ಬೆಂಗಳೂರು: ಭಾರತದಲ್ಲಿ ಕೊರೊನಾ 4ನೇ ಅಲೆಯ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸುಮಾರು 9 ನಿಮಿಷಗಳ ಕಾಲ ರಾಜ್ಯದ ಕೊವಿಡ್ ಪರಿಸ್ಥಿತಿ ಹಾಗೂ ಕೊರೊನಾ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದರು. ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಕರ್ನಾಟಕದಲ್ಲಿ ಇದುವರೆಗೆ ಶೇ. 98ರಷ್ಟು ಎರಡನೇ ಡೋಸ್ ಹಾಕಲಾಗಿದೆ. ಇನ್ನೂ 10ರಿಂದ 12 ಲಕ್ಷ ಜನರಿಗೆ ಲಸಿಕೆ ನೀಡುವುದು ಬಾಕಿ ಇದೆ. ಶೇ.55ರಷ್ಟು ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಇನ್ನೂ 45% ಬೂಸ್ಟರ್ ಡೋಸ್ ಬಾಕಿ ಇದೆ. ಕೊವಿಡ್ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿದೇಶಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ. ಕೊರೊನಾ ಸೋಂಕು ಇರೋ ದೇಶಗಳಿಂದ ಬಂದವರಿಗೆ ಪ್ರತ್ಯೇಕ ಟೆಸ್ಟ್ ಮಾಡಲಾಗುತ್ತಿದೆ. ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಬೂಸ್ಟರ್ ಡೋಸ್ ನೀಡಲು ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ ಸುಮಾರು 9 ನಿಮಿಷಗಳ ಕಾಲ ಮೋದಿ ಜತೆ ಚರ್ಚಿಸಿದರು.
ಭಾರತದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಹೆಚ್ಚಾಗಿದ್ದು, 4ನೇ ಅಲೆಯ ಭೀತಿ ಹೆಚ್ಚಾಗಿರುವುದರಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಭೆ ನಡೆಸಿದ್ದಾರೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಳ್ಳಬೇಕಿತ್ತು. ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಲು ಸಿದ್ಧತೆ ನಡೆದಿತ್ತು. ಆದರೆ, ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ವಿಮಾನ ಹೊರಡುವುದು ತಡವಾಗಿದ್ದರಿಂದ ಮಂಗಳೂರು ಪ್ರವಾಸವನ್ನು ಮುಂದೂಡಿ, ತಮ್ಮ ಗೃಹ ಕಚೇರಿ ಕೃಷ್ಣಾಗೆ ವಾಪಾಸಾದ ಸಿಎಂ ಬಸವರಾಜ ಬೊಮ್ಮಾಯಿ ನರೇಂದ್ರ ಮೋದಿ ನೃತೃತ್ವದ ಸಭೆಯಲ್ಲಿ ಪಾಲ್ಗೊಂಡರು.
ಇಂದು ನಡೆದ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕೋವಿಡ್ ನಿಯಂತ್ರಣ ಸಂಬಂಧ ಸಮಾಲೋಚನೆ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ನಿಯಮಗಳನ್ನು ದೇಶಾದ್ಯಂತ ಜನತೆ ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಕರೆ ನೀಡಿದರು. ಕೋವಿಡ್ ಟೆಸ್ಟಿಂಗ್, ಟ್ರ್ಯಾಕಿಂಗ್ ಹಾಗೂ ಟ್ರೀಟ್‌ಮೆಂಟ್‌ಗೆ ಹೆಚ್ಚಿನ ಒತ್ತು ನೀಡುವಂತೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಭೇಟಿಗೆ ಪಾಕ್ ನೂತನ ಪ್ರಧಾನಿ ಶೆಹ್ಬಾಝ್ ಷರೀಫ್ ಟೀಕೆ
Published On - 3:29 pm, Wed, 27 April 22