ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿ ಮತ್ತು ಅವರ ಪತ್ನಿ ಬಳಿ 74 ಲಕ್ಷ ರೂ. ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ (CISF) ಅಧಿಕಾರಿ ಬಳಿಯಿದ್ದ ಹಣವನ್ನು ಜಪ್ತಿ ಮಾಡಲಾಗಿದೆ.
ಕೇಂದ್ರ ಸರ್ಕಾರದ ಕಸ್ಟಮ್ಸ್ ವಿಭಾಗದ ಅಧಿಕಾರಿ ಇರ್ಫಾನ್ ಅಹ್ಮದ್ ಹಾಗೂ ಅವರ ಪತ್ನಿ ಬಳಿ CISF ತಂಡ ಪರಿಶೀಲನೆ ನಡೆಸಿದ ವೇಳೆ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಅಚ್ಚರಿಯ ಸಂಗತಿಯೆಂದರೆ, ದಂಪತಿಯ ಬಳಿಯಿದ್ದ ನಗದನ್ನು CISF ತಂಡ ಪರಿಶೀಲನೆ ನಡೆಸುತ್ತಿದ್ದ ವೇಳೆ ಅಧಿಕಾರಿ ಪತ್ನಿ ತಪ್ಪಿಸಿಕೊಳ್ಳಲು ಬಾತ್ರೂಂನಲ್ಲಿ 10 ಲಕ್ಷ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ!
ದುಬಾರಿ ಮೌಲ್ಯದ ಮೊಬೈಲ್, ಆ್ಯಪಲ್ ವಾಚ್ ಜಪ್ತಿ
ಸದ್ಯ, ಪರಿಶೀಲನೆ ವೇಳೆ ದಂಪತಿ ಹತ್ತಿರ 2 ದುಬಾರಿ ಮೌಲ್ಯದ ಮೊಬೈಲ್, ಆ್ಯಪಲ್ ವಾಚ್, ಒಂದು ಸೂಟ್ಕೇಸ್ ಹಾಗೂ ಬ್ಯಾಗ್ನಲ್ಲಿದ್ದ ಒಟ್ಟು 74 ಲಕ್ಷದ 81 ಸಾವಿರದ 500 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಇದೀಗ, IT ಅಧಿಕಾರಿಗಳಿಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.
ಅಂದ ಹಾಗೆ, ಚೆನ್ನೈನಲ್ಲಿರುವ ಕಸ್ಟಮ್ಸ್ ಅಧಿಕಾರಿ ಲಕ್ನೋಗೆ ಬೆಂಗಳೂರು ಮೂಲಕ ತೆರಳುತ್ತಿದ್ದರು. ಈ ನಡುವೆ, ಅಧಿಕಾರಿ ಇರ್ಫಾನ್ ಅಹ್ಮದ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.