ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜನ್ಮದಿನ
ಚಿತ್ರದುರ್ಗ ಜಿಲ್ಲೆಯಲ್ಲಿನ ಸಿರಿಗೆರೆಯ ತರಳಬಾಳು ಬ್ರಹನ್ಮಠ ಕೆವಲ ರಾಜ್ಯವಲ್ಲದೆ, ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿದೆ. ಬೃಹನ್ಮಠದ 21ನೇ ಪೀಠಾಧಿಕಾರಿಯಾಗಿರುವ ಡಾ. ಶಿವಮೂರ್ತಿ ಸ್ವಾಮೀಜಿಯವರ ಜನ್ಮದಿನ ಇಂದು. ಸ್ವಾಮೀಜಿಯವರ ಜನ್ಮದಿನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶುಭ ಹಾರೈಸಿದ್ದಾರೆ.
ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿನ ಸಿರಿಗೆರೆಯ (Sirigere) ತರಳಬಾಳು ಬ್ರಹನ್ಮಠ ಕೇವಲ ರಾಜ್ಯವಲ್ಲದೆ, ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿದೆ. ಈ ಮಠವು ಬಹಳ ಪಾರಂಪರಿಕ ಕಾಲದಿಂದಲೇ ಆಸ್ಥಿತ್ವಕ್ಕೆ ಬಂದಿದೆ. ಈ ಮಠವನ್ನು 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲಿನರಾದ ಶ್ರೇಷ್ಠ ಸನ್ಯಾಸಿಯಾದ “ಮರುಳಸಿದ್ದ”ರು ಸ್ಥಾಪಿಸಿ, ‘ತರಳಬಾಳು’ ಎಂದು ಆರ್ಶೀವದಿಸಿದ್ದಾರೆ. ತರಳಬಾಳು ಹುಣ್ಣಿಮೆ ಮಹೋತ್ಸವ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ತರಳಬಾಳ ಬ್ರಹನ್ಮಠವನ್ನು ಅನೇಕ ಭಕ್ತರು ನ್ಯಾಯಪೀಠ ಎಂದೂ ಕರೆಯುತ್ತಾರೆ. ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಯಾಗಿರುವ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ (Shivamurthy Shivacharya Swamiji) ಜನ್ಮದಿನ ಇಂದು. ಸ್ವಾಮೀಜಿ ಅವರ ಜನ್ಮದಿನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶುಭ ಹಾರೈಸಿದ್ದಾರೆ.
ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಯಾಗಿರುವ ಡಾ. ಶಿವಮೂರ್ತಿ ಸ್ವಾಮೀಜಿಯವರು ಹುಟ್ಟಿದ್ದು ಶಿವಮೊಗ್ಗದ ಜಿಲ್ಲೆಯ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಸ್ಥಳದ ಬಳಿಯ ಸೂಗೂರು ಗ್ರಾಮದಲ್ಲಿ. ಇವರ ಪೂರ್ವಾಶ್ರಮದ ಹೆಸರು ‘ಶಿವಮೂರ್ತಿ’. ಬಾಲ್ಯದಲ್ಲಿಯೇ ಸಂಗೀತದ ಆಸಕ್ತಿ ಹೊಂದಿದ್ದ ಬಾಲಕ ಶಿವಮೂರ್ತಿ, ವಿಜ್ಞಾನ ವಿಷಯದಲ್ಲಿಯೂ ಮುಂದು. ವಿಜ್ಞಾನದ ಪದವೀಧರರಾಗಿ, ನಂತರ, 1976ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಓದಿ, ‘ಎ ಕ್ರಿಟಿಕಲ್ ಸ್ಟಡಿ ಆಫ್ ಸೂತ್ರ ಸಂಹಿತಾ’ ಕುರಿತ ಸಂಸ್ಕೃತ ಅಧ್ಯಯನದಲ್ಲಿ ಡಾಕ್ಟರೇಟ್ ಪಡೆದರು. 1977-79ರ ಅವಧಿಯಲ್ಲಿ ಆಸ್ಟ್ರಿಯಾ ದೇಶದ ವಿಯೆನ್ನಾ ವಿಶ್ವವಿದ್ಯಾಲಯದ ಇಂಡಾಲಜಿ ಸಂಸ್ಥೆಯಲ್ಲಿ ಡಾಕ್ಟರೇಟ್ ಪಡೆದರು.
12ನೇ ಶತಮಾನದ ಮಹಾನ್ ಸಂತರಾದ ಶ್ರೀ ಮರುಳಸಿದ್ಧರು ಸ್ಥಾಪಿಸಿದ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ 21ನೇ ಪೀಠಾಧಿಕಾರಿಯಾಗಿ 1979ರಲ್ಲಿ ಡಾ. ಶಿವಮೂರ್ತಿಯವರಿಗೆ ಪಟ್ಟಾಭಿಷೇಕವಾಯಿತು. ಅಂದಿನಿಂದ ಅವರು, ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ಹೆಸರಿನಿಂದ ಧರ್ಮಪೀಠದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ.
