ಮೊಬೈಲ್ ಕಳೆದುಕೊಂಡ ಯುವಕ, ಹತ್ತು ದಿನ ಅದನ್ನು ಬಿಟ್ಟಿರಲಾರದೆ ನರಳಿ, ಕೋಟೆನಾಡಿನಲ್ಲಿ ಆತ್ಮಹತ್ಯೆಗೆ ಶರಣಾದ

ಮೊಬೈಲ್ ಗೀಳಿಗೆ ಬಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದ ಯುವಕ ಯಶವಂತ್ ಕೇಳಿದಾಕ್ಷಣ ಅಜ್ಜ-ಅಜ್ಜಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಜೀವವನ್ನೇ ಕಳೆದುಕೊಂಡ ದಾರುಣ ಘಟನೆ ಕೊಳಾಳು ಗ್ರಾಮದಲ್ಲಿ ನಡೆದಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇನ್ನಾದ್ರೂ ಮಕ್ಕಳು ಮತ್ತು ಯುವಕರು ಮೊಬೈಲ್ ಗೀಳಿಗೆ ಬೀಳದಂತೆ ಪೋಷಕರು ಎಚ್ಚರ ವಹಿಸಬೇಕಿದೆ.

ಮೊಬೈಲ್ ಕಳೆದುಕೊಂಡ ಯುವಕ, ಹತ್ತು ದಿನ ಅದನ್ನು ಬಿಟ್ಟಿರಲಾರದೆ ನರಳಿ, ಕೋಟೆನಾಡಿನಲ್ಲಿ ಆತ್ಮಹತ್ಯೆಗೆ ಶರಣಾದ
ಮೊಬೈಲ್ ಕಳೆದುಕೊಂಡ ಯುವಕ ಅದ ಬಿಟ್ಟಿರಲಾರದೆ ಕೋಟೆನಾಡಿನಲ್ಲಿ ಆತ್ಮಹತ್ಯೆಗೆ ಶರಣು
Edited By: ಸಾಧು ಶ್ರೀನಾಥ್​

Updated on: Oct 20, 2023 | 7:10 PM

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಮೊಬೈಲ್ ಗೀಳು ವಿಪರೀತವಾಗಿದೆ. ಮೊಬೈಲ್ ಇಲ್ಲದೆ ಬದುಕಲಾಗದು ಎಂಬ ಸ್ಥಿತಿ ನಿರ್ಮಾಣ ಆಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಮೊಬೈಲ್ ಕಳೆದುಕೊಂಡ ಯುವಕನೋರ್ವ (youth) 10 ದಿನ ಮೊಬೈಲ್ ಬಿಟ್ಟು (mobile) ಇರಲಾಗದೆ ಆತ್ಮಹತ್ಯೆಗೆ ಶರಣಾದ ಘಟನೆ ಕೋಟೆನಾಡಿನಲ್ಲಿ ನಡೆದಿದೆ. ಈ ಕುರಿತು ವರದಿ ಇಲ್ಲಿದೆ. ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಆಳೆತ್ತರ ಬೆಳೆದಿದ್ದ ಮಗ ಮೊಬೈಲ್ ಗೀಳಿಗೆ ಬಲಿ ಆಗಿದ್ದು ಕಂಡು ಕಂಗಾಲಾದ ಪೋಷಕರು. ಮೊಬೈಲ್ ಗಾಗಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಗ್ರಾಮದ ಜನರಿಗೆ ಶಾಕ್. ಹೌದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದ ಯುವಕ ಯಶವಂತ್(20) ಅಕ್ಟೋಬರ್ 8ರಂದು ಚಿತ್ರದುರ್ಗ (chitradurga) ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಬಂದಿದ್ದನು. ಆಗ ತನ್ನ ಬಳಿಯಿರುವ ಸ್ಮಾರ್ಟ್ ಫೋನ್ ಕಳೆದುಕೊಂಡಿದ್ದನು. ಮನೆಗೆ ತೆರಳಿದ ಬಳಿಕ ಅಜ್ಜಿಯ ಬಳಿ (parents) ಹೊಸ ಮೊಬೈಲ್ ಕೊಡಿಸುವಂತೆ ಹಠ ಹಿಡಿದಿದ್ದನು.

