ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಬೆಂಗಳೂರು, (ಜುಲೈ 25) : ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಪ್ರತಿ ಮನೆಗೆ ಒಂದು ಲಕ್ಷ ರೂಪಾಯಿನಂತೆ 121 ಕೋಟಿ 53 ಲಕ್ಷ ರೂ.ಸರ್ಕಾರವೇ ಭರಿಸಲು ಒಪ್ಪಿಗೆ ನೀಡಿದೆ. ಇದೊಂದಿಗೆ ಬಿಜೆಪಿ ಸರ್ಕಾರದಲ್ಲಿ ಯೂನಿಟ್ ವೆಚ್ಚ ಹೆಚ್ಚಳಕ್ಕೆ ಒಳಗಾಗಿದ್ದ 12,153 ಕುಟುಂಬಗಳಿಗೆ ಸಿಹಿ ಸುದ್ದಿ ನೀಡಿದ್ದು, ಪ್ರತಿ ಮನೆಗೆ 1 ಲಕ್ಷ ರೂ. ನಂತೆ 121.53 ಕೋಟಿ ರೂ. ಸರ್ಕಾರದಿಂದಲೇ ಭರಿಸಲು ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಇಂದು (ಜುಲೈ 25) ಸಿಎಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಗೆ 2017, ಸೆಪ್ಟೆಂಬರ್ 23 ರಂದು ಅಧಿಸೂಚನೆ ಹೊರಡಿಸಿ ಘಟಕ ವೆಚ್ಚ 6 ಲಕ್ಷ ರೂ. ನಿಗದಿ ಮಾಡಲಾಗಿತ್ತು.
ಕೇಂದ್ರ ಸರ್ಕಾರ 1.50 ಲಕ್ಷ, ರಾಜ್ಯ ಸರ್ಕಾರ ಸಾಮಾನ್ಯ ವರ್ಗಕ್ಕೆ 1.20 ಲಕ್ಷ, ಎಸ್ ಟಿ -ಎಸ್ ಸಿ ವರ್ಗಕ್ಕೆ 2 ಲಕ್ಷ ರೂ. ನಿಗದಿಯಾಗಿತ್ತು. ನಂತರ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರ್ಕಾರದಲ್ಲಿ ಘಟಕ ವೆಚ್ಚ 10 ಲಕ್ಷದ 60 ಸಾವಿರ ರೂ. ನಿಗದಿ ಮಾಡಲಾಗಿತ್ತು. ಇದಕ್ಕೆ 60 ಸಾವಿರ ರೂ. ಜಿಎಸ್ ಟಿ ಸೇರಿ 11 ಲಕ್ಷದ 20 ಸಾವಿರ ರೂ. ಆಗಿತ್ತು. ಇಷ್ಟು ಮೊತ್ತ ಭರಿಸಲು ಕಷ್ಟ ಎಂದು ಫಲಾನುಭವಿಗಳು ಸಚಿವರ ಬಳಿ ಮನವಿ ಮಾಡಿಕೊಂಡಿದ್ದರು. ಇದೀಗ ಸರ್ಕಾರದ ಮಹತ್ವದ ತೀರ್ಮಾನದಿಂದ ಸಬ್ಸಿಡಿ ಹೊರತುಪಡಿಸಿ ಸಾಮಾನ್ಯ ವರ್ಗ 7.50 ಲಕ್ಷ, ಎಸ್ ಸಿ -ಎಸ್ ಟಿ ವರ್ಗ 6.70 ಲಕ್ಷರೂ.ಕಟ್ಟಬೇಕಾಗುತ್ತದೆ. ಇದರಿಂದ 12,153 ಕುಟುಂಬ ಗಳಿಗೆ ಅನುಕೂಲವಾಗಲಿದೆ.
ಈ ಹಿಂದೆ ಕ್ರಮವಾಗಿ 8.50 ಲಕ್ಷ ಹಾಗೂ 7.70 ಲಕ್ಷ ರೂ. ಕಟ್ಟಬೇಕಿತ್ತು. ಈ ತೀರ್ಮಾನ 2020 ರಲ್ಲಿ ಘಟಕ ವೆಚ್ಚ ಹೆಚ್ಚಳ ತೀರ್ಮಾನದ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡಿರುವ 12,153 ಮಂದಿಗೆ ಮಾತ್ರ ಅನ್ವಯವಾಗಲಿದೆ. ಇಂದಿನ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್. ಟಿ. ಸೋಮಶೇಖರ್, ಎಸ್. ಆರ್. ವಿಶ್ವನಾಥ್, ಮಂಜುಳಾ ಲಿಂಬಾವಳಿ, ಎಂ. ಕೃಷ್ಣಪ್ಪ, ಮುನಿರಾಜು,ಶಿವಣ್ಣ ಪಾಲ್ಗೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.