ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣದಡಿ ಮುರುಘಾ ಮಠದ ಶ್ರೀಗಳು (Murugha muth swamyji) ಜೈಲುಪಾಲಾಗಿದ್ದು, ಪ್ರಕರಣದ 2ನೇ ಆರೋಪಿ ಮಹಿಳಾ ವಾರ್ಡನ್ಳನ್ನು (Lady warden) ಸೆ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. ಶಿವಮೊಗ್ಗ ಜೈಲಿನಲ್ಲಿದ್ದ ಮಹಿಳಾ ವಾರ್ಡನ್ಳನ್ನು ಚಿತ್ರದುರ್ಗ ಪೊಲೀಸರು ಏಳು ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಪೊಲೀಸರು ಮಹಿಳಾ ವಾರ್ಡನ್ಳನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆ ನಡೆಸಲಿದ್ದಾರೆ.
5ನೇ ಆರೋಪಿ ಗಂಗಾಧರಯ್ಯ ಪೊಲೀಸರಿಗೆ ಶರಣು
ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮುರಾಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪ್ರಸ್ತುತ ಜೈಲಿನಲ್ಲಿದ್ದಾರೆ. ಈ ಪ್ರಕರಣದ 5ನೇ (A5) ಆರೋಪಿಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ (ಸೆ 6) ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರದುರ್ಗದ ಡಿವೈಎಸ್ಪಿ ಕಚೇರಿಯಲ್ಲಿ ಗಂಗಾಧರಯ್ಯ ವಿಚಾರಣೆ ನಡೆಸಿ, ತನಿಖಾಧಿಕಾರಿ ಸೂಚಿಸಿದಾಗ ಬರಲು ಸೂಚನೆ ನೀಡಿದ್ದಾರೆ.
ಕಾರಾಗೃಹದಲ್ಲಿ ವಾಕಿಂಗ್ಗೆ ಅವಕಾಶ ಕೋರಿದ ಸ್ವಾಮೀಜಿ
ಫೋಕ್ಸೋ ಪ್ರಕರಣದ ಪ್ರಮುಖ ಆರೋಪಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಲಯವು ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಆರೋಪಿ ಮುರುಘಾಶ್ರೀ ಇಂದು ಬೆಳಿಗ್ಗೆ 6ಕ್ಕೆ ಎದ್ದು ಕುಳಿತರು. ಪ್ರತಿದಿನ ಬೆಳಗ್ಗೆ 6ಕ್ಕೆ ವಾಕಿಂಗ್ ಮಾಡುತ್ತಿದ್ದೆ. ಅದೇ ರೂಢಿಯ ಮೇಲೆ ಎದ್ದಿದ್ದೇನೆ ಎಂದು ಕಾರಾಗೃಹ ಸಿಬ್ಬಂದಿಗೆ ತಿಳಿಸಿದರು. ಈ ವೇಳೆ ಸಿಬ್ಬಂದಿಯು ಕಾರಾಗೃಹದಲ್ಲಿ ವಾಕಿಂಗ್ ಮಾಡಲು ಅವಕಾಶ ಇಲ್ಲ ಎಂದು ತಿಳಿಸಿದರು. ನಿನ್ನೆ ಮಧ್ಯಾಹ್ನ 12 ಗಂಟೆಯಿಂದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಜೈಲಿನಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Tue, 6 September 22