ನಿಮ್ಮ ಅಜ್ಜ ನಿಮಗಾಗಿಯೇ ದುಡಿಯುತ್ತಿದ್ದಾರೆ. ಸಾಲ ತೀರಿಸುವುದೇ ದುಸ್ತರ ಆಗಿದೆ. ಈಸಲದ ಈರುಳ್ಳಿ ಬೆಳೆ ಬಂದ ಬಳಿಕ ಮೊಬೈಲ್ ಕೊಡಿಸುತ್ತಾರೆ ಎಂದು ಹೇಳಿದ್ದರು. ಆದ್ರೆ, ಅಜ್ಜನ ಬಳಿ ಮೊಬೈಲ್ ಕೇಳಲು ಹೆದರಿದ ಯಶವಂತ್ ಗೆಳೆಯರ ಜತೆ ಸೇರಿ ಕೂಲಿ ಕೆಲಸಕ್ಕೆ ಹೊರಟಿದ್ದನು. ಅಕ್ಟೋಬರ್ 18ರಂದು ಸಂಜೆ ವೇಳೆ ಮನೆಗೆ ಬಂದಾಗಿ ವಿಷಯ ತಿಳಿದ ಅಜ್ಜ ಯಶವಂತ್ ಮತ್ತು ಸ್ನೇಹಿತರಿಗೆ ಬುದ್ಧಿವಾದ ಹೇಳಿದ್ದರು.
ಮೊದಲೇ ಯಶವಂತನ ತಂದೆ ಸಿದ್ದೇಶ್ ತೀರಿ 17 ವರ್ಷಗಳಾಗಿವೆ. ತಾಯಿ ಕೋಮಲಾ ಹೋಟೆಲ್ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದಾಳೆ.

ಕೂಲಿ ಕೆಲಸಕ್ಕೆಂದು ಯಶವಂತನಿಗೆ ದೂರದೂರಿಗೆ ಕೆಲಸಕ್ಕೆ ಹೋದಾಗ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದರು. ಹೀಗಾಗಿ, ಮೊಬೈಲ್ ಕೊಡಿಸಿಲ್ಲ, ಅಲ್ಲದೆ ಕೂಲಿ ಕೆಲಸಕ್ಕೆ ಹೋಗಲೂ ಬಿಡದೆ ಗೆಳೆಯರೆದುರು ಬೈದಿದ್ದಾರೆಂಬ ಕಾರಣಕ್ಕೆ ಯಶವಂತ ಮನೆಯೊಳಗೆ ಹೋದವನೆ ಕೀಟನಾಶಕ ಸೇವಿಸಿದ್ದಾನೆ. ವಿಷಯ ತಿಳಿದು ಕೂಡಲೇ ಐಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಬಳಿಕ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅಕ್ಟೋಬರ್ 19ರಂದು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮದ್ಯೆ ಅಸುನೀಗಿದ್ದಾನೆ.

ಇದನ್ನೂ ಓದಿ: ಬೆಸಗರಹಳ್ಳಿ -ಮಗನ ಜೊತೆ ಸೇರಿ ವಿಕಲಚೇತನ ಗಂಡನ ಕಥೆ ಮುಗಿಸಿದ ಪತ್ನಿ, ಅಂಥಾ ಕಾರಣವೇನಿತ್ತು?

ಇನ್ನು ವಿಷಯ ತಿಳಿಯುತ್ತಿದ್ದಂತೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರಿಂದ ಪ್ರಕರಣದ ಕುರಿತು ಮಾಹಿತಿ ಪಡೆದಿದ್ದಾರೆ. ಮೊಬೈಲ್ ಗೀಳಿಗೆ ಬಿದ್ದಿದ್ದ ಯಶವಂತ್ ಅಕ್ಟೋಬರ್ 8ರಂದು ಮೊಬೈಲ್ ಕಳೆದುಕೊಂಡಿದ್ದನು. ಆದ್ರೆ, ಮೊಬೈಲ್ ಕಳೆದುಕೊಂಡ 10 ದಿನದಲ್ಲಿ ಅಜ್ಜ ಮೊಬೈಲ್ ಕೊಡಿಸದ ಕಾರಣಕ್ಕೆ ಯಶವಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಒಟ್ಟಾರೆಯಾಗಿ ಮೊಬೈಲ್ ಗೀಳಿಗೆ ಬಿದ್ದ ಯುವಕ ಯಶವಂತ್ ಕೇಳಿದಾಕ್ಷಣ ಅಜ್ಜ-ಅಜ್ಜಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಜೀವವನ್ನೇ ಕಳೆದುಕೊಂಡ ದಾರುಣ ಘಟನೆ ಕೊಳಾಳು ಗ್ರಾಮದಲ್ಲಿ ನಡೆದಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇನ್ನಾದ್ರೂ ಮಕ್ಕಳು ಮತ್ತು ಯುವಕರು ಮೊಬೈಲ್ ಗೀಳಿಗೆ ಬೀಳದಂತೆ ಪೋಷಕರು ಎಚ್ಚರ ವಹಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us