ಸ್ವಾಮೀಜಿಯವರು ಶ್ರೀ ತರಳಬಾಳು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯು ಶಿಶುವಿಹಾರದಿಂದ ತಾಂತ್ರಿಕ ಮಹಾ ವಿದ್ಯಾಲಯಗಳವರೆಗೆ ಸುಮಾರು 200 ಶೈಕ್ಷಣಿಕ ಅಂಗಸಂಸ್ಥೆಗಳನ್ನು ಹೊಂದಿದ್ದು, ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾದಾನದ ಮಹತ್ತದ ಉದ್ದೇಶದಿಂದ ಜ್ಞಾನದಾಸೋಹದ ಪರಂಪರೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸುಮಾರು 40 ಸಾವಿರ ವಿದ್ಯಾರ್ಥಿಗಳು ಈ ಅಂಗಸಂಸ್ಥೆಗಳಲ್ಲಿ ಅಧ್ಯಯನ ನಿರತರಾಗಿದ್ದಾರೆ.
ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿರುವವರು ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು.
ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದ ಯಾವುದೇ ಸ್ವಯಂಸೇವಾ ಅಥವಾ ಧಾರ್ಮಿಕ ಸಂಸ್ಥೆಗಳು ಕಂಪ್ಯೂಟರ್ ಕುರಿತು ಆಲೋಚಿಸುವ ಮುನ್ನವೇ ತಮ್ಮ ಬೃಹನ್ಮಠದ ಕಾರ್ಯಚಟುವಟಿಕೆಗಳಿಗೆ 1984ರಲ್ಲಿಯೇ ಕಂಪ್ಯೂಟರನ್ನು ಬಳಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಪಾಣಿನಿಯ ಸಂಸ್ಕ್ರತ ಸ್ತೂತ್ರಗಳನ್ನು ಆಧರಿಸಿದ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶ ಮತ್ತು ೧೨ನೇ ಶತಮಾನದ ವಚನ ಸಾಹಿತ್ಯ ಕುರಿತು ‘ಗಣಕ ವಚನ ಸಂಪುಟ’ ತಂತ್ರಾಂಶವನ್ನು ಸಿದ್ದಪಡಿಸಿದ್ದಾರೆ.
ಭಾರತೀಯ ಸಾಹಿತ್ಯ ಪ್ರಕಾರದಲ್ಲಿಯೇ ವಿಶಿಷ್ಟ ಸ್ಥಾನವನ್ನು ಹೊಂದಿರುವ ವಚನ ಸಾಹಿತ್ಯದ ಪ್ರಸಾರದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಸ್ವಾಮೀಜಿಯವರು ಈ ವಚನ ಸಂಪುಟದಲ್ಲಿ ಬಸವಣ್ಣನವರ 1426 ವಚನಗಳು ಮತ್ತು ಇತರ ಶರಣರ 18 ಸಾವಿರ ವಚನಗಳನ್ನು ಇದರಲ್ಲಿ ಅಳವಡಿಸಿದ್ದಾರೆ. ಕಂಪ್ಯೂಟರ್ ತಂತ್ರಾಂಶ ಗುಣಲಕ್ಷಣಗಳಾದ ಹುಡುಕುವುದು ಮತ್ತು ಸೂಚೀಕರಣ ಹಾಗೂ ವಿಂಗಡಣೆಯ ಸೌಲಭ್ಯಗಳನ್ನು ಬಳಸಿ ವಿವಿಧ ವಿಷಯ ಕುರಿತು, ವಿವಿಧ ರಚನೆಕಾರರ ವಚನಗಳನ್ನು ಸುಲಭವಾಗಿ ಹುಡುಕಿ, ವಿಂಗಡಿಸಿ ಪತ್ತೆಮಾಡಿ, ಅವುಗಳನ್ನು ಓದಿಕೊಳ್ಳಬಹುದು, ಕನ್ನಡೇತರರಿಗೆ ಈ ವಚನ ಸಾಹಿತ್ಯದ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಈ ಎಲ್ಲಾ ವಚನಗಳ ಅರ್ಥವನ್ನು ಇಂಗ್ಲಿಷ್ ಭಾಷೆಯಲ್ಲಿಯೂ ಸಹ ನೀಡಲಾಗಿದೆ.
ತರಳಬಾಳು ಬೃಹನ್ಮಠದ ವಾರ್ಷಿಕ ಆಚರಣೆಯಾದ ತರಳಬಾಳು ಹುಣ್ಣಿಮೆ ಮಹೋತ್ಸವನ್ನು ಪ್ರತಿವರ್ಷ ತಪ್ಪದೆ ಸ್ವಾಮೀಜಿ ನಡೆಸುಕೊಂಡು ಬಂದಿದ್ದಾರೆ. ಈ ಮಹೋತ್ಸವಕ್ಕೆ ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ತಜ್ಞರನ್ನು ಆಹ್ವಾನಿಸಿ, ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