ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಬಸವರಾಜ್ (33) ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದು, ಇತನನ್ನ ಜನವರಿ 13ರ ರಾತ್ರಿ ಸ್ವತಃ ಆತನ ಅಕ್ಕ ಮತ್ತು ಭಾವ ಸೇರಿ ಕೊಲೆ ಮಾಡಿದ್ದಾರೆ. ಗ್ರಾಮದಲ್ಲಿಯೇ ಫೋಟೋ ಸ್ಟುಡಿಯೋ ನಡೆಸಿಕೊಂಡಿದ್ದ ಬಸವರಾಜ್ ತನ್ನ ಪತ್ನಿ ಹೆರಿಗೆಗೆಂದು ತವರು ಮನೆಗೆ ತೆರಳಿದ್ದನು. ಈ ಸಂದರ್ಭದಲ್ಲಿ ಹಿರಿಯೂರಿನ ಪಿಲಾಲಿ ಗ್ರಾಮದಲ್ಲಿದ್ದ ತನ್ನ ಅಕ್ಕ ರಾಧಾಮ್ಮ ಮತ್ತು ಮಕ್ಕಳನ್ನು ಕರೆಸಿಕೊಂಡಿದ್ದನು. ಆದರೆ ಎರಡು ವರ್ಷ ಕಳೆದರೂ ಅಕ್ಕ ರಾಧಮ್ಮಳನ್ನ ಪತಿಯ ಊರಿಗೆ ಕಳಿಸಿರಲಿಲ್ಲ. ಪತಿ ತಿಮ್ಮರಾಜು ತನ್ನ ಪತ್ನಿಯನ್ನು ಊರಿಗೆ ಕಳುಹಿಸು ಎಂದು ಕೇಳಿದಾಗ ಬಸವರಾಜ್ ಗಲಾಟೆ ಮಾಡಿದ್ದನು. ಈ ಹಿಂದೆ ಪಡೆದಿದ್ದ ಹಣ ಮತ್ತು ನಿನ್ನ ಪತ್ನಿ ಮತ್ತು ಮಕ್ಕಳನ್ನು ಎರಡು ವರ್ಷದಿಂದ ಮನೆಯಲ್ಲಿಟ್ಟುಕೊಂಡು ನೋಡಿದ ಖರ್ಚು ಸೇರಿ 5ಲಕ್ಷ ರೂಪಾಯಿ ಕೊಟ್ಟು ಕರೆದುಕೊಂಡು ಹೋಗು ಎಂದಿದ್ದನು.
ಅದರಂತೆಯೇ ಹಣ ಕೊಡದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದನಂತೆ. ಹೀಗಾಗಿ ರಾಧಮ್ಮ ಮತ್ತು ಪತಿ ತಿಮ್ಮರಾಜು ಸೇರಿ ಬಸವರಾಜನನ್ನು ಮುಗಿಸಲು ಸ್ಕೆಚ್ ಹಾಕಿದ್ದಾರೆ. ಜ.13ರ ರಾತ್ರಿ ಎಂದಿನಂತೆ ಮನೆಗೆ ಬಂದು ಬೆಡ್ರೂಮಿನಲ್ಲಿ ಮಲಗಿದ್ದ ಬಸವರಾಜ್ನ ರೂಮಿಗೆ ಮದ್ಯ ರಾತ್ರಿ ವೇಳೆ ತೆರಳಿ ಮಾರಕಾಸ್ತ್ರದಿಂದ ಮನಸೋ ಇಚ್ಛೆ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು. ಇನ್ನು ಭೀಕರವಾಗಿ ಹತ್ಯೆ ಮಾಡಿದ್ದನ್ನ ಕಂಡು ಗ್ರಾಮದ ಜನರು, ಮೃತನ ಸಂಬಂಧಿಕರು ಬೆಚ್ಚಿಬಿದ್ದಿದ್ದರು. ಪೊಲೀಸ್ ತನಿಖೆಯಿಂದ ಖುದ್ದು ಅಕ್ಕ ಮತ್ತು ಭಾವನೇ ಕೊಲೆಗಾರರು ಎಂಬ ಅಂಶ ಬಯಲಾಗಿದ್ದು ಮತ್ತಷ್ಟು ಶಾಕ್ ನೀಡಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದು ಮೃತನ ಸಂಬಂಧಿಕರು ಆಗ್ರಹಿಸಿದ್ದು ಇದೀಗ ಇಬ್ಬರೂ ಆರೋಪಿಗಳನ್ನ ಸದ್ಯ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಇದನ್ನೂ ಓದಿ:ಬಿಸಿ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಇಬ್ಬರು ಆರೋಪಿಗಳ ಬಂಧನ
ಒಟ್ಟಾರೆಯಾಗಿ ಹಣದ ವ್ಯವಹಾರ ಎಂಬುದು ಕರಳು ಬಳ್ಳಿ ಎಂಬ ಬಂಧನವನ್ನು ಸಹ ಮರೆಸಿದೆ. ಅಕ್ಕ-ಭಾವನಿಗೆ ನೀಡಿದ ಹಣ ಎಂಬುದನ್ನೂ ಮರೆತು ಬಸವರಾಜ್ ಆವಾಜ್ ಹಾಕಿ ಹಣ ಕೇಳಿದ್ದಾನೆ. ಕೊಲೆ ಬೆದರಿಕೆಯನ್ನೂ ಹಾಕಿದ್ದನಂತೆ. ಆದರೆ ಅಕ್ಕ ಮತ್ತು ಭಾವ ಮಾತ್ರ ಹಣ ಕೇಳಿದವನನ್ನೆ ಹೆಣವನ್ನಾಗಿಸಿ ಅಕ್ಕ-ತಮ್ಮ, ಅಳಿಯ-ಭಾವ ಎಂಬ ಸಂಬಂಧಕ್ಕೆ ಬೆಲೆ ಇಲ್ಲದಂತೆ ಮಾಡಿದ್ದು ಮಾತ್ರ ವಿಪರ್ಯಾಸವೇ ಸರಿ.
ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