ಇವನೆಂಥಾ ಪಾಪಿ ತಂದೆ: ಹೆತ್ತ ಮಕ್ಕಳನ್ನೂ ಬಿಟ್ಟಿಲ್ಲ ಕಾಮುಕ; ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ

ಹೆತ್ತ ತಂದೆಯೇ ಮದ್ಯದ ಅಮಲಿನಲ್ಲಿ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ಮಾಡಿರುವ ಅಮಾನವೀಯ ಮತ್ತು ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುದ್ದಿ ಕೇಳಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಆರೋಪಿ ಈ ಹಿಂದೆ ತನ್ನ ತಾಯಿ ಮೇಲೂ ಲೈಂಗಿಕ ದೌರ್ಜನ್ಯ ಯತ್ನ ನಡೆಸಿದ್ದ ಎಂಬ ವಿಷಯವೂ ಬಹಿರಂಗವಾಗಿದೆ. ಕಾಮುಕನಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಒತ್ತಾಯ ಕೇಳಿಬಂದಿದ್ದು, ಎಸ್ಪಿ ಕಚೇರಿಗೂ ಮನವಿ ಸಲ್ಲಿಸಲಾಗಿದೆ.

ಇವನೆಂಥಾ ಪಾಪಿ ತಂದೆ: ಹೆತ್ತ ಮಕ್ಕಳನ್ನೂ ಬಿಟ್ಟಿಲ್ಲ ಕಾಮುಕ; ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ
ಪೊಲೀಸ್​​ ಠಾಣೆ
Edited By:

Updated on: Dec 05, 2025 | 6:28 PM

ಚಿತ್ರದುರ್ಗ, ಡಿಸೆಂಬರ್​​ 05: ತಂದೆ ಎಂದರೆ ಮಕ್ಕಳಿನ ಪಾಲಿನ ಮೊದಲ ಹೀರೋ. ಅದರಲ್ಲೂ ಬಹುತೇಕ ಹೆಣ್ಣು ಮಕ್ಕಳಿಗಂತೂ ತಾಯಿಗಿಂತ ಆತನೇ ಅಚ್ಚುಮೆಚ್ಚು. ಆದ್ರೆ ಚಿತ್ರದುರ್ಗದಲ್ಲೊಬ್ಬ ಕೀಚಕ ಈ ಅರ್ಥಕ್ಕೆ ಮಸಿ ಬಳಿದಿದ್ದಾನೆ. ಮದ್ಯದ ಅಮಲಿನಲ್ಲಿ ತನ್ನ ಹೆಣ್ಣುಮಕ್ಕಳ ಮೇಲೆಯೇ ಎರಗಿ ವಿಕೃತಿ ಮೆರೆದಿದ್ದಾನೆ. ಪುತ್ರಿಯರು ಮಾತ್ರವಲ್ಲದೆ ತನ್ನ ಹೆತ್ತ ತಾಯಿಯ ಮೇಲೂ ಈತ ಅಟ್ಟಹಾಸ ತೋರಲು ಮುಂದಾಗಿದ್ದ ಎನ್ನುವ ಆರೋಪವೂ ಕೇಳಿಬಂದಿದೆ.

ಘಟನೆ ಏನು?

ಗಣಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಮಂಜುನಾಥ್​ ತನ್ನ 13 ಮತ್ತು 10 ವರ್ಷದ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಜಮೀನಿಗೆ ಕರೆದೊಯ್ದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಈತನ ನಡೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಕೂಡ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ, ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?

ಮದ್ಯದ ಅಮಲಿನಲ್ಲಿ ಇರುತ್ತಿದ್ದ ಮಂಜುನಾಥ ಈ ಹಿಂದೆ ತನ್ನ ಮೇಲೂ ಲಯಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಈ ವೇಳೆ ತಾನು ಆತನಿಂದ ತಪ್ಪಿಸಿಕೊಂಡಿದ್ದೆ. ಬಳಿಕ ಆ ಮನೆಯನ್ನು ಬಿಟ್ಟು ಬೇರೆಡೆ ಹೋಗಿದ್ದೆ ಎಂದು ಆರೋಪಿಯ ತಾಯಿ ಕೂಡ ಗಂಭೀರ ಆರೋಪ ಮಾಡಿದ್ದಾರೆ. ಆತ ಮಕ್ಕಳಿಗೆ ಏನಾದರೂ ತೊಂದರೆ ಮಾಡಿದ್ರೆ ಎಂಬ ಪ್ರಶ್ನೆಯೂ ತನಗೆ ಬಂದಿತ್ತು. ಆದರೆ, ಅವರಿಬ್ಬರೂ ಅವನದ್ದೇ ಮಕ್ಕಳಾಗಿರುವ ಕಾರಣ ಆತ ಹೀಗೆ ಮಾಡಲ್ಲ ಎಂದು ತಿಳಿದಿದ್ದೆ. ಮಕ್ಕಳನ್ನೂ ಆತ ಓದಲೂ ಕಳುಹಿಸುತ್ತಿರಲಿಲ್ಲ. ಈ ವಿಚಾರವನ್ನು ಅವರು ಟೀಚರ್​​ ಬಳಿಗೂ ಹೇಳಿಕೊಂಡಿದ್ದರಂತೆ. ಇಂತಹ ನೀಚನಿಗೆ ಗಲ್ಲುಶಿಕ್ಷೆ ಆಗಬೇಕು. ಅವನನ್ನು ಬಿಟ್ಟರೆ ಬೇರೆಯವರ ಮಕ್ಕಳಿಗೂ ತೊಂದರೆ ಆಗಬಹುದು. ನಮಗಾದ ತೊಂದರೆ ಬೇರೆಯವರಿಗೆ ಆಗಬಾರದು ಎಂದು ಭಾವುಕರಾಗಿದ್ದಾರೆ.

ಇನ್ನು ಆರೋಪಿ ಮಂಜುನಾಥ್​ ವಿರುದ್ಧ ಕಿಡಿ ಕಾರಿರುವ ಗ್ರಾಮಸ್ಥರು, ತನ್ನ ಮಕ್ಕಳ ಮೇಲೆಯೇ ತಂದೆಯಿಂದ ಅತ್ಯಾಚಾರ ಆಗಿರೋದು ಊರಿಗೇ ಕೆಟ್ಟ ಹೆಸರು. ಗ್ರಾಮದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ.ಬೇರೆ ಹೆಣ್ಣು ಮಕ್ಕಳ ಮೇಲೆ ಮಂಜುನಾಥ್​ ಎಲ್ಲಿಯೂ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಗಳಿಲ್ಲ. ಆದರೆ ತನ್ನ ಮಕ್ಕಳನ್ನೇ ಆತ ಬಿಟ್ಟಿಲ್ಲ. ಶಿಕ್ಷಕರ ಮುಂದೆ ಆ ಹೆಣ್ಣುಮಕ್ಕಳು ವಿಷಯ ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಈತನ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಮಕ್ಕಳ ಮೇಲೆ ವಿಕೃತಿ ಮೆರೆದಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us