯನ್ ವಾಲಾಬಾಗ್ ಸ್ಮಾರಕದ ಆಗಮನ ಮತ್ತು ನಿರ್ಗಮನ ದ್ವಾರಗಳನ್ನು ಬದಲಿ ಸ್ಥಳದಲ್ಲಿ ನಿರ್ಮಿಸಲಾಗಿದೆ. ಸ್ಮಾರಕದ ಮುಖ್ಯ ಭಾಗದಲ್ಲಿ ತಾವರೆ ಕೊಳವನ್ನು ನಿರ್ಮಿಸಲಾಗಿದೆ. ಬ್ರಿಟೀಷರ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ನೆರೆದ ಜನರು ಬಾವಿಗೆ ಹಾರಿದ್ದರು. ಆ ಹುತಾತ್ಮರ ಬಾವಿಯನ್ನು ಗ್ಲಾಸ್ ಶೀಲ್ಡ್ ಮೂಲಕ ಸಂರಕ್ಷಿಸಲಾಗಿದೆ.

Jallianwala Bagh Art

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನೆನಪು

ಜಲಿಯನ್ ವಾಲಾಬಾಗ್​ನಲ್ಲಿ ಹೊಸತೇನಿದೆ? 28 ನಿಮಿಷಗಳ ಸೌಂಡ್ ಲೈಟ್ ಶೋ ಮೂಲಕ ಏಪ್ರಿಲ್ 13, 1919 ರಂದು ನಡೆದ ಹತ್ಯಾಕಾಂಡವನ್ನು ಜನರಿಗೆ ಉಚಿತವಾಗಿ ತೋರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಪ್ರದರ್ಶನ ಪ್ರತಿ ದಿನವೂ ಸಂಜೆಯ ವೇಳೆ ಇರುತ್ತದೆ. ಪ್ರವಾಸಿಗರು ಕುಳಿತು ಹುತಾತ್ಮರಿಗೆ ಗೌರವ ನಮನ ಸಲ್ಲಿಸಲು ಮೈದಾನವೊಂದನ್ನು ನಿರ್ಮಿಸಲಾಗಿದೆ.

ಹುತಾತ್ಮರ ಹಲವು ಪ್ರತಿಮೆಗಳನ್ನು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ನಿರ್ಮಿಸಲಾಗಿದೆ. ಹತ್ಯಾಕಾಂಡದ ದಿನ ಉದ್ಯಾನಕ್ಕೆ ಭೇಟಿ ನೀಡಿ ಹಿಂದಿರುಗಲಾಗದೇ ಅಲ್ಲೇ ಜೀವತೆತ್ತವರ ನೆನಪಿನಲ್ಲಿ ಈ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.

ನಾಲ್ಕು ಹೊಸ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಅಂದಿನ ಅವಧಿಯಲ್ಲಿ ಪಂಜಾಬ್​ನಲ್ಲಿ ನಡೆದ ಐತಿಹಾಸಿಕ ಘಟನೆಗಳನ್ನು ತೋರಿಸುವ, ಸ್ವಾತಂತ್ರ್ಯ ಚಳುವಳಿಯ ಇತಿಹಾಸವನ್ನು ಕಾಣಿಸುವ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಲಾಗಿದೆ. ಗುರುನಾನಕ್ ದೇವ್, ಸಿಖ್ ಹೋರಾಟಗಾರ ಬಂದಾ ಸಿಂಗ್ ಬಹದ್ದೂರ್ ಮತ್ತು ಮಹಾರಾಜ ರಂಜಿತ್ ಸಿಂಗ್ ಪ್ರತಿಮೆಗಳು ಕೂಡ ಅಲ್ಲಿದೆ.

ರಾಷ್ಟ್ರೀಯತೆಯ ರಾಜಕಾರಣ? ಪಂಜಾಬ್​ನಲ್ಲಿ ಚುನಾವಣೆಗೆ ಕೆಲವು ತಿಂಗಳುಗಳಷ್ಟೇ ಬಾಕಿ ಇದೆ. ಈ ನಡುವೆ ರಾಷ್ಟ್ರೀಯತೆಯ ರಾಜಕಾರಣ ಸ್ಥಾನ ಪಡೆದುಕೊಂಡಿದೆ. ಕಳೆದ ವಾರವಷ್ಟೇ ಪಂಜಾಬ್ ಮುಖ್ಯಮಂತ್ರಿ ಜಲಿಯನ್ ವಾಲಾಬಾಗ್ ಸೆಂಟೆನರಿ ಸ್ಮಾರಕ ಉದ್ಯಾನವನ ಉದ್ಘಾಟಿಸಿದ್ದರು. ಎರಡನೇ ಸ್ಮಾರಕವಾಗಿ, ಗುರುತು ಇರದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ಇದನ್ನು ನಿರ್ಮಿಸಲಾಗಿತ್ತು. ಅಂದರೆ, ಮೂಲ ಸ್ಮಾರಕವನ್ನು ಗುರುತಿಸಲ್ಪಟ್ಟ ಹೋರಾಟಗಾರರಿಗೆ ನಿರ್ಮಿಸಲಾಗಿದೆ ಎಂದು ಹೇಳಲಾಗಿತ್ತು. ಈ ಎರಡನೇ ಸ್ಮಾರಕವನ್ನು 1.5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಇದೀಗ, ಪ್ರಧಾನಿ ಮೋದಿ ನವೀಕರಣಗೊಂಡ ಜಲಿಯನ್ ವಾಲಾಬಾಗ್ ಸ್ಮಾರಕವನ್ನು ವರ್ಚುವಲ್ ವಿಧಾನದ ಮೂಲಕ ಉದ್ಘಾಟಿಸಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ರಾಜ್ಯಪಾಲ ವಿ.ಪಿ ಸಿಂಗ್ ಹಾಗೂ ರಾಜ್ಯದ ವಿವಿಧ ಸಂಸದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹತ್ಯಾಕಾಂಡದಲ್ಲಿ ಮೃತರಾದವರ ಕುಟುಂಬಸ್ಥರು ಕೂಡ ಸಮಾರಂಭದಲ್ಲಿ ಹಾಜರಿದ್ದರು. ದೇಶಕ್ಕಾಗಿ ಬಲಿದಾನಗೈದವರಿಗೆ ಮೌನಾಚರಣೆಯ ಮೂಲಕ ನಮನ ಸಲ್ಲಿಸಲಾಯಿತು.

ಇದನ್ನೂ ಓದಿ: ಈ ಸ್ಮಾರಕ ಇಡೀ ವಿಶ್ವಕ್ಕೆ ಸ್ಫೂರ್ತಿ; ಜಲಿಯನ್​ ವಾಲಾಬಾಗ್​ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು

ಜಲಿಯನ್​ವಾಲಾ ಬಾಗ್ ಹತ್ಯಾಕಾಂಡಕ್ಕೆ 102 ವರ್ಷ; ಪಂಬಾಬ್​ನಲ್ಲಿ ಸುಗ್ಗಿಯ ದಿನವೇ ನಡೆದಿತ್ತು ಮಾರಣಹೋಮ