ಚಿತ್ರದುರ್ಗ: ಸಿರಿಗೆರೆ ಶ್ರೀಗಳ ಪೀಠ ತ್ಯಾಗಕ್ಕೆ ಭಕ್ತರ ಒತ್ತಾಯ, ಏನಿದು ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ

|

Updated on: Aug 05, 2024 | 11:16 AM

ಚಿತ್ರದುರ್ಗದ ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠತ್ಯಾಗ ಮಾಡಬೇಕೆಂಬ ಆಗ್ರಹ ಇದೀಗ ಜೋರಾಗಿದೆ. ‘ತರಬಾಳು’ ಕಾರ್ಯಕ್ರಮದ ಮೂಲಕವೇ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಸ್ವಾಮೀಜಿಯ ಪೀಠತ್ಯಾಗ ಚರ್ಚೆ ಈಗ ಮುನ್ನೆಲೆಗೆ ಬಂದಿದ್ದೇಕೆ? ಸದ್ಯ ಏನೇನು ಬೆಳವಣಿಗೆಗಳಾಗಿವೆ ಎಂಬ ಮಾಹಿತಿ ಇಲ್ಲಿದೆ.

ಚಿತ್ರದುರ್ಗ: ಸಿರಿಗೆರೆ ಶ್ರೀಗಳ ಪೀಠ ತ್ಯಾಗಕ್ಕೆ ಭಕ್ತರ ಒತ್ತಾಯ, ಏನಿದು ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
Follow us on

ಚಿತ್ರದುರ್ಗ, ಆಗಸ್ಟ್​​ 05: ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ (Sirigere Shivamurthy Shivacharya Swamiji) ಅವರು ಪೀಠ ತ್ಯಾಗ ಮಾಡಿ, ಉತ್ತರಾಧಿಕರಿಯನ್ನು ನೇಮಕ ಮಾಡುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಶ್ರೀಗಳ ಪೀಠತ್ಯಾಗ, ಉತ್ತರಾಧಿಕಾರಿ ನೇಮಕ ಮತ್ತು ಹಿರಿಯ ಗುರುಗಳ ಅವಧಿಯಲ್ಲಿ ರೂಪಿತವಾದ ಬೈಲಾ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ರವಿವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ (Shamanur Shivashankarappa) ಅಧ್ಯಕ್ಷತೆಯಲ್ಲಿ ಸಾದರ ಲಿಂಗಾಯತ ಸಮಾಜದ ಮುಖಂಡರ ಸಭೆ ನಡೆಯಿತು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ನಿವೃತ್ತಿ ಘೋಷಿಸಿ ಉತ್ತರಾಧಿಕಾರಿ ಘೋಷಣೆ ಮಾಡಬೇಕು. ಶ್ರೀಮಠದ ಏಕವ್ಯಕ್ತಿ ಡೀಡ್​ ರದ್ದುಪಡಿಸಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಸಾದರ ಲಿಂಗಾಯತ ಸಮಾಜ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸ್ವಾಮೀಜಿಗಳ ಪೀಠತ್ಯಾಗಕ್ಕೆ ಆಗ್ರಹ ಏಕೆ?

ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಂದ ರೂಪಿತವಾದ ನಿಯಮಗಳ ಪ್ರಕಾರ 60 ವರ್ಷದ ನಂತರ ಪೀಠ ತ್ಯಾಗ ಮಾಡಿ ಉತ್ತರಾಧಿಕಾರಿ ನೇಮಿಸಬೇಕು. ಆದರೆ, ಡಾ. ಶಿವಮೂರ್ತಿ ಶ್ರೀಗಳಿಗೆ 78 ವರ್ಷ ವಯಸ್ಸಾಗಿದೆ. ಹಿರಿಯ ಗುರುಗಳ ನಿಯಮ ಪಾಲನೆಯಾಗಿಲ್ಲ ಎಂಬುವುದು ಭಕ್ತರ ಅಸಮಾಧನಕ್ಕೆ ಕಾರಣವಾಗಿದೆ.

ಏಕವ್ಯಕ್ತಿ ಡೀಡ್ ರದ್ದು ಯಾಕೆ?

ಡಾ. ಶಿವಮೂರ್ತ ಶಿವಾಚಾರ್ಯ ಸ್ವಾಮೀಜಿ 30 ವರ್ಷಗಳ ಹಿಂದೆ ಟ್ರಸ್ಟ್​ ರಚಿಸಿ ಏಕ ವ್ಯಕ್ತಿ ಡೀಡ್​ ರಚಿಸಿದ್ದಾರೆ. ಆದರೆ ಇದು ಮಠದ ನಿಯಮದ ಪ್ರಕಾರ ವಿರುದ್ಧವಾದದು ಭಕ್ತರ ತೀರ್ನಾನವೇ ಅಂತಿಮ ಆಗಬೇಕು ಎಂಬುವುದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಪೀಠತ್ಯಾಗ ಚರ್ಚೆ ಈಗ ಮುನ್ನಲೆಗೆ ಬಂದಿರುವುದು ಏಕೆ?

