ಮಂಗಳೂರು: ಕೇರಳದ ಕೊಚ್ಚಿನ್ನಲ್ಲಿ ದೇಶೀ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ಮೋದಿ ಅವರಿದ್ದ ವಿಮಾನವು ಬಜಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಏರ್ಪೋರ್ಟ್ನಿಂದ ಕುಳೂರು ಹೆಲಿಪ್ಯಾಡ್ನತ್ತ ಸೇನಾ ಹೆಲಿಕಾಪ್ಟರ್ನಲ್ಲಿ ಮೋದಿ ಹೊರಟರು. ಮಂಗಳೂರಿನ ಬಂಗ್ರಕೂಳೂರಿನಲ್ಲಿ ಬಿಜೆಪಿ ಬೃಹತ್ ಕಾರ್ಯಕ್ರಮ ಆಯೋಜಿಸಿದೆ. ಸಮಾವೇಶ ಸ್ಥಳದಲ್ಲಿ ಕೇಸರಿ ಶಾಲು ಬೀಸುತ್ತಾ ಮೋದಿ ಪರ ಘೋಷಣೆ ಕೂಗುತ್ತಾ ಯುವತಿಯರು ಡಾನ್ಸ್ ಮಾಡುತ್ತಿದ್ದಾರೆ. ಕೇಸರಿ ರುಮಾಲು ಧರಿಸಿರುವ ಮಹಿಳಾ ಬಿಜೆಪಿ ಕಾರ್ಯಕರ್ತೆಯರು ಮಿಂಚುತ್ತಿದ್ದಾರೆ. ಭರ್ತಿಯಾಗಿರುವ ಗೋಲ್ಡ್ ಫಿಂಚ್ ಸಿಟಿ ಮೈದಾನವು ಈಗಾಗಲೇ ಭರ್ತಿಯಾಗಿದೆ. ಮೈದಾನದತ್ತ ಇನ್ನೂ ಜನಸ್ತೋಮ ಹರಿದು ಬರುತ್ತಲೇ ಇದೆ. ಮೋದಿ ಸಮಾವೇಶಕ್ಕೆ ಪದ್ಮಶ್ರೀ ಹರೇಕಳ ಹಾಜಬ್ಬ ಸಹ ಬಂದಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲೆಂದು ಎನ್ಎಂಪಿಎ ಹೆಲಿಪ್ಯಾಡ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕಾಯುತ್ತಿದ್ದಾರೆ.
ಮಂಗಳೂರಿಗೆ ಪ್ರಧಾನಿ ಬಂದು ವಾಪಾಸ್ ಹೋಗುವವರೆಗೆ ಪೊಲೀಸ್ ಭದ್ರತೆ ಬಿಗಿಯಾಗಿ ಇರಲಿದೆ. ಡಿಜಿಪಿ ಮತ್ತು ಎಡಿಜಿಪಿ, ಮಂಗಳೂರು ಕಮಿಷನರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. 100 ಜನ ಉನ್ನತ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸುಮಾರು 2,000 ಸಾವಿರ ಸಿವಿಲ್ ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ. ಕೆಎಸ್ಆರ್ಪಿ, ಸಿಎಆರ್, ಎಎನ್ಎಫ್, ಆರ್ಎಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್ಡಿ ಹಾಗೂ ಗರುಡ ಪಡೆಯ ಸುಮಾರು ಮೂರು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಮಾನ ನಿಲ್ದಾಣದ ಸಮೀಪದ ಕೆಂಜಾರ್ ಬಳಿ ಟ್ರಾಫಿಕ್ ಜಾಮ್ ಆಗಿದೆ. ಕಳೆದ ಅರ್ಧ ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿವೆ. ಸುಮಾರು ಒಂದು ಕಿಲೋಮೀಟರ್ಗೂ ಹೆಚ್ಚು ದೂರ ಸಂಚಾರ ದಟ್ಟಣೆಯಾಗಿದೆ. ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದಾರೆ. ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು ಮತ್ತು ಪ್ರಯಾಣಿಕರು ಹೈರಾಣಾಗಿದ್ದಾರೆ.
ಬಸ್ಗಳ ಮೂಲಕ ಸಮಾವೇಶಕ್ಕೆ ಜನರು ಸಾಗಿ ಬರುತ್ತಿದ್ದಾರೆ. ಇದರ ಜೊತೆಗೆ ಕೊಟ್ಟಾರ ಚೌಕಿ ಫ್ಲೈ ಓವರ್ ಮತ್ತು ಕೂಳೂರು ಕಡೆಯಿಂದ ಕಾಲ್ನಡಿಗೆ ಮೂಲಕವೂ ಜನರು ಬರುತ್ತಿದ್ದಾರೆ. ನರೇಂದ್ರ ಮೋದಿ ಮತ್ತು ಸಾವರ್ಕರ್ ಪರ ಘೋಷಣೆಗಳು ಮೊಳಗುತ್ತಿವೆ. ಬಿಜೆಪಿ, ಭಗವಾಧ್ವಜ ಮತ್ತು ಹನುಮಾನ್ ಧ್ವಜ ಹಿಡಿದಿರುವ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಮೋದಿ ಊಟದ ಮೆನು ಹೀಗಿದೆ
ನರೇಂದ್ರ ಮೋದಿ ಅವರಿಗಾಗಿ ಓಶಿಯನ್ ಪರ್ಲ್ ಹೋಟೆಲ್ನಿಂದ ಮಧ್ಯಾಹ್ನದ ಊಟ ತರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಮೆನು ಮೇಲೆ ಪ್ಯೂರ್ ವೆಜಿಟೇರಿಯನ್ ಎಂದು ನಮೂದಿಸಲಾಗಿದೆ. ಮಿಕ್ಸ್ ವೆಜಿಟೇಬಲ್ಸ್ ಸೂಪ್, ತವಾ ಮೇಡ್ ರೋಟಿ, ಪ್ಲೈನ್ ಮತ್ತು ಜೀರಾ ರೈಸ್, ದಾಲ್, ಎರಡು ಸಬ್ಜಿ, ಲೆಸ್ ಸ್ಪೈಸಿ ಮಸಾಲಾ (ಲೆಸ್ ಆಯಿಲ್), ಪ್ಲೈನ್ ಮೊಸರು, ನಿಂಬೆಹಣ್ಣು, ಮಿಕ್ಸಡ್ ಕಟ್ ಫ್ರೂಟ್ಸ್ ಮೆನುವಿನಲ್ಲಿದೆ.
Published On - 2:11 pm, Fri, 2 September 22