ಡಾ. ಶಿವಮೂರ್ತ ಶಿವಾಚಾರ್ಯ ಸ್ವಾಮೀಜಿ 30 ವರ್ಷಗಳ ಹಿಂದೆ ಟ್ರಸ್ಟ್​ ರಚಿಸಿ ಏಕ ವ್ಯಕ್ತಿ ಡೀಡ್​ ರಚಿಸಿದ್ದು, ಭಕ್ತರಿಗೆ ಈಗ ಗೊತ್ತಾಗಿದೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಇದು ಸಹಜವಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾಮೀಜಿಗಳ ಪೀಠ ತ್ಯಾಗ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಸಭೆಗಳು ನಡೆಯುತ್ತಿದ್ದವು. ಆದರೆ, ಮುನ್ನಲೆಗೆ ಬಂದಿರಲಿಲ್ಲ. ಇದೀಗ ಶಾಸಕ ಶಾಮನೂರು ಶಿವಶಂಕರಪ್ಪ ಪ್ರವೇಶದಿಂದ ಈ ವಿಚಾರ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜನ್ಮದಿನ

ದಶಕದ ಹಿಂದೆಯೇ ಪೀಠತ್ಯಾಗಕ್ಕೆ ನಿರ್ಧರಿಸಿದ್ದ ಸ್ವಾಮೀಜಿ

ಡಾ. ಶಿವಮೂರ್ತ ಶಿವಾಚಾರ್ಯ ಸ್ವಾಮೀಜಿ ಅವರು ದಶಕದ ಹಿಂದೆಯೇ ಬಹಿರಂಗ ಸಭೆಯಲ್ಲಿ ಪೀಠತ್ಯಾಗ ಮಾಡುವುದಾಗಿ ಹೇಳಿದ್ದರು. ಆದರೆ, ಭಕ್ತರು ಇಂತಹ ನಿರ್ಧಾರ ಕೈಗೊಳ್ಳದಿರಿ. ನೀವೇ ಮುಂದುವರೆಯಬೇಕು ಎಂಬ ಒತ್ತಾಯದ ಮೇರೆಗೆ ಸ್ವಾಮೀಜಿ ಅವರು ಪೀಠದಲ್ಲಿ ಮುಂದುವರೆದಿದ್ದಾರೆ. ಅಲ್ಲದೆ, ಉತ್ತರಾಧಿಕಾರಿ ನೇಮಕ ವಿಚಾರವನ್ನು ಭಕ್ತರಿಗೆ ಬಿಟ್ಟಿದ್ದಾರೆ. ಉತ್ತರಾಧಿಕಾರಿಯನ್ನು ಭಕ್ತರೆ ನೇಮಕ ಮಾಡಿ ಅಂತ ಸ್ವಾಮೀಜಿ ಹೇಳಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಮುಂದೇನಾಗಲಿದೆ?

ಪೀಠತ್ಯಾಗ ಮಾಡಿ, ಉತ್ತರಾಧಿಕಾರಿ ನೇಮಕ ಮಾಡಬೇಕು ಮತ್ತು ಹಿರಿಯ ಗುರುಗಳ ಅವಧಿಯಲ್ಲಿ ರೂಪಿತವಾದ ಬೈಲಾ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದ ಸಾದರ ಲಿಂಗಾಯತ ಸಮಾಜದ ಮುಖಂಡರು ಆ.18 ರಂದು ಡಾ. ಶಿವಮೂರ್ತಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ.

ಸಭೆಗೆ ವಿರೋಧ

ದಾವಣಗೆರೆಯ ಅಪೂರ್ವ ರೆಸಾರ್ಟ್​​ನಲ್ಲಿ ನಡೆದ ಸಮಾಲೋಚನ ಸಭೆಯನ್ನು ವಿರೋಧಿಸಿ ತರಳಬಾಳು ಮಠದ ಭಕ್ತರು ಇಂದು (ಆ.05) ಡಾ. ಶಿವಮೂರ್ತ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿಯಾಗಿ ಸಭೆ ಮಾಡಲಿದ್ದಾರೆ. ಈ ಸಭೆಗೆ ಮಠದ ಎಲ್ಲ ಭಕ್ತರು ಆಗಮಿಸುವಂತೆ ಮನವಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